Advertisement

ಕೊನೆಗೂ ರಾಜ್ಯಕ್ಕೆ ದಕ್ಕಿತು ಕ್ಷಿಪ್ರ ಕಾರ್ಯಪಡೆ

03:00 AM Jul 13, 2017 | Harsha Rao |

ಶಿವಮೊಗ್ಗ: ಕೋಮುಗಲಭೆ ಸೇರಿದಂತೆ ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುವ, ಕೇಂದ್ರ ಸರ್ಕಾರದ ಅಧೀನದಲ್ಲಿರುವ ಕ್ಷಿಪ್ರ ಕಾರ್ಯಪಡೆ(ಆರ್‌ಎಎಫ್‌)ಯ ರಾಜ್ಯದ ಮೊದಲ ಘಟಕ ಶಿವಮೊಗ್ಗದಲ್ಲಿ ಸ್ಥಾಪನೆಗೊಳ್ಳಲಿದೆ. ಆರ್‌ಎಎಫ್‌ನ ದಕ್ಷಿಣ ವಲಯ ಕೇಂದ್ರ ಕಚೇರಿ ತಮಿಳುನಾಡಿನಲ್ಲಿದ್ದು, ಪ್ರಸ್ತುತ ಇಲ್ಲಿಂದಲೇ ಇಡೀ ದಕ್ಷಿಣ ಭಾರತದ ವ್ಯವಸ್ಥೆಯನ್ನು ನಿಯಂತ್ರಿಸಲಾಗುತ್ತಿದೆ. ಈಗ ಇದೇ
ಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಘಟಕ ಸ್ಥಾಪನೆಯಾಗಲಿದ್ದು, ಈ ಗೌರವ ಶಿವಮೊಗ್ಗಕ್ಕೆ ದಕ್ಕುವ ಸಾಧ್ಯತೆ ಇದೆ.
ಶಿವಮೊಗ್ಗ-ಭದ್ರಾವತಿ ನಡುವಿನ ಮಾಚೇನಹಳ್ಳಿಯಲ್ಲಿ ಕೆಎಸ್‌ಆರ್‌ಪಿಯ 8ನೇ ಬೆಟಾಲಿಯನ್‌ ಇರುವ ಪ್ರದೇಶವನ್ನು ಒಳಗೊಂಡ ಪ್ರದೇಶದ ಸ್ವಲ್ಪಭಾಗದಲ್ಲಿ ಈ ಕ್ಯಾಂಪಸ್‌ ಸ್ಥಾಪನೆಗೊಳ್ಳಲಿದೆ. ಈ ಸಂಬಂಧ 15 ದಿನದ ಹಿಂದೆ
ತಮಿಳುನಾಡಿನಲ್ಲಿರುವ ದಕ್ಷಿಣ ವಲಯ ಸಿಆರ್‌ಪಿಎಫ್‌ ಘಟಕದ ಐಜಿ ಮತ್ತು ಡಿಐಜಿ ಅವರೊಂದಿಗೆ ಜಿಲ್ಲಾ ರಕ್ಷಣಾಧಿಕಾರಿ ಅಭಿನವ್‌ ಖರೆ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಜಾಗದ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದ್ದು,
ಮಂಜೂರಾತಿ ಪತ್ರ ಶೀಘ್ರ ಬರಲಿದೆ ಎಂದು ತಿಳಿದು ಬಂದಿದೆ.

Advertisement

ರಾಜ್ಯದ ಯಾವುದೇ ಪ್ರದೇಶದಲ್ಲಿ ಸೂಕ್ಷ್ಮಪರಿಸ್ಥಿತಿ ಎದುರಾದಾಗ ತಮಿಳುನಾಡು ಅಥವಾ ನೆರೆ ರಾಜ್ಯದಲ್ಲಿರುವ
ಆರ್‌ಎಎಫ್‌ನ್ನು ಕರೆಸಬೇಕಾಗಿತ್ತು. ಇದಕ್ಕೆ ಎರಡು ಮೂರು ದಿನ ಹಿಡಿಯುತ್ತಿತ್ತು. ಕರ್ನಾಟಕದಲ್ಲಿ ಘಟಕದ ಅಗತ್ಯವಿರುವ
ಬಗ್ಗೆ ಹಲವು ಬಾರಿ ಪ್ರತಿಪಾದಿಸಲಾಗಿತ್ತು. ಇತ್ತೀಚೆಗೆ ವಿಧಾನಸಭೆಯಲ್ಲಿ ಸ್ಥಳೀಯ ಶಾಸಕ ಕೆ.ಬಿ.ಪ್ರಸನ್ನಕುಮಾರ್‌ ಅವರು ಶಿವಮೊಗ್ಗದಲ್ಲಿ ಸಿಆರ್‌ಪಿಎಫ್‌ ಅಥವಾ ಆರ್‌ಎಎಫ್‌ ಘಟಕ ಸ್ಥಾಪಿಸುವಂತೆ ಕೇಂದ್ರ ಸರಕಾರದ ಮೇಲೆ ರಾಜ್ಯ
ಸರಕಾರ ಒತ್ತಡ ಹೇರಬೇಕು ಎಂದು ಆಗ್ರಹಿಸಿದ್ದರು. ಕಾಕತಾಳೀಯ ಎಂಬಂತೆ ತಿಂಗಳೊಳಗಾಗಿ ಶಿವಮೊಗ್ಗದಲ್ಲಿ ಈ ಘಟಕ ಸ್ಥಾಪನೆಯಾಗುತ್ತಿದೆ.

ಶಿವಮೊಗ್ಗ ನಗರದಲ್ಲಿ ಗಣೇಶೋತ್ಸವ ಸೇರಿದಂತೆ ಹಲವು ಸಂದರ್ಭದಲ್ಲಿ ಕೋಮು ಗಲಭೆ ನಡೆಯುತ್ತಿರುತ್ತದೆ.
ಇದೀಗ ಮಂಗಳೂರಿನಲ್ಲಿ ನಡೆದ ಕೋಮು ಗಲಭೆ ಇಡೀ ರಾಜ್ಯದಲ್ಲಿ ಸುದ್ದಿ ಮಾಡಿದೆ. ಕ್ಷಿಪ್ರ ಕಾರ್ಯಪಡೆ ಇದ್ದಲ್ಲಿ ಇಂತಹ
ಸನ್ನಿವೇಶವನ್ನು ಸಮರ್ಥವಾಗಿ ನಿಭಾಯಿಸಬಹುದು. ಮಧ್ಯ ಕರ್ನಾಟಕದ ಕೇಂದ್ರ ಬಿಂದುವಾದ ಶಿವಮೊಗ್ಗದಲ್ಲಿ ಇದು
ಸ್ಥಾಪನೆಯಾಗುವುದರಿಂದ ಇಡೀ ರಾಜ್ಯಕ್ಕೆ ಅನುಕೂಲವಾಗಲಿದೆ.

ಪೊಲೀಸ್‌ ಇಲಾಖೆಯ ಜಾಗ: ಮಾಚೇನಹಳ್ಳಿಯಲ್ಲಿ ಪೊಲೀಸ್‌ ಇಲಾಖೆಗೆ ಸೇರಿದ 90 ಎಕರೆ ಜಾಗ ಇದ್ದು, ಇದರಲ್ಲಿ
50 ಎಕರೆ ಜಾಗವನ್ನು ಆರ್‌ಎಎಫ್‌ ಘಟಕಕ್ಕೆ ನೀಡಲು ಪೊಲೀಸ್‌ ಇಲಾಖೆ ಒಪ್ಪಿಗೆ ನೀಡಿದೆ. ವಾಸ್ತವವಾಗಿ ಆರ್‌ಎಎಫ್‌ ಘಟಕ ಸ್ಥಾಪನೆಯಾಗಲು ಕನಿಷ್ಠ 54 ಎಕರೆ ಜಾಗ ಬೇಕಾಗುತ್ತದೆ. ಆದರೆ, ಈಗ ಸಿಕ್ಕಿರುವ 50 ಎಕರೆ ಪ್ರದೇಶ
ಉತ್ತಮವಾಗಿದ್ದು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ಜಾಗ ಒಪ್ಪಿಗೆಯಾಗುವ ಸಾಧ್ಯತೆಯಿದೆ. ಈಗಾಗಲೇ ಉನ್ನತಾಧಿಕಾರಿಗಳು ಈ ಸ್ಥಳದ ಪರಿಶೀಲನೆ ನಡೆಸಿದ್ದು, ಇನ್ನೊಮ್ಮೆ ಸರ್ವೆ ಮಾಡಲಾಗುತ್ತಿದೆ. ಸಿಆರ್‌ಪಿಎಫ್‌ನ ಅಂಗವಾದ ಆರ್‌ಎಎಫ್‌ಗೆ ಅಗತ್ಯವಾದ 1,200 ಸಿಬ್ಬಂದಿಯನ್ನು ನೇಮಕ ಮಾಡಿ
ಕೊಂಡಿದ್ದು ಅವರಿಗೆ ತರಬೇತಿ ನೀಡಲಾಗುತ್ತಿದೆ. ಇನ್ನೊಂದೆರಡು ತಿಂಗಳಲ್ಲಿ ತರಬೇತಿ ಮುಗಿದು ಅವರನ್ನು ನಿಯೋಜನೆ
ಗೊಳಿಸಲಾಗುತ್ತದೆ. ಘಟಕದ ನೆರವನ್ನು ನೆರೆಯ ಜಿಲ್ಲೆ ಹಾಗೂ ಹಾಗೂ ರಾಜ್ಯಗಳಿಗೂ ಬಳಸಿಕೊಳ್ಳಲಾಗುತ್ತದೆ.

ಸುಮಾರು 120 ಕೋಟಿ ರೂ.ವೆಚ್ಚದಲ್ಲಿ ಈ ಹೊಸ ತುಕಡಿ ಸ್ಥಾಪನೆಯಾಗಲಿದೆ. ಆರ್‌ಎಎಫ್‌ನ 1,200 ಸಿಬ್ಬಂದಿ ಹಾಗೂ ಅವರ ಕುಟುಂಬಕ್ಕಾಗಿ 50 ಎಕರೆಯಲ್ಲಿ ಟೌನ್‌ಶಿಪ್‌, ಕಚೇರಿ ಮತ್ತಿತರ ಮೂಲ ಸೌಕರ್ಯ ನಿರ್ಮಾಣವಾಗಲಿದೆ.
ಸಿಬ್ಬಂದಿಗೆ ವಸತಿ ಹಾಗೂ ವೈದ್ಯಕೀಯ ಸೌಕರ್ಯ ಒದಗಿಸಲಾಗುತ್ತದೆ. ಆರ್‌ ಎಎಫ್‌ ಘಟಕ ಗೃಹ ಸಚಿವಾಲಯದ
ಅಧೀನದಡಿ ಕೆಲಸ ಮಾಡಲಿದ್ದು, ಕೇಂದ್ರ ಸರಕಾರ ನೀಡುವ ಸೂಚನೆ ಪಾಲಿಸಲಿದೆ. ಸಿಆರ್‌ಪಿಎಫ್‌ನಲ್ಲಿದ್ದವರು 6 ವರ್ಷ ಆರ್‌ಎಎಫ್‌ನಲ್ಲಿ ನಿಯೋಜನೆ ಮೇಲೆ ಕೆಲಸ ಮಾಡಲು ಅವಕಾಶ ಇದೆ. ಈಗಾಗಲೇ ಮಾಚೇನಹಳ್ಳಿಯಲ್ಲಿ
ಕೆಎಸ್‌ಆರ್‌ಪಿಯ 8ನೇ ಬೆಟಾಲಿಯನ್‌ನ್ನು ಒಳಗೊಂಡಿರುವ ಜಿಲ್ಲೆಗೆ ಆರ್‌ಎಎಫ್‌ ತುಕಡಿ ಸ್ಥಾಪನೆ ಮತ್ತೂಂದು ಗರಿಯಾಗಿ ಸೇರ್ಪಡೆಯಾಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next