Advertisement

ಬೆಂಕಿಗೂ ಬೆದರದ ಕನ್ನಡತಿಯರು!

12:04 PM Mar 08, 2020 | Suhan S |

ಬೆಂಗಳೂರು: ಸಾಂಪ್ರದಾಯಿಕವಾಗಿ ಪುರುಷರ ಪ್ರಾಬಲ್ಯ ಇರುವ ಅಗ್ನಿಶಾಮಕ ದಳದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಗಮ (ಬಿಐಎಎಲ್‌) ಮಹಿಳೆಯರ ತಂಡವನ್ನು ಕಟ್ಟಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಾರಿಯರ ಹೊಸ ಅಧ್ಯಾಯ ಆರಂಭವಾಗಿದೆ.

Advertisement

ಏಷ್ಯಾ ಖಂಡದ ಯಾವುದೇ ವಿಮಾನ ನಿಲ್ದಾಣದ ಅಗ್ನಿಶಾಮಕ ದಳದಲ್ಲಿ ಮಹಿಳಾ ಸಿಬ್ಬಂದಿ ಇಲ್ಲ. ಇದೇ ಮೊದಲ ಬಾರಿಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಗ್ನಿಶಾಮಕ ದಳದಲ್ಲಿ ಮಹಿಳೆಯರು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಪೈಕಿ 14 ಮಹಿಳೆಯರೂ ಕನ್ನಡಿಗರಾಗಿರುವುದು ಹೆಮ್ಮೆಯ ವಿಷಯ.

ಪ್ರಸ್ತುತ ವಿಮಾನ ನಿಲ್ದಾಣದಲ್ಲಿ 2 ಅಗ್ನಿ ಶಾಮಕ ದಳದ ಠಾಣೆ, 265 ಮಂದಿ ಕೆಲಸ ನಿರ್ವಹಿಸುತ್ತಿದ್ದಾರೆ. 25 ಅಗ್ನಿಶಾಮಕ ವಾಹನಗಳಿವೆ. ತುರ್ತು ಸಂದರ್ಭ ಹಾಗೂ ಅಗ್ನಿ ಅವಘಡ ಸಂಭವಿಸಿದಾಗ ಈ ಪಡೆ ತಕ್ಷಣ ಕಾರ್ಯಪ್ರವೃತ್ತವಾಗುತ್ತದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸೇವೆಗಾಗಿ 2019ರ ಮಾರ್ಚ್‌ನಲ್ಲಿ ರಾಜ್ಯದ ವಿವಿಧೆಡೆಯಿಂದ ಈ 14 ಮಹಿಳೆಯರನ್ನು ಅಗ್ನಿಶಾಮಕ ದಳ (ಎಆರ್‌ಎಫ್ಎಫ್) ಪಡೆಗೆ ಆಯ್ಕೆ ಮಾಡಲಾಗಿತ್ತು. ನಂತರ ಇವರನ್ನು ಕೊಲ್ಕತಾದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಗ್ನಿಶಾಮಕ ತರಬೇತಿ ಕೇಂದ್ರದಲ್ಲಿ ತರಬೇತಿಗೆ ಕಳುಹಿಸಲಾಯಿತು. ಅಲ್ಲಿ ಜೀವ ಉಳಿಸುವ ಕಾಯಕದ ವಿವಿಧ ತಂತ್ರ ಹಾಗೂ ಆ ಸಂದರ್ಭದಲ್ಲಿ ತೋರಬೇಕಾದ ಸಾಹಸ ಮತ್ತು ಚಾಕಚಕ್ಯತೆ ಕಲಿತು ಒಂದು ವರ್ಷದ ಬಳಿಕ ಇವರು ಅಗ್ನಿಶಾಮಕ ಕಾರ್ಯಕ್ಕೆ ಸನ್ನದ್ಧರಾಗಿದ್ದಾರೆ. ಅಗ್ನಿಶಾಮಕ ದಳದಲ್ಲಿ ಕೆಲಸ ನಿರ್ವಹಿಸಲು ಸಾಧ್ಯವೇ ಎಂದು ಕೇಳಿದವರೇ ಹೆಚ್ಚು. ಆದರೆ, ಪ್ರಯತ್ನ ಪಟ್ಟರೆ ಯಶಸ್ಸು ಖಚಿತ.

ಅದರಂತೆ ಪರಿಶ್ರಮದಿಂದ ತರಬೇತಿ ಪಡೆದು ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಬಹುತೇಕ ನಾವೆಲ್ಲರೂ ಸರ್ಕಾರಿ ಶಾಲಾ- ಕಾಲೇಜುಗಳಲ್ಲಿ ವಿದ್ಯಾಭ್ಯಾಸ ನಡೆಸಿದ್ದೇವೆ. ಹೊಸ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸಿದ್ದೇವೆ ಎಂದು ತಂಡದಲ್ಲಿರುವ ದೇವನಹಳ್ಳಿಯ ಸುಮಾ ಹೇಳಿದರು.

ಪುರುಷರೇ ಪ್ರಧಾನವಾಗಿರುವ ಅಗ್ನಿಶಾಮಕ ಕ್ಷೇತ್ರಕ್ಕೂ ಮಹಿಳೆಯರಿಗೆ ಅವಕಾಶ ನೀಡುವ ಮೂಲಕ ಬಿಐಎಎಲ್‌ ಮೆಚ್ಚುಗೆಗೆ ಪಾತ್ರವಾಗಿದೆ. ದೃಢ ಸಂಕಲ್ಪ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಇತರೆ ಮಹಿಳೆಯರಿಗೆ ಇವರು ಸ್ಫೂರ್ತಿ ಆಗಿದ್ದಾರೆ.ಥಾಮಸ್‌ ಆಂಡರ್‌ಸನ್‌, ಬಿಐಎಎಲ್‌ ಮುಖ್ಯ ಕಾರ್ಯಾಚರಣೆ ಅಧಿಕಾರಿ

Advertisement

ನಮ್ಮದು ಬಿಸಿಲು ನಾಡು. ಪತ್ರಿಕೆಗಳಲ್ಲಿ ಸಾಧಕರ ಬಗ್ಗೆ ಓದುವಾಗ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಆಸೆ ಇತ್ತು. ಅದಕ್ಕೆ ಪೂರಕವೆಂಬಂತೆ ಅಗ್ನಿಶಾಮಕ ದಳದಲ್ಲಿ ಕೆಲಸ ನಿರ್ವಹಿಸುವ ಅವಕಾಶ ದೊರೆಯಿತು.ಪ್ರಿಯದರ್ಶಿನಿ ಬಿರಾದಾರ್‌, ಕಲಬುರಗಿ.

50 ಕೆ.ಜಿ. ವ್ಯಕ್ತಿಯನ್ನು ಹೊತ್ತು 35 ಅಡಿ ಎತ್ತರದ ಏಣಿಯಿಂದ ಇಳಿಯುತ್ತಾರೆ! : ಕೊಲ್ಕತ್ತಾದಲ್ಲಿ 4 ತಿಂಗಳ ತರಬೇತಿ ಕಠಿಣವಾಗಿತ್ತು. ಬೆಳಗ್ಗೆ 6 ಗಂಟೆಯಿಂದ ಆರಂಭವಾಗುವ ದಿನಚರಿ ಸಂಜೆ ಮುಕ್ತಾಯವಾಗುತ್ತಿತ್ತು. ದೈಹಿಕ ಸದೃಢತೆ ಕಾಪಾಡಿಕೊಳ್ಳುವುದು, ಜನರ ರಕ್ಷಣೆ ಹೇಗೆ ಮಾಡಬೇಕು ಎಂಬುದನ್ನು ತರಬೇತಿ ನೀಡಲಾಗುತ್ತಿತ್ತು. ಅದರಲ್ಲಿ ಲ್ಯಾಡರ್‌ ಡ್ರಿಲ್‌ ಕೂಡ ಒಂದಾಗಿದ್ದು, ಇದು ಬಹಳ ಕಠಿಣವಾಗಿತ್ತು. 50 ಕೆ.ಜಿ.ಗೂ ಅಧಿಕ ತೂಕವಿರುವ ವ್ಯಕ್ತಿಯನ್ನು ಹೆಗಲ ಮೇಲೆ ಹೊತ್ತುಕೊಂಡು 35 ಅಡಿ ಎತ್ತರದ ಏಣಿಯಿಂದ ಕೆಳಗೆ ಇಳಿಯಬೇಕು. ಆಕಸ್ಮಾತ್‌ ಕೈ ಬಿಟ್ಟರೆ ಹೆಗಲ ಮೇಲಿರುವ ವ್ಯಕ್ತಿ ಸಹಿತ ನಾವು ಕೆಳಗೆ ಬೀಳುತ್ತಿದ್ದೆವು. ಇದು ಮಾತ್ರ 14 ಮಂದಿಯಲ್ಲಿಯೂ ಭಯ ಹುಟ್ಟಿಸಿತ್ತು. ಮೊದಲನೇ ದಿನ ನಿದ್ರೆಯೂ ಬಂದಿರಲಿಲ್ಲ. ಆದರೂ, ಹಿಂಜರಿಯದೇ ಈ ಟಾಸ್ಕ್ ಅನ್ನು ಮುಗಿಸಿದೆವು ಎಂದು ಹಾಸನದ ವನಿತಾ ತರಬೇತಿಯ ಅನುಭವವನ್ನು ಹಂಚಿಕೊಂಡರು.

 

-ಮಂಜುನಾಥ್‌ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next