Advertisement

ಪ್ರಶ್ನೆ ಕೇಳ್ಳೋ ಅವಕಾಶ ರಾಜ್ಯದ ಮುಂದಿದೆ: ಚಿದು

06:20 AM Mar 12, 2018 | |

ಬೆಂಗಳೂರು: ಕೇಂದ್ರದಲ್ಲಿ ಈಗ ಆಡಳಿತ ನಡೆಸುತ್ತಿರುವ ಸರ್ಕಾರಕ್ಕೆ ಚುನಾವಣೆಯ ಸಂದರ್ಭದಲ್ಲಿ ಕೊಟ್ಟ ಭರವಸೆಗಳ ಬಗ್ಗೆ ಜನರು “ಪ್ರಶ್ನೆ ಕೇಳುವ’ ಅವಕಾಶ ಈಗ ಕರ್ನಾಟಕದ ಮುಂದಿದೆ ಎಂದು ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಹೇಳಿದ್ದಾರೆ.

Advertisement

ನಗರದ ಬಿಷಪ್‌ ಕಾಟನ್‌ ಶಾಲೆಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತಮ್ಮ “ಸ್ಪೀಕಿಂಗ್‌ ಟ್ರಾತ್‌ ಟೂ ಪವರ್‌’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಗುಜರಾತಿನಲ್ಲಿ ಜನ ಗಟ್ಟಿತನದಿಂದ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆ 150 ಸ್ಥಾನ ಹೊಂದಿದ್ದ ಬಿಜೆಪಿ 99ಕ್ಕೆ  ಕುಸಿಯಿತು. ಅದರಂತೆ ಈಗ ಪ್ರಶ್ನೆ ಕೇಳಲು ಜನರಿಗೆ ಮುಂದಿನ ಅವಕಾಶ ಇರುವುದು  ಕರ್ನಾಟಕದಲ್ಲಿ ಎಂದರು.

ಕೇಂದ್ರದ ಈಗಿನ ಸರ್ಕಾರ ವಾಕ್‌ ಮತ್ತು ಅಭಿಪ್ರಾಯ ಸ್ವಾತಂತ್ರ್ಯವನ್ನು ನಿರಂತರವಾಗಿ ದಮನಿಸುತ್ತಾ ಬಂದಿದೆ. ಸಾಂವಿಧಾನಿಕ ಮತ್ತು ಸ್ವಾಯತ್ತ ಸಂಸ್ಥೆಗಳ ಆಯಾಕಟ್ಟಿನ ಹುದ್ದೆಗಳನ್ನು ವರ್ಷಗಳಿಂದ ಖಾಲಿ ಇಡುವ ಮೂಲಕ ಆ ಸಂಸ್ಥೆಗಳನ್ನು ಅತಂತ್ರಗೊಳಿಸಿದೆ. ಈ ಬಗ್ಗೆ ಜನ ಪ್ರಶ್ನಿಸಬೇಕು. ಇತ್ತೀಚಿನ ದಿನಗಳಲ್ಲಿ ಪ್ರಶ್ನೆ ಕೇಳುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಕೇಂದ್ರ ಸರ್ಕಾರದ ಬಗ್ಗೆ ಜನರು ಗಟ್ಟಿತನದಿಂದ ಪ್ರಶ್ನಿಸಿದರು ಅನ್ನುವುದಕ್ಕೆ ಗುಜರಾತ್‌ ಚುನಾಣೆಯ ಫ‌ಲಿತಾಂಶ ಸಾಕ್ಷಿ. ಅಂತಹ ಪ್ರಶ್ನೆ ಕೇಳುವ ಅವಕಾಶ ಈಗ ಕರ್ನಾಟಕದ ಜನರ ಮುಂದಿದೆ ಎಂದು ಚಿದಂಬರಂ ಹೇಳಿದರು.

ಇದೇ ವೇಳೆ ಕೇಂದ್ರ ಸರ್ಕಾರದ “ಉದ್ಯೋಗ ಸೃಷ್ಟಿ’ ಭರವಸೆಯನ್ನು ಪ್ರಸ್ತಾಪಿಸಿದ ಚಿದಂಬರಂ, ಜನರು ಗಟ್ಟಿತನದಿಂದ ಪ್ರಶ್ನೆ ಕೇಳದಿದ್ದರೆ, ಈ ಸರ್ಕಾರ ಕೊಟ್ಟ ಭರವಸೆಯ ಬಗ್ಗೆ ಮಾತನಾಡುವುದಿಲ್ಲ. ಉದ್ಯೋಗ ಸೃಷ್ಟಿಯ ಬಗ್ಗೆ ಉದ್ದೇಶಪೂರ್ವಕ ಮೌನ ತಾಳಿರುವ ಈ ಸರ್ಕಾರ “ಪಕೋಡ’ ಮಾರುವುದು ಸಹ ಉದ್ಯೋಗ ಎಂದು ಹೇಳುವ ಮೂಲಕ ಉದ್ಯೋಗಕಾಂಕ್ಷಿಗಳನ್ನು ಅವಮಾನಿಸಿದೆ. ಉದ್ಯೋಗ ಸೃಷ್ಟಿಸುವುದು ಅಂದರೆ “ಅಲ್ಲಾದೀನ್‌ ದೀಪ’ ಹಿಡಿದು ಮ್ಯಾಜಿಕ್‌ ಮಾಡಿದಂತೆ ಅಲ್ಲ. ಖಾಸಗಿ ಕ್ಷೇತ್ರದಲ್ಲಿ ಹೆಚ್ಚುವರಿ ಹೂಡಿಕೆ ಮತ್ತು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಆರ್ಥಿಕ ನೆರವು ಹೆಚ್ಚಾದಾಗ ಮಾತ್ರ ಉದ್ಯೋಗ ಸೃಷ್ಟಿಯಾಗಲು ಸಾಧ್ಯ. ಆದರೆ, ಈಗಿನ ಕೇಂದ್ರ ಸರ್ಕಾರದ ಅವಧಿಯಲ್ಲಿ ಈ ಎರಡೂ ಕ್ಷೇತ್ರಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ಟೆಲಿಕಾಮ್‌ ಮತ್ತು ಕಲ್ಲಿದ್ದಲಿನ “ವಾಣಿಜ್ಯ ವ್ಯವಹಾರಗಳಿಗೆ’ ಕುತಂತ್ರಪೂರಿತ ರಾಜಕೀಯ ಮತ್ತು ಕಾನೂನು ತಿರುವು ನೀಡಿದ್ದರ ಪರಿಣಾಮ ಬ್ಯಾಂಕುಗಳ “ಅನುತ್ಪಾದಕ ಆಸ್ತಿ’ (ಎನ್‌ಪಿಎ) ಹೆಚ್ಚಳಕ್ಕೆ ಕಾರಣವಾಯಿತು. ಜಾಗತಿಕ ಪೈಪೋಟಿಗೆ ತೆರೆದುಕೊಳ್ಳದಿದ್ದರೆ ದೇಶದ ಕೈಗಾರಿಕಾ ಕ್ಷೇತ್ರ ಪ್ರಗತಿ ಕಾಣುವುದು ಕಷ್ಟ. ಒಟ್ಟು ಉದ್ಯೋಗ ಪ್ರಮಾಣದಲ್ಲಿ ಶೇ.90ರಷ್ಟು ಉದ್ಯೋಗ ಸೃಷ್ಟಿಯಾಗುವುದು ಅಸಂಘಟಿತ ವಲಯದಲ್ಲಿ. ಆದರೆ, ಈ ಸರ್ಕಾರ ಅವಧಿಯಲ್ಲಿ ಅಸಂಘಟಿತ ಕ್ಷೇತ್ರದಲ್ಲಿ ಯಾವುದೇ ಉದ್ಯೋಗ ಸೃಷ್ಟಿಯಾಗಿಲ್ಲ. ವ್ಯಕ್ತಿ, ವಿಚಾರ ಸ್ವಾತಂತ್ರ್ಯ ಮತ್ತು ಕಾನೂನು ರೀತಿ ಆಡಳಿತವೇ ನಿಜವಾದ ಐಡಿಯಾ ಆಫ್ ಇಂಡಿಯಾ. ಪ್ರತಿ 10ರಲ್ಲಿ 9 ಮಂದಿ ಭಾರತೀಯರು ಸಹಿಷ್ಣುಗಳು. ನಮ್ಮದು ಬಹುತ್ವ ಮತ್ತು ಸ್ವಾಂತ್ರತ್ಯದ ಸಮಾಜ. ಆದರೆ, ಈಗಿನ ಸರ್ಕಾರ ಈ ಕಲ್ಪನೆಗಳಿಗೆ ವಿರುದ್ಧವಾಗಿದೆ ಎಂದು ಚಿದಂಬರಂ ಹೇಳಿದರು.ರಾಜ್ಯಸಭಾ ಸದಸ್ಯ ಪ್ರೊ. ರಾಜೀವ್‌ಗೌಡ ಹಾಗೂ ತಕ್ಷಶಿಲಾ ಸಂಸ್ಥೆಯ ಸಂಸ್ಥಾಪಕ ನಿತಿನ್‌ ಪೈ ಸಂವಾದ ನಡೆಸಿಕೊಟ್ಟರು.

Advertisement

ಕನ್ನಡಕ್ಕೆ ಒತ್ತು ಕೊಡಿ
ಜನರನ್ನು ಸರಳವಾಗಿ ಮನವರಿಕೆ ಮಾಡಿಕೊಡುವ ಅತ್ಯುತ್ತಮ ಸಾಧನ ಸ್ಥಳೀಯ ಭಾಷೆ. ಅದೇ ರೀತಿ ಜನರು ತಮ್ಮ ಭಾವನೆಗಳನ್ನು ಅವರ ಸ್ಥಳೀಯ ಭಾಷೆಗಳಲ್ಲೇ ಬಹಳ ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯ. ಆದ್ದರಿಂದ ಕನ್ನಡ ಭಾಷೆಗೆ ಒತ್ತು ನೀಡುವಂತೆ ಇಲ್ಲಿನ ಸರ್ಕಾರಕ್ಕೆ ನಾನು ಮನವಿ ಮಾಡಿಕೊಳ್ಳುತ್ತೇನೆ. ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡ ಭಾಷೆಯ ಬಳಕೆ ಹೆಚ್ಚಾದರೆ, ಹೆಚ್ಚೆಚ್ಚು ಜನರನ್ನು ತಲುಪಲು ಸಾಧ್ಯ ಎಂದು ಇದೇ ವೇಳೆ ಚಿದಂಬರಂ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next