Advertisement

ರಾಜ್ಯಕ್ಕೆ ಬೇಕಿದೆ ಪ್ರಬಲ ಪ್ರಾದೇಶಿಕ ಪಕ್ಷ

05:14 AM Feb 04, 2019 | |

ದಾವಣಗೆರೆ: ಕರ್ನಾಟಕದ ಜನತೆಗೆ ಅತಿ ಬಲಿಷ್ಠ, ಪ್ರಬಲ ಪ್ರಾದೇಶಿಕ ಪಕ್ಷ ಬೇಕಿದೆ ಎಂದು ಪ್ರತಿಪಾದಿಸಿರುವ ಉತ್ತಮ ಪ್ರಜಾಕೀಯ ಪಕ್ಷದ ಮುಖಂಡ, ಚಿತ್ರನಟ ಉಪೇಂದ್ರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಕ್ಷೇತ್ರದಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ತಿಳಿಸಿದ್ದಾರೆ.

Advertisement

ಎಲ್ಲಾ 28 ಕ್ಷೇತ್ರಗಳ ಅಭ್ಯರ್ಥಿಗಳ ಬೆನ್ನಲುಬಾಗಿ ನಿಲ್ಲುವ ಜೊತೆಗೆ ಪ್ರಚಾರವನ್ನೂ ನಡೆಸುತ್ತೇನೆ. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಆಲೋಚನೆ ಇತ್ತು. ಕಾರಣಾಂತರದಿಂದ ಸಾಧ್ಯವಾಗಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಇಂತದ್ದೇ ಕ್ಷೇತ್ರದಿಂದ ಸ್ಪರ್ಧಿಸುವ ಆಲೋಚನೆ ಇಲ್ಲ. ಒಂದೊಮ್ಮೆ ಯಾವುದಾದರೂ ಕ್ಷೇತ್ರದಲ್ಲಿ ಅಭ್ಯರ್ಥಿ ಸಿಗದೇ ಇದ್ದಲ್ಲಿ ನಾನೇ ಸ್ಪರ್ಧಿಸುತ್ತೇನೆ. ಗೆದ್ದರೆ ನಾನು ಸಿನಿಮಾ ರಂಗದಲ್ಲಿ ಮುಂದುವರೆಯುವುದಿಲ್ಲ. ಚುನಾವಣೆಯಲ್ಲಿ ಗೆದ್ದಾದ ಮೇಲೆ ನಾನು ಜನರ ಸೇವಕ. ಹಾಗಾಗಿ ಚಿತ್ರರಂಗದಿಂದ ನಿವೃತ್ತಿ ಆಗುವುದಾಗಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈಗಿನ ವ್ಯವಸ್ಥೆಯಲ್ಲಿ ಚುನಾವಣೆಯಲ್ಲಿ ಗೆಲ್ಲಬೇಕು ಎನ್ನುವುದಾದರೆ ಹಣ, ಜಾತಿ, ಪ್ರಭಾವ ಅಥವಾ ಇನ್ನೇನಾದರೂ ಬೇಕು ಎಂಬ ಭಾವನೆ ಪ್ರಬಲವಾಗಿ ಬೇರೂರಿದೆ. ಹಣ ಕೊಟ್ಟರೆ ಮಾತ್ರ ಮತದಾನ ಮಾಡುತ್ತಾರೆ ಎಂದು ಸಹ ಹೇಳುವ ಮೂಲಕ ಜನರನ್ನೇ ಒಂದು ರೀತಿಯಲ್ಲಿ ನೋಡುವ ವಾತಾವರಣವೂ ಇದೆ. ಇಂತಹ ವಾತಾವರಣ ಬದಲಾಯಿಸಲೇಬೇಕಿದೆ. ಇಲ್ಲದೇ ಹೋದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಥವೇ ಇರುವುದಿಲ್ಲ. ನಾನು ಎಲ್ಲವನ್ನೂ ಮಾಡಿಯೇ ಬಿಡುತ್ತೇನೆ ಅಂದುಕೊಂಡಿಲ್ಲ. ಈಗಲೇ ಎಲ್ಲಾ ಬದಲಾವಣೆ ಆಗುತ್ತದೆ ಎಂಬ ಭಾವನೆಯೂ ಇಲ್ಲ. ಭವಿಷ್ಯದಲ್ಲಿ ಆಗುತ್ತದೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.

ಉತ್ತಮ ಪ್ರಜಾಕೀಯ ಪಕ್ಷದ ಸಂಘಟನೆ ಮಾಡಲಿಕ್ಕೆ ಹೋಗುವುದೇ ಇಲ್ಲ. ಸಂಘಟನೆ, ಪಕ್ಷದ ಕಚೇರಿ ಯಾವುದೂ ಇರುವುದೇ ಇಲ್ಲ. ಯಾರಿಗೂ ಪಾರ್ಟಿ ಫಂಡ್‌ ಕೊಡುವ ಮಾತೇ ಇಲ್ಲ. ನಮ್ಮ ಪಕ್ಷಕ್ಕೆ ಬರುವಂತಹವರೇ ಆಗಲಿ ಹಣ ಸಂಗ್ರಹ ಮಾಡುವುದು, ಕಚೇರಿ ಪ್ರಾರಂಭಿಸುವಂತೆ ಇಲ್ಲ. ಕೆಲಸ-ಕಾರ್ಯ ಬಿಟ್ಟು ಬರಬೇಡಿ. ಉತ್ತಮ ಪ್ರಜಾಕೀಯ ಪಕ್ಷದ್ದು ಮೌನಕ್ರಾಂತಿ ಎಂಬುದನ್ನು ನಾನು ಒತ್ತಿ ಒತ್ತಿ ಹೇಳುತ್ತೇನೆ. ಹಣ, ಜಾತಿ, ಪ್ರಭಾವಕ್ಕಿಂತಲೂ ವಿಚಾರದ ಆಧಾರದ ಮೇಲೆ ಚುನಾವಣೆ ಎದುರಿಸಲಾಗುವುದು ಎಂದರು.

ಈಗ ಚುನಾವಣೆ ಗೆಲ್ಲುವುದು ಎಂದರೆ ಹಣ ನೀಡುವುದು, ಅವರಿವರನ್ನು ಬೈಯುವುದೇ ಆಗಿದೆ. ಅದಕ್ಕಿಂತಲೂ ಜನಗಳಿಗೆ ನಾವೇನು ಮಾಡುತ್ತೇವೆ ಎಂಬ ವಿಚಾರದ ಆಧಾರದಲ್ಲಿ ಚುನಾವಣೆ ನಡೆಯುವಂತಾಗಬೇಕು. ನಮ್ಮ ಪಕ್ಷದ ಅಭ್ಯರ್ಥಿಗಳಿಗೆ ವಿದ್ಯಾರ್ಹತೆಯ ಮಾನದಂಡ ಇಲ್ಲ. ಸಂವಿಧಾನದಲ್ಲೇ ಇಲ್ಲ ಎಂದಾದ ಮೇಲೆ ನಮ್ಮಲ್ಲೂ ಇಲ್ಲ ಎಂದು ತಿಳಿಸಿದರು.

Advertisement

ನನ್ನ ಪ್ರಕಾರ ಸಮಾಜ ಸೇವೆಗೆ ರಾಜಕೀಯ ಅತ್ಯುತ್ತಮ ವೇದಿಕೆ. ರಾಜಕಾರಣ ಜನರ ಧ್ವನಿ ಆಗಬೇಕು. ಏನೇ ಬದಲಾವಣೆ ಮಾಡುವುದೇ ಆದರೆ ರಾಜಕೀಯದಿಂದ ಮಾಡಬಹುದು. ಜನರ ಅಭಿವೃದ್ಧಿ, ಸಮಾಜದ ಬದಲಾವಣೆಗಾಗಿ ರಾಜೀ ರಹಿತವಾದ ರಾಜಕೀಯ ಮಾಡುವುದಕ್ಕಾಗಿಯೇ ನಾನು ಚಿತ್ರರಂಗಕ್ಕೆ ಬಂದಿದ್ದು, ಕಳೆದ 25 ವರ್ಷದಿಂದ ನನ್ನ ಚಿಂತನೆಗಳನ್ನ ನನ್ನ ಕುಟುಂಬ, ಆಪ್ತರು, ಗೆಳೆಯರು, ಅಭಿಮಾನಿಗಳು ಎಲ್ಲರೊಟ್ಟಿಗೆ ಹಂಚಿಕೊಳ್ಳುತ್ತಲೇ ಇದ್ದೇನೆ. ರಾಜಕೀಯ, ಚುನಾವಣಾ ವ್ಯವಸ್ಥೆಯಲ್ಲೇ ಬದಲಾವಣೆ ಮಾಡುವ ಉದ್ದೇಶದ ಕಾರಣಕ್ಕೆ ಉತ್ತಮ ಪ್ರಜಾಕೀಯ ಪ್ರಾರಂಭಿಸಿದ್ದೇನೆ. ಶೇ. 20 ರಷ್ಟು ಜನರು ಬದಲಾವಣೆ ಬಯಸುತ್ತಲೇ ಇರುತ್ತಾರೆ. ಅಂತಹವರಿಗೆ ಒಳ್ಳೆಯ ವೇದಿಕೆ ಸಿಕ್ಕಲ್ಲಿ, ಸಾಕಷ್ಟು ಬದಲಾವಣೆ ಆಗಬಹುದು. ಆ ಮನಸ್ಸು, ಗುರಿ ಇದ್ದವರು ಯಾರೇ ಆಗಲಿ ನಮ್ಮ ಪಕ್ಷಕ್ಕೆ ಬರಬಹುದು ಎಂದು ತಿಳಿಸಿದರು.

ಯಾವುದೇ ರಾಜಕೀಯ ಪಕ್ಷದೊಂದಿಗೆ ಮೈತ್ರಿ ಯಾಕೆ ಬೇಕು. ಅದರ ಅಗತ್ಯವೇ ಇಲ್ಲ, ಉತ್ತಮ ಪ್ರಜಾಕೀಯ ಪಕ್ಷಕ್ಕೆ ಅಗತ್ಯ ಬಹುಮತ ದೊರೆತಲ್ಲಿ ಮಾತ್ರವೇ ಅಧಿಕಾರ ನಡೆಸುತ್ತೇವೆ. ಒಂದೊಮ್ಮೆ ನಮ್ಮ ಪಕ್ಷ ಸರ್ಕಾರದ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವಂತಹ ವಾತಾವರಣ ನಿರ್ಮಾಣವಾದಲ್ಲಿ ನಮ್ಮ ಪಕ್ಷದ ಬೇಡಿಕೆ ಈಡೇರಿಸುವ ಪಕ್ಷದ ಸರ್ಕಾರ ರಚನೆಗೆ ಸಂಪೂರ್ಣ ಬೆಂಬಲ ಕೊಡುತ್ತೇವೆ. ನಮ್ಮ ಬೇಡಿಕೆ ಈಡೇರಿಸದೇ ಹೋದಲ್ಲಿ ಬೆಂಬಲ ವಾಪಸ್‌ ಪಡೆಯುವುದು ಇದ್ದೇ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಚುನಾವಣಾ ರಾಜಕೀಯದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಉತ್ತಮ ಪ್ರಜಾಕೀಯ ಪಕ್ಷವು ಅಭ್ಯರ್ಥಿಗಳ ಆಯ್ಕೆಗೆ ಪ್ರಶ್ನೋತ್ತರ ಹಮ್ಮಿಕೊಂಡಿದೆ. ಅಭ್ಯರ್ಥಿಗಳು ತಮ್ಮ ಉತ್ತರ ನೀಡಬೇಕು. ನಂತರ ಸಂದರ್ಶನ ನಡೆಸಲಾಗುವುದು. ತಮ್ಮ ಕ್ಷೇತ್ರದಲ್ಲಿ ಬದಲಾವಣೆ, ಕೆಲಸ-ಕಾರ್ಯಗಳ ಬಗ್ಗೆ ಸಮಗ್ರ ವರದಿ ನೀಡಬೇಕು. ಎಲ್ಲಾ ಪ್ರಕ್ರಿಯೆ ನಂತರ ಅಭ್ಯರ್ಥಿಗಳ ಆಯ್ಕೆ ಮಾಡಲಾಗುವುದು. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳು ಗೆಲ್ಲಬೇಕು. ಯಥಾ ರಾಜ ತಥಾ ಪ್ರಜೆ ಎನ್ನುವುದು ಯಥಾ ಪ್ರಜೆ, ತಥಾ ರಾಜ… ಎನ್ನುವಂತಹ ಮಹತ್ವದ ಬದಲಾವಣೆ ಆಗಬೇಕು. ಪ್ರಜೆಗಳೇ ರಾಜರಾಗಬೇಕು. ಕಾರ್ಪೊರೇಟ್ ವ್ಯವಸ್ಥೆಯಂತಹ ರಾಜಕೀಯ ಬದಲಾವಣೆಯೇ ನಮ್ಮ ಮೊದಲ ಗುರಿ. ಅಧಿಕಾರ ಅಲ್ಲವೇ ಅಲ್ಲ ಎಂದು ತಿಳಿಸಿದರು.

ವಾಪಸ್‌ ಕರೆಸಿಕೊಳ್ಳಬೇಕು…
ರಾಜಕೀಯ ಪಕ್ಷಗಳು ಚುನಾವಣೆಗೆ 6 ತಿಂಗಳ ಮುಂಚೆಯೇ ಪ್ರಣಾಳಿಕೆ ಬಿಡುಗಡೆ ಮಾಡಬೇಕು. ಉತ್ತಮ ಪ್ರಜಾಕೀಯ ಪಕ್ಷ ಮೊದಲು ಜನರ ಪ್ರಣಾಳಿಕೆ ಬಿಡುಗಡೆ ಮಾಡುತ್ತದೆ. ನಂತರ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡುತ್ತದೆ. ಒಟ್ಟಾರೆಯಾಗಿ ರಾಜಕೀಯ ಚುನಾವಣಾ ವ್ಯವಸ್ಥೆ ಬದಲಾವಣೆಯಲ್ಲಿ ಮತದಾರರು ಸಹ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತಾಗಬೇಕು ಎಂಬುದು ನಮ್ಮ ಪಕ್ಷದ ಆಶಯ. ಅದಕ್ಕಾಗಿ ನಾವು ಸೆಲೆಕ್ಷನ್‌, ಎಲೆಕ್ಷನ್‌, ಕರೆಕ್ಷನ್‌, ರಿಜೆಕ್ಷನ್‌ ಮತ್ತು ಪ್ರಮೋಷನ್‌… ಎಂಬ ಅಂಶಗಳಿಗೆ ಹೆಚ್ಚಿನ ಗಮನ ನೀಡುತ್ತೇವೆ ಎಂದ ಅವರು, ಒಂದೊಮ್ಮೆ ನಾವು ಆಯ್ಕೆ ಮಾಡಿದಂತವರು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದೇ ಹೋದಲ್ಲಿ ವಾಪಸ್‌ ಕರೆಸಿಕೊಳ್ಳುವ ವ್ಯವಸ್ಥೆ ಬೇಕು. ಸಂವಿಧಾನದಲ್ಲಿ ಅದು ಇಲ್ಲದೇ ಹೋದರೂ ಪಕ್ಷದಲ್ಲಾದರೂ ಇರಬೇಕು ಎಂದು ನಟ ಉಪೇಂದ್ರ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next