Advertisement

ಕೇಂದ್ರದ ವರದಿ ಸುಳ್ಳೆಂದ ರಾಜ್ಯ ಸರ್ಕಾರ

10:45 PM Dec 18, 2019 | Team Udayavani |

ಬೆಂಗಳೂರು: “ಅಶ್ಲೀಲ ಚಿತ್ರಗಳಿಗೆ’ ಮಕ್ಕಳನ್ನು ಬಳಸಿಕೊಳ್ಳುವುದು ಸೇರಿ ರಾಜ್ಯದಲ್ಲಿ 2018ರಲ್ಲಿ ಒಟ್ಟು 113 ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣ ನಡೆದಿವೆ ಎಂಬ ಕೇಂದ್ರ ಸರ್ಕಾರದ ವರದಿಯೇ ಸುಳ್ಳು, ಅಂತಹ ಘಟನೆಗಳೇ ನಡೆದಿಲ್ಲ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ.

Advertisement

ರಾಜ್ಯದಲ್ಲಿ ಬಾಲ ನ್ಯಾಯ (ಮಕ್ಕಳ ಕಾಳಜಿ ಹಾಗೂ ಸುರಕ್ಷತೆ)ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಸ್ವಯಂ ಪ್ರೇರಿತವಾಗಿ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ “ಬಚಪನ್‌ ಬಚಾವೊ ಸ್ವಯಂ ಸೇವಾ ಸಂಸ್ಥೆ’ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕ್‌ ಹಾಗೂ ನ್ಯಾ.ಪ್ರದೀಪ್‌ ಸಿಂಗ್‌ ಯೆರೂರ್‌ ಅವರಿದ್ದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ವಕೀಲರಾದ ಪಿ.ಬಿ.ಅಚ್ಚಪ್ಪ ವಾದ ಮಂಡಿಸಿ, ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ವರದಿಯೇ ಸುಳ್ಳು, ಅಂತಹ ಘಟನೆ ರಾಜ್ಯದಲ್ಲಿ ಎಲ್ಲೂ ನಡೆದಿಲ್ಲ. ಎಲ್ಲೂ ದೂರು ಕೂಡ ದಾಖಲಾಗಿಲ್ಲ ಎಂದು ಮೌಖೀಕವಾಗಿ ಹೇಳಿದರು.

ಅದಕ್ಕೆ ನ್ಯಾಯಪೀಠ, ಕೇಂದ್ರದ ವರದಿ ತಪ್ಪು ಎಂದು ಮೌಖೀಕವಾಗಿ ಹೇಳುವುದನ್ನು ಒಪ್ಪಲಾಗದು. ಆ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಿ. ಅಷ್ಟಕ್ಕೂ, ಕೇಂದ್ರದ ವರದಿ ತಪ್ಪು ಎಂದು ಹೇಳಲು ನಿಮ್ಮ ಬಳಿ ಆಧಾರವೇನು? ನೀವು ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸಿದ್ದೀರಾ ಎಂದು ಪ್ರಶ್ನಿಸಿದ ನ್ಯಾಯಪೀಠ, ಆ ಬಗ್ಗೆ ಸರ್ಕಾರ ಮುಂದಿನ ವಿಚಾರಣೆ ವೇಳೆಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಜ.10ಕ್ಕೆ ಮುಂದೂಡಿತು.

ನ್ಯಾಯಪೀಠ ಕಳೆದ ವಿಚಾರಣೆ ವೇಳೆ, 2018ರಲ್ಲಿ ಕರ್ನಾಟಕದಲ್ಲಿ ದಾಖಲಾದ 113 ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ಯಾವುದಾದರೂ ತನಿಖೆ ಮಾಡಲಾಗಿದೆಯೇ ಇಲ್ಲವೇ, ಇಲ್ಲವಾದರೆ ಯಾವ ತನಿಖೆ ಮಾಡಬಹುದು ಎಂಬ ಬಗ್ಗೆ ವಿವರಣೆ ನೀಡುವಂತೆ ಸೂಚನೆ ನೀಡಿತು.

Advertisement

ಕೇಂದ್ರ ಮಹಿಳಾ ಮತ್ತು ಮಕ್ಕಳು ಕಲ್ಯಾಣ ಸಚಿವಾಲಯ 2018ರಲ್ಲಿ ಬಿಡುಗಡೆ ಮಾಡಿರುವ ವರದಿಯಲ್ಲಿ ಕರ್ನಾಟಕದಲ್ಲಿ 87 ಬಾಲಕರು 26 ಬಾಲಕಿಯರು ಸೇರಿ 113 ಮಕ್ಕಳು ಲೈಂಗಿಕ ದೃಶ್ಯಗಳಿಗೆ (ಚೈಲ್ಡ್‌ ಪೋರ್ನೋಗ್ರಫಿ) ಒಳಗಾಗಿದ್ದಾರೆ ಎಂದು ತಿಳಿಸಲಾಗಿದೆ. ಆದರೆ, ಈ ಸಂಬಂಧ ರಾಜ್ಯದ ಪೊಲೀಸರು ಈ ತನಕ ಎಫ್‌ಐಆರ್‌ ದಾಖಲಿಸಿಲ್ಲ ಮತ್ತು ಯಾವುದೇ ತನಿಖೆ ನಡೆಸಿಲ್ಲ ಎಂಬುದು ಅರ್ಜಿದಾರರ ವಾದ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ದೂರನ್ನು ದಾಖಲಿಸಿಕೊಳ್ಳಲು ಸೈಬರ್‌ ಕ್ರೈಂ ನಿಗಾ ವಹಿಸಬೇಕು. ಅಲ್ಲದೆ, ಇಂತಹ ಸೂಕ್ಷ್ಮ ಪ್ರಕರಣಗಳನ್ನು ನಿರ್ವಹಿಸಲು ತರಬೇತಿ ಪಡೆದ ಪ್ರತ್ಯೇಕ ಪೊಲೀಸರನ್ನು ನಿಯೋಜಿಸುವ ಅವಶ್ಯಕತೆ ಇದೆ ಎಂದು ಅರ್ಜಿದಾರರು ಕೋರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next