Advertisement
ಪದೇಪದೆ ನೆರೆ ಅಥವಾ ಮತ್ತಿತರ ನೈಸರ್ಗಿಕ ವಿಪತ್ತುಗಳಿಗೆ ತುತ್ತಾಗುವ ದೇಶದ 350 ಜಿಲ್ಲೆಗಳನ್ನು ಕೇಂದ್ರದ ಮಹತ್ವಾಕಾಂಕ್ಷಿ “ಆಪದ್ ಮಿತ್ರ’ ಯೋಜನೆಯಡಿ ಗುರುತಿಸಲಾಗಿದೆ. ಆ ಪಟ್ಟಿಯಲ್ಲಿ ರಾಜ್ಯದ 11 ಜಿಲ್ಲೆಗಳ ಸುಮಾರು 208 ಗ್ರಾಮಗಳು ಇವೆ. ಅಲ್ಲೆಲ್ಲ ಪ್ರಕೃತಿ ವಿಕೋಪಗಳಿಗೆ ತ್ವರಿತವಾಗಿ ಸ್ಪಂದಿಸಲು ಸಮುದಾಯ ಮಟ್ಟದ ಸ್ವಯಂ ಸೇವಕರನ್ನು ಸಿದ್ಧಗೊಳಿಸಲು ಸರಕಾರ ಮುಂದಾಗಿದೆ.
ದೇಶಾದ್ಯಂತ ಒಟ್ಟಾರೆ ಒಂದು ಲಕ್ಷ ಇಂತಹ ಸ್ವಯಂಸೇವಕರನ್ನು ಸಜ್ಜುಗೊಳಿಸುವ ಗುರಿ ಇದ್ದು, ಈ ಪೈಕಿ ರಾಜ್ಯದಲ್ಲಿ 11 ಜಿಲ್ಲೆಗಳಿಂದ ತಲಾ 300ರಿಂದ 350ರಂತೆ 3,400 ಸ್ವಯಂಸೇವಕರನ್ನು ತಯಾರು ಮಾಡಲಾಗುತ್ತಿದೆ. ಈಗಾಗಲೇ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಗೃಹ ರಕ್ಷಕ ಸಿಬಂದಿ, ಸಿವಿಲ್ ಡಿಫೆನ್ಸ್, ಸ್ಥಳೀಯ ಪೊಲೀಸರು ಹಾಗೂ ಯುವಕರು ಇದರಲಿದ್ದಾರೆ. ಅವರೆಲ್ಲರಿಗೆ 12 ದಿನಗಳ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಮಾಸಾಂತ್ಯಕ್ಕೆ ತರಬೇತಿ ಆರಂಭವಾಗಲಿದೆ ಎಂದು ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ)ಯ ರಾಜ್ಯ ತುರ್ತು ನಿರ್ವಹಣ ಕೇಂದ್ರದ ಅಧಿಕಾರಿ “ಉದಯವಾಣಿ’ಗೆ ತಿಳಿಸಿದ್ದಾರೆ. ಸಂತ್ರಸ್ತರನ್ನು ಹೇಗೆ ಕಾಪಾಡಬೇಕು? ಒಂದು ವೇಳೆ ನೆರವಿಗೆ ಧಾವಿಸಿದಾಗ ತಾವೇ ಅಪಾಯದಲ್ಲಿ ಸಿಲುಕಿದರೆ ಪಾರಾಗುವುದು ಹೇಗೆ? ಈ ಕಾರ್ಯಾಚರಣೆಗೆ ಅನುಸರಿಸುವ ಕ್ರಮಗಳು ಯಾವುವು ಮುಂತಾದ ಹಲವು ಅಂಶಗಳ ಬಗ್ಗೆ ತರಬೇತಿ ನೀಡಲಾಗುತ್ತದೆ.
Related Articles
Advertisement
“ಆಪತ್ತು ಮಿತ್ರ’ರಿಗೆ ಜೀವ ವಿಮಾ ಸೌಲಭ್ಯಜತೆಗೆ ಆಯ್ಕೆ ಮಾಡಲಾದ ಪ್ರತೀ ಜಿಲ್ಲೆಗೆ ತಲಾ 20 ಲಕ್ಷ ರೂ. ಅನ್ನು ಸುರಕ್ಷಾ ಉಪಕರಣಗಳ ಖರೀದಿಗೆ ನೀಡಲಾಗುತ್ತದೆ. ಇದರಲ್ಲಿ ಪ್ರತೀ ಸ್ವಯಂಸೇವಕನಿಗೆ ತಲಾ ಹತ್ತು ಸಾವಿರ ರೂ. ಮೊತ್ತದಲ್ಲಿ ಕೈಗವಸು, ಕಾಲುಗವಸು, ಗರಗಸ, ಪಿಕ್ಕಾಸು, ಹಗ್ಗ ಮತ್ತಿತರ ಉಪಕರಣಗಳ ಕಿಟ್ ಹಾಗೂ ಗುರುತಿನ ಚೀಟಿ ಇರುತ್ತದೆ. ಜತೆಗೆ ಪ್ರತಿಯೊಬ್ಬರಿಗೂ ಜೀವ ವಿಮಾ ಸೌಲಭ್ಯ ಕಲ್ಪಿಸಲಾಗಿರುತ್ತದೆ. ಒಂದು ವೇಳೆ ಅನಾಹುತಗಳು ಸಂಭವಿಸಿದರೆ, ಅವಲಂಬಿತ ಕುಟುಂಬಕ್ಕೆ ಪರಿಹಾರ ಕಲ್ಪಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಸ್ಥಳೀಯ ಮಟ್ಟದಲ್ಲೇ ಸ್ವಯಂಸೇವಕರನ್ನು ತಯಾರು ಮಾಡುವುದರಿಂದ ಅನಾಹುತದ ಪ್ರಮಾಣ ತಗ್ಗಿಸಬಹುದು. ರಾಜ್ಯದ 11 ಜಿಲ್ಲೆಗಳಿಗೆ ಸುಮಾರು 3,400 ಸ್ವಯಂಸೇವಕರು “ಆಪದ್ ಮಿತ್ರ’ದಡಿ ಆಯ್ಕೆ ಮಾಡಲಾಗುತ್ತಿದೆ. ಮಳೆಗಾಲ ಶುರುವಾಗುತ್ತಿದ್ದಂತೆ ಈ ಆಪತ್ತು ಮಿತ್ರರು ಸೇವೆಗೆ ಸನ್ನದ್ಧರಾಗುವ ಸಾಧ್ಯತೆ ಇದೆ.
– ಶ್ರೀನಿವಾಸ ರೆಡ್ಡಿ, ಹಿರಿಯ ಸಲಹೆಗಾರ, ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರ – ವಿಜಯಕುಮಾರ ಚಂದರಗಿ