Advertisement
ಕೇರಳ ಹಾಗೂ ದೆಹಲಿ ಮೂಲದ ಆರೋಪಿಗಳಾದ ಕಮಲ್ ಹಸನ್, ಗೋಹರ್ ಅಜೀಬ್, ಕಪೀಲ್ ಅಖ್ತರ್ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಮೂವರನ್ನೂ ಪ್ರತ್ಯೇಕವಾಗಿ ಕರೆಸಿದ ಎನ್ ಐಎ ನ್ಯಾಯಾಲಯದ ನ್ಯಾಯಾಧೀಶ ಸಿದ್ದಲಿಂಗ ಪ್ರಭು ಅವರು ಲಿಖೀತ ರೂಪದಲ್ಲಿ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
Related Articles
Advertisement
ಆರೋಪಿಗಳ ಹೇಳಿಕೆಯಲ್ಲಿ ಏನಿದೆ?: ಸ್ಫೋಟ ಪ್ರಕರಣದಲ್ಲಿ ನಾವು ಭಾಗಿಯಾಗಿಲ್ಲ. ನೇರವಾಗಿ ಭಾಗಿಯಾಗಿರುವುದಕ್ಕೆ ಯಾವುದೇ ಸಾಕ್ಷಿಗಳಿಲ್ಲ. ಬಾಂಬ್ ಕೂಡ ತಂದು ಇಟ್ಟಿಲ್ಲ. ಒಮ್ಮೆ ಮಾತ್ರ ದೆಹಲಿ ಮತ್ತು ಹೈದರಾಬಾದ್‌ನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಯಾಸಿನ್ ಭಟ್ಕಳ್, ರಿಯಾಜ್ ಭಟ್ಕಳ್ ಹಾಗೂ ಇತರೆ ಆರೋಪಿಗಳ ಜತೆ ಸ್ಫೋಟಕ್ಕೆ ಒಳಸಂಚು ರೂಪಿಸಿದ್ದೆವು. ಪ್ರಕರಣದಲ್ಲಿ ಇನ್ನುಳಿದ ಆರೋಪಿಗಳಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದೇವೆ ಅಷ್ಟೇ ಎಂದು ಮೂವರೂ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಅಲ್ಲದೆ, ನಮಗೆ ಶಿಕ್ಷೆ ಪ್ರಮಾಣ ಕಡಿಮೆ ಮಾಡಬೇಕು ಮತ್ತು ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿ ದಾಖಲಿಸಿರುವ ಪ್ರಕರಣದಿಂದ ಕೈಬಿಡುವಂತೆ ಮನವಿ ಮಾಡಿದ್ದಾರೆ.
ಯಾಸಿನ್ ಭಟ್ಕಳ್‌ನಿಂದ ಅರ್ಜಿ: ಈ ಮಧ್ಯೆ ಪ್ರಕರಣದ ಮಾಸ್ಟರ್ ಮೈಂಡ್ ಆಗಿರುವ ಉಗ್ರ ಯಾಸಿನ್ ಭಟ್ಕಳ್, ತನ್ನ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿ ದಾಖಲಿಸಿರುವ ಪ್ರಕರಣದಿಂದ ತನ್ನನ್ನು ಹೊರಗಿಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಈ ಹಿಂದೆ ಹೈದರಾಬಾದ್‌ನಲ್ಲಿ ನಡೆದ ಸ್ಫೋಟ ಪ್ರಕರಣವೊಂದರಲ್ಲಿ ಸ್ಥಳೀಯ ನ್ಯಾಯಾಲಯ ಯುಎಪಿಎ ಕಾಯ್ದೆಯಿಂದ ಯಾಸಿನ್ ಭಟ್ಕಳ್ ಹೆಸರನ್ನು ಕೈಬಿಟ್ಟಿತ್ತು. ಈ ಹಿನ್ನೆಲೆಯಲ್ಲಿ ಆತ ಇಲ್ಲಿಯೂ ಅರ್ಜಿ ಸಲ್ಲಿಸಿದ್ದಾನೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.
ಪ್ರಮಾಣಪತ್ರ ಸಲ್ಲಿಕೆ ಸ್ಫೋಟ ಪ್ರಕರಣದ ಮತ್ತೂಬ್ಬ ಆರೋಪಿ ಮೊಹಮ್ಮದ್ ತಾರೀಕ್ ಅಂಜುಂ ನ್ಯಾಯಾಲಯದಲ್ಲಿ ಪ್ರಮಾಣಪತ್ರದ ಮೂಲಕ ಹೇಳಿಕೆ ದಾಖಲಿಸಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇರುವ ಒಟ್ಟು 122 ಸಾಕ್ಷಿಗಳ ಪೈಕಿ ಮೂವರು ಸಾಕ್ಷಿಗಳು ನನ್ನನ್ನು ದೆಹಲಿಯ ಅಪಾರ್ಟ್‌ಮೆಂಟ್‌ನಲ್ಲಿ ನೋಡಿರುವುದಾಗಿ ಹೇಳಿರುವುದನ್ನು ಹೊರತುಪಡಿಸಿ ನನ್ನ ವಿರುದ್ಧ ಬೇರಾವುದೇ ಸಾಕ್ಷಿ ಇಲ್ಲ. ನನ್ನ ವಿರುದ್ಧ ಯಾವೆಲ್ಲ ಆರೋಪ ಹೊರಿಸಲಾಗಿದೆ ಎಂಬುದೂ ಗೊತ್ತಿಲ್ಲ. ಆರೋಪಿಗಳ ಜತೆ ನೇರವಾಗಿ ಸಂಬಂಧ ಇರುವ ಬಗ್ಗೆಯೂ ಸಾಕ್ಷಿಗಳಿಲ್ಲ. ಘಟನೆ ನಡೆದ 2010ರ ಫೆ.16ರ ಮುನ್ನ ಹಾಗೂ ನಂತರ ಯಾವತ್ತೂ ನಾನು ಬೆಂಗಳೂರಿಗೆ ಬಂದಿಲ್ಲ. ಇತರೆ ಆರೋಪಿಗಳಿಗೆ ಹಣ ಒದಗಿಸಿಲ್ಲ ಹಾಗೂ ಬೇರೆ ಯಾವುದೇ ಸಹಾಯ ಮಾಡಿಲ್ಲ. ಹೀಗಾಗಿ ನನ್ನ ಅರ್ಜಿಯನ್ನು ಪುರಸ್ಕರಿಸಬೇಕು ಎಂದು ಮನವಿ ಮಾಡಿದ್ದಾನೆ. ಆದರೆ, ನ್ಯಾಯಾಧೀಶರು ಇದನ್ನು ತಿರಸ್ಕರಿಸಿದ್ದು, ನ್ಯಾಯಾಲಯದ ಮುಂದೆ ಆರೋಪಿಯನ್ನು ದೈಹಿಕವಾಗಿ ಹಾಜರುಪಡಿಸಲು ತನಿಖಾಧಿಕಾರಿಗಳಿಗೆ ಸೂಚಿಸಿದ್ದಾರೆ.