Advertisement

ರಾಜ್ಯ ಸರಕಾರದ ಅಭಿವೃದ್ಧಿಯೇ ಗೆಲುವಿಗೆ ಶ್ರೀರಕ್ಷೆ: ಪ್ರಮೋದ್‌

01:49 AM Apr 16, 2019 | Sriram |

ಉಡುಪಿ: ಸರ್ವರಿಗೂ ಸಮಬಾಳು, ಸಮಪಾಲು ಸಿದ್ಧಾಂತದ ಸಂವಿಧಾನವನ್ನು ನೀಡುವ ಮೂಲಕ ದೇಶದ ಜನರ ಜೀವನಮಟ್ಟವನ್ನು ಉನ್ನತಿಗೇರಿಸಿದ ಕೀರ್ತಿ ಕಾಂಗ್ರೆಸ್‌ ಪಕ್ಷದ್ದಾಗಿದೆ. ಶಿಕ್ಷಣ, ಆರೋಗ್ಯ, ವಿಜ್ಞಾನ, ಬ್ಯಾಂಕಿಂಗ್‌, ಕೃಷಿ ಮುಂತಾದ ಕ್ಷೇತ್ರಗಳಿಗೆ ಕಾಂಗ್ರೆಸ್‌ ಪಕ್ಷದ ಅಧಿಕಾರದ ಅವಧಿಯಲ್ಲಿ ಪ್ರಾಧಾನ್ಯ ನೀಡುವ ಮೂಲಕ ವಿಶ್ವದ ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ನಮ್ಮ ಭಾರತ ದೇಶವು ಮುಂಚೂಣಿ ಸ್ಥಾನಕ್ಕೇರಲು ಸಾಧ್ಯವಾಯಿತು ಎಂದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಕಳಸದಲ್ಲಿ ನಡೆದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್‌ ಎಂದರೆ ಅದು ಕೇವಲ ಪಕ್ಷವಲ್ಲ. ಅದು ಅಭಿವೃದ್ಧಿಯ ಸಂಕೇತವೂ ಹೌದು. ಸಿದ್ಧರಾಮಯ್ಯ ಆಡಳಿತ ಅವಧಿಯಲ್ಲಿ ಕರ್ನಾಟಕ ರಾಜ್ಯ ಸಮಗ್ರ ಅಭಿವೃದ್ಧಿಯನ್ನು ಕಂಡಿತ್ತಲ್ಲದೆ ಅನ್ನ ಭಾಗ್ಯ, ಪಶುಭಾಗ್ಯ ಯೋಜನೆ, ವಸತಿ ಯೋಜನೆ, ಮನಸ್ವಿನಿ, ಮಾತೃಪೂರ್ಣ, ವಿದ್ಯಾಸಿರಿ, ಶಾದಿ ಭಾಗ್ಯ, ಅನಿಲ ಭಾಗ್ಯ, ಅಂಗವಿಕಲ ವೇತನ ಮತ್ತು ವೃದ್ದಾಪ್ಯವೇತನ, ಪುನರ್‌ಬೆಳಕು ಯೋಜನೆಗಳಂತಹ ಎಲ್ಲ ವರ್ಗಗಳಿಗೂ ಬೆಂಬಲ ನೀಡುವ ಯೋಜನೆಗಳನ್ನು ರೂಪಿಸಲಾಗಿತ್ತು. ರಾಜ್ಯದ 6.5 ಕೋಟಿ ಜನರ ಪೈಕಿ ಶೇ.95 ರಷ್ಟು ಜನರು ಜಾತಿ ಬೇಧ ಮರೆತು ಈ ಯೋಜನೆಯ ಫ‌ಲಾನುಭವಿಗಳಾಗಿದ್ದಾರೆ. ಜನರಿಗೆ ಮೂಲಸೌಕರ್ಯವನ್ನು ಒದಗಿಸಿಕೊಟ್ಟಿರುವುದು ಅಲ್ಲದೆ ಗ್ರಾಮೀಣಾಭಿವೃದ್ಧಿಗಾಗಿ ಸ್ಮಾರ್ಟ್‌ ಗ್ರಾಮ ಪಂಚಾಯತ್‌, ನಗರಾಭಿವೃದ್ಧಿಗಾಗಿ ಸ್ಮಾಟ್‌ ಸಿಟಿ ಯೋಜನೆಯನ್ನು ರೂಪಿಸಿ ಗ್ರಾಮೀಣ ಹಾಗೂ ನಗರದ ಆಭಿವೃದ್ಧಿಗಾಗಿ ಸರಕಾರ ಹೆಚ್ಚಿನ ಆದ್ಯತೆ ನೀಡಿತ್ತು ಎಂದರು.

ಸಿದ್ಧರಾಮಯ್ಯನವರ ನೇತೃತ್ವದ ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ರಾಜ್ಯ ದೃಢವಾದ ಬೆಳವಣಿಗೆಯನ್ನು ಕಂಡಿದೆ. ತನ್ನ ಎಲ್ಲ ಆರ್ಥಿಕ ಸುಧಾರಣೆಯಲ್ಲೂ ಏರಿಕೆಯನ್ನು ದಾಖಲಿಸಿದೆ. ಕೇವಲ ಐದು ವರ್ಷಗಳ ಅವಧಿಯಲ್ಲಿ 5 ಲಕ್ಷಕ್ಕಿಂತಲೂ ಮಿಗಿಲಾಗಿ ಉದ್ಯೋಗಗಳನ್ನು ಬೇರೆ ಬೇರೆ ವಲಯಗಳಲ್ಲಿ ಸೃಷ್ಟಿಸಿದೆ. ಕರಾವಳಿ ಪ್ರದೇಶವಾದ ಮಂಗಳೂರು, ಉಡುಪಿ ಮತ್ತು ಕಾರವಾರ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿತ್ತು. ಸಿದ್ಧರಾಮಯ್ಯನವರ ಆಡಳಿತಾವಧಿಯಲ್ಲಿ ರೂಪಿಸಲಾಗಿದ್ದ ಯೋಜನೆಗಳೊಂದಿಗೆ ಈಗಿನ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಸರಕಾರವು ಹೊಸ ಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಿ ರಾಜ್ಯದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದೆ ಎಂದರು.

ಜನಗಳ ಮಧ್ಯೆ ಹೋಗದೆ ಕೆಲಸವನ್ನು ಮಾಡದೆ ಇರುವವರು ಗೆಲ್ಲುತ್ತೇವೆ ಎಂದು ಘಂಟಾಘೋಷವಾಗಿ ಹೇಳುತ್ತಿರುವಾಗ ಜನಸಾಮಾನ್ಯರ ಮಧ್ಯೆ ಇದ್ದು ಕೆಲಸ ಮಾಡಿದ, ಸಚಿವ ಸ್ಥಾನದ ಅವಧಿಯಲ್ಲಿ ಕ್ಷೇತ್ರವನ್ನು ಸಮಗ್ರ ಅಭಿವೃದ್ಧಿ ಪಥದತ್ತ ಕೊಂಡೊಯ್ದ ನನ್ನನ್ನು ಕ್ಷೇತ್ರದ ಜನತೆ ಬೆಂಬಲಿಸುವುದರಲ್ಲಿ ಯಾವುದೇ ಸಂಶಯ ವಿಲ್ಲ. ಮೋದಿ ಅಲೆಯಲ್ಲಿ ಗೆದ್ದವರು ಹೆಸರನ್ನು ಉಳಿಸಿ ಕೊಳ್ಳಲಿಲ್ಲ. ಮೋದಿಯೂ ನೀಡಿದ ಭರವಸೆ ಈಡೇರಿಸಿಲ್ಲ ಎಂದು ಪ್ರಮೋದ್‌ ಮಧ್ವರಾಜ್‌ ಹೇಳಿದರು.ಸಭೆಯಲ್ಲಿ ಮಾಜಿ ಸಚಿವೆ ಮೋಟಮ್ಮ ಮತ್ತು ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಪ್ರಮುಖ ನಾಯಕರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next