Advertisement

ಸರ್ವರಿಗೂ ಸಮಬಾಳು ಕಲ್ಪಿಸಿದ ರಾಜ್ಯ ಸರ್ಕಾರ

03:42 PM Mar 12, 2018 | |

ಮುದ್ದೇಬಿಹಾಳ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ತಾನು ಬಡವರು, ದೀನ
ದಲಿತರು, ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಇರುವ ಸರ್ಕಾರ ಎನ್ನುವುದನ್ನು ಸಾಬೀತು ಪಡಿಸಿದೆ ಎಂದು ಶಾಸಕ, ರಾಜ್ಯ
ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್‌. ನಾಡಗೌಡ ಹೇಳಿದರು.

Advertisement

ಪಟ್ಟಣದ ಮಹೆಬೂಬ ನಗರ ಬಡಾವಣೆಯಲ್ಲಿ ಪುರಸಭೆ ವತಿಯಿಂದ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ನನ್ನ 25-30 ವರ್ಷದ ರಾಜಕೀಯದಲ್ಲಿ ಇಂಥ ಸಿಎಂ ಕಂಡಿಲ್ಲ. ಸರ್ವರಿಗೂ ಸಮಪಾಲು, ಸಮಬಾಳು ತತ್ವದಡಿ ಸಿಎಂ ಕೆಲಸ ಮಾಡಿದ್ದಾರೆ. ನನಗೆ ಕಾಂಗ್ರೆಸ್‌ ಟಿಕೆಟ್‌ ಕೊಡದಿದ್ದರೂ ನಾನು ಕಾಂಗ್ರೆಸ್‌ನಲ್ಲೇ ಇರುತ್ತೇನೆ. ಅಧಿಕಾರಕ್ಕಾಗಿ ರಾಜಕಾರಣ ಮಾಡೊಲ್ಲ. ಸ್ವರ್ಗ ಸೃಷ್ಟಿಸುವುದು ಯಾರಿಂದಲೂ ಸಾಧ್ಯವಿಲ್ಲ. ಆದರೆ ಗೌರವಯುತವಾಗಿ
ಬಾಳುವಷ್ಟು ಮೂಲಸೌಕರ್ಯ ಕೊಡುವ ಕೆಲಸ ನಮ್ಮಿಂದ ಆಗಿದೆ ಎಂದರು.

ಮತಕ್ಕಾಗಿ ಯಾರಾದರೂ ಹಣ ಕೊಟ್ರೆ ನಿರಾಕರಿಸಬೇಡಿ. ದಿನಕ್ಕೆ ನೂರು ಕೊಟ್ರೆ ತಿಂಗಳಿಗೆ 3000 ರೂ. ಆಯ್ತು. ನಿಮಗೆ ಆದಾಯ ಬಂದು ಹೊಟ್ಟೆ ತುಂಬುತ್ತೆ. ಆದರೆ ಹಣಕ್ಕಾಗಿ ನಿಮ್ಮ ಪವಿತ್ರ ಮತ ಮಾರಿಕೊಳ್ಳಬೇಡಿ. ಉತ್ತಮರಿಗೆ ಮಾತ್ರ ಮತ ಹಾಕಿ. ನಾನು ಪುರಸಭೆ ಸಹಿತ ಸ್ಥಳೀಯ ಸಂಸ್ಥೆ ಆಡಳಿತದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಮಾಡಿದ್ದನ್ನು ಸಾಬೀತು ಪಡಿಸಿದ್ರೆ ರಾಜಕೀಯ ಬಿಟ್ಟು ಮನೆಯಲ್ಲಿ ಕೂಡುತ್ತೇನೆ. ಇಲ್ಲಿನ ಪುರಸಭೆ ಆಡಳಿತ ಪಕ್ಷಾತೀತವಾಗಿ ಅಭಿವೃದ್ಧಿ ಕೆಲಸ ಮಾಡಿದ್ದಕ್ಕೆ ಅಭಿನಂದಿಸುತ್ತೇನೆ. ಎಲ್ಲರೂ ತಮ್ಮ ಮಕ್ಕಳನ್ನು ಶಿಕ್ಷಣವಂತರಾಗಿ ಮಾಡಿ ಎಂದರು.

ಮತಕ್ಷೇತ್ರದಲ್ಲಿ ಕೆಲವರು ಯಾರಿಗಾದರೂ ಅಪಘಾತ ಆದಾಗ 5000, 10000 ರೂ. ಕೊಡ್ತಿದ್ದಾರೆ. ಹಿಂಗಾದರೆ ಇನ್ಸೂರೆನ್ಸ್‌ ಕಂಪನಿ ಯಾಕಿರಬೇಕು. ಪ್ರತಿಯೊಂದು ಮನೆಯಲ್ಲಿ ಸತ್ತಾಗ, ಆಕ್ಸಿಡೆಂಟ್‌ ಆದಾಗ ಎಲ್ಲರ ಮನೆಗೆ ಹೋಗಿ 50,000 ರೂ. ಕೊಡ್ತೀನಿ ಎಂದು ಯಾರಾದರೂ ಘೋಷಣೆ ಮಾಡಿದ್ರೆ ನಾನಿಂದೇ ರಾಜಕೀಯ ಬಿಟ್ಟು ಮನೆಯಲ್ಲಿ ಕೂಡ್ತೇನೆ ಎಂದು ಸವಾಲು ಹಾಕಿದ ಶಾಸಕರು ಅಂಥವರು ನಮ್ಮ ಮನಸ್ಸನ್ನ ಭ್ರಷ್ಟ ಮಾಡ್ತಿದ್ದಾರೆ. ಇಂಥವರಿಂದ ಎಚ್ಚರಾಗಿರಿ. ಭಗವಂತನ ಹೊರತುಪಡಿಸಿ ಯಾರ ಹಂಗಿನಲ್ಲೂ ಬದುಕುವುದನ್ನು ಕಲಿಯದೆ ಸ್ವಾಭಿಮಾನದ ಬದುಕು ರೂಢಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.

Advertisement

ಪುರಸಭೆ ಅಧ್ಯಕ್ಷ ಬಸನಗೌಡ ಪಾಟೀಲ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಬ್ದುಲ್‌ಗ‌ಫೂರ ಮಕಾನದಾರ, ಪುರಸಭೆ ಮಾಜಿ ಅಧ್ಯಕ್ಷ ಎಸ್‌.ಜಿ. ಪಾಟೀಲ, ಎಪಿಎಂಸಿ ನಿರ್ದೇಶಕ ವೈ. ಎಚ್‌. ವಿಜಯಕರ ಮಾತನಾಡಿ, ಚುನಾವಣೆ ಸಮೀಪಿಸುತ್ತಿದ್ದು
ಹಲವರು ಮತ ಕೇಳಲು ಬರುತ್ತಾರೆ. ಜನರು ಎಚ್ಚರಿಕೆಯಿಂದ ಇರಬೇಕು. ಮುಂದಿನ ದಿನಗಳಲ್ಲಿ ಶಾಂತ ಜೀವನ
ನಡೆಸಬೇಕಿದ್ದರೆ ಜನತೆ ನಾಡಗೌಡರನ್ನೇ ಮತ್ತೂಮ್ಮೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ಪುರಸಭೆ ಉಪಾಧ್ಯಕ್ಷೆ ಫಾತಿಮಾ ನಾಯ್ಕೋಡಿ, ಎಪಿಎಂಸಿ ಅಧ್ಯಕ್ಷ ಗುರಣ್ಣ ತಾರನಾಳ, ರಾಹುಲ್‌ ನಾಡಗೌಡ,
ಪುರಸಭೆ ಸದಸ್ಯರಾದ ಮಹಿಬೂಬ ಗೊಳಸಂಗಿ, ಸಾಹೇಬಲಾಲ ಬಾವೂರ, ಶಾಜಾದಬಿ ಹುಣಚಗಿ, ಶಂಕರ ಕಡಿ, ಗೋಪಿ ಮಡಿವಾಳರ, ಬಸವರಾಜ ಮುರಾಳ, ಸಂತೋಷ ನಾಯ್ಕೋಡಿ, ಮನೋಹರ ತುಪ್ಪದ, ಕೃಷ್ಣಾಜಿ
ಪವಾರ, ಆಶ್ರಯ ಸಮಿತಿ ಸದಸ್ಯ ಬಸವರಾಜ ಹುರಕಡ್ಲಿ, ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ, ರಮೇಶ
ಮಾಡಬಾಳ, ವಿನೋದ ಝಿಂಗಾಡೆ ವೇದಿಕೆಯಲ್ಲಿದ್ದರು. ಶಾಸಕರನ್ನು ಪುರಸಭೆ ಆಡಳಿತ, ಜನತೆ ಪರವಾಗಿ ಸನ್ಮಾನಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next