Advertisement

ಪತ್ರಿಕೋದ್ಯಮದ ಸ್ಥಿತಿ ಬದಲಾಗುತ್ತಿದೆ

12:31 PM Jul 01, 2019 | Suhan S |

ಹುಬ್ಬಳ್ಳಿ: ಪತ್ರಿಕೋದ್ಯಮದ ಘನತೆ ಹಾಗೂ ಗೌರವ ಹಿಂದಿನಂತೆ ಉಳಿದಿಲ್ಲ. ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡುವಂತಹ ಪರಿಸ್ಥಿತಿ ಎದುರಾಗಿದೆ ಎಂದು ಸಕ್ಕರೆ ಖಾತೆ ಸಚಿವ ಆರ್‌.ಬಿ. ತಿಮ್ಮಾಪುರ ಹೇಳಿದರು.

Advertisement

ರವಿವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಕುಟುಂಬ ಸಂಭ್ರಮ -2019 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದೆ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದವರು ಇಂದು ನೌಕರರಾಗಿ ಕಾರ್ಯ ನಿರ್ವಹಿಸುವಂತಾಗಿದೆ. ಮಂತ್ರಿಯ ಮನೆಗೆ ಪತ್ರಕರ್ತ ಬಂದು ಹೋದರೆ ನೋಡುವ ದೃಷ್ಟಿಕೋನ ಬದಲಾಗಿದೆ. ಕ್ಷೇತ್ರದ ಘನತೆ ಹಾಗೂ ಗೌರವ ಉಳಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.

ವ್ಯವಸ್ಥೆಯಲ್ಲಿ ಲೋಪ ದೋಷಗಳು ಸಾಮಾನ್ಯ. ಆದರೆ ಇಂದಿಗೂ ಪತ್ರಿಕೋದ್ಯಮ ಕ್ಷೇತ್ರಕ್ಕೆ ಸೀಮಿತವಾಗಿ ಉಳಿದು ಇರುವುದರಲ್ಲಿ ಸಂತೃಪ್ತಿ ಹೊಂದಿದವರನ್ನು ಕಾಣುತ್ತೇವೆ. ಒತ್ತಡದ ಜೀವನದಲ್ಲಿ ಕುಟುಂಬದ ಕಾಳಜಿಯನ್ನು ಮರೆತವರನ್ನು ಕಾಣುತ್ತೇವೆ. ನಿತ್ಯದ ಕಾರ್ಯದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸಿಕ್ಕ ಸಮಯವನ್ನು ಕುಟುಂಬಕ್ಕೆ ಮೀಸಲಿಡಬೇಕು. ಜೀವನದಲ್ಲಿ ಒತ್ತಡವನ್ನು ನಿಭಾಯಿಸುವುದನ್ನು ರೂಢಿಸಿಕೊಳ್ಳಬೇಕು. ಇಂತಹ ಕಾರ್ಯಕ್ರಮಗಳನ್ನು ಹೆಚ್ಚಿಸುವ ಮೂಲಕ ಕುಟುಂಬದ ಸದಸ್ಯೆರೆಲ್ಲೂ ಒಂದೆಡೆ ಸೇರಿ ಸಂತಸ ಪಡಬೇಕು ಎಂದು ಹೇಳಿದರು.

ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಪ್ಪನ್ನು ಗುರುತಿಸಿ ನ್ಯಾಯ ಕೊಡಿಸುವಂತಹ ಕೆಲಸ ಪತ್ರಕರ್ತರಿಂದ ಆಗುತ್ತಿದೆ. ಸರಕಾರವನ್ನು ಎಚ್ಚರಿಸುವ ಕೆಲಸ ಈ ಕ್ಷೇತ್ರದಿಂದ ಆಗುತ್ತಿದೆ. ಸಮಾಜದ ಆಗು ಹೋಗುಗಳ ಬಗ್ಗೆ ಸದಾ ಕಾಳಜಿ ವಹಿಸಿ ದಾರಿ ತಪ್ಪಿದಾಗ ಎಚ್ಚರಿಸುವ ಕೆಲಸ ಆಗುತ್ತಿದೆ. ಸಮಾಜದ ದೊಡ್ಡ ಜವಾಬ್ದಾರಿಯನ್ನು ಪತ್ರಿಕೋದ್ಯಮ ಕ್ಷೇತ್ರ ನಿರ್ವಹಿಸುತ್ತಿದೆ. ಕುಟುಂಬಕ್ಕಿಂತ ಸಮಾಜದ ಬಗ್ಗೆ ಹೆಚ್ಚು ಚಿಂತನೆ ಮಾಡುವ ಪತ್ರಕರ್ತರು ತಮ್ಮ ಆರೋಗ್ಯ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಹೇಳಿದರು.

ಪತ್ರಕರ್ತರಿಗಾಗಿ ಏರ್ಪಡಿಸಿದ್ದ ವೈಯಕ್ತಿಕ ಹಾಗೂ ಗುಂಪು ಕ್ರೀಡೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಗೆ ಭಾಜನರಾದ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಮಕ್ಕಳಿಗಾಗಿ ವಿವಿಧ ಮೋಜಿನ ಆಟಗಳನ್ನು ಏರ್ಪಡಿಸಲಾಗಿತ್ತು. ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಶಾಸಕಿ ಕುಸುಮಾವತಿ ಶಿವಳ್ಳಿ, ಉದ್ಯಮಿಗಳಾದ ಸೂರಜ್‌ ಅಳವಂಡಿ, ಸಂತೋಷ ಶೆಟ್ಟಿ, ಸಂಘದ ಪ್ರಧಾನ ಕಾರ್ಯದರ್ಶಿ ಸುಶೀಲೇಂದ್ರ ಕುಂದರಗಿ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next