ಬೀದರ : ಕೋವಿಡ್ ಸಾವಿನ ಪ್ರಕರಣಗಳಲ್ಲಿ ರಾಜ್ಯ ಸರ್ಕಾರ ಸುಳ್ಳು ಲೆಕ್ಕ ನೀಡುತ್ತಿದ್ದು, ಸೋಂಕಿನಿಂದ ಸತ್ತವರ ಮಾಹಿತಿ ಪಡೆಯಲು ಡೆತ್ ಆಡಿಟ್ ನಡೆಸಿ ಅವರಿಗೆ ಪರಿಹಾರ ನೀಡಬೇಕು. ಈ ವಿಷಯದಲ್ಲಿ ಮೃತರಿಗೆ ನ್ಯಾಯ ಸಿಗದಿದ್ದರೆ ಕಾಂಗ್ರೆಸ್ ಕೋರ್ಟ್ ಮೆಟ್ಟಲು ಹತ್ತಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೊರೊನಾ ಸಾವಿನ ಸುಳ್ಳು ಲೆಕ್ಕಗಳನ್ನು ಅಂಕಿ- ಸಂಖ್ಯೆ ಸಮೇತ ಬಹಿರಂಗಗೊಳಿಸಿದರು. ಸರ್ಕಾರದ ಅಪರಾಧಿಕ ನಿರ್ಲಕ್ಷ, ಬೇಜವಾಬ್ದಾರಿತನವೇ ರಾಜ್ಯದಲ್ಲಿ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ಡೆತ್ ಆಡಿಟ್ ನಡೆಸಿ ಕೋವಿಡ್‌ನಿಂದ ಮೃತಪಟ್ಟ ಎಲ್ಲರಿಗೂ ಪರಿಹಾರ ಸಿಗಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕೋವಿಡ್‌ನಿಂದ ರಾಜ್ಯದಲ್ಲಿ35 ಸಾವಿರ ಜನ ಮಾತ್ರ ಸಾವನ್ನಪ್ಪಿದ್ದಾರೆ ಎಂದು ಬುಲೇಟಿನ್ ಮೂಲಕ ಸರ್ಕಾರ ಅಂಕಿ ಸಂಖ್ಯೆ ನೀಡಿದೆ. ಆದರೆ, ನಮ್ಮ ಮಾಹಿತಿ ಪ್ರಕಾರ ಮೃತರ ಸಂಖ್ಯೆ 3 ಲಕ್ಷ ದಾಟಿದೆ. ಬೀದರ ಜಿಲ್ಲೆಯೊಂದರಲ್ಲೇ ಏ. 15 ರಿಂದ ಮೇ 15 ರವರೆಗೆ 557 ಜನ ಪ್ರಾಣ ತೆತ್ತಿರುವ ದಾಖಲೆಗಳು ನನ್ನ ಬಳಿ ಇದೆ. ಆದರೆ, ಬುಲೆಟಿನ್‌ನಲ್ಲಿ ಕೇವಲ 141 ಎಂದು ತೋರಿಸಲಾಗಿದೆ. ಇದು ಕೇವಲ ಬ್ರಿಮ್ಸ್ ಆಸ್ಪತ್ರೆಯ ಮಾಹಿತಿ ಇದ್ದು, ಇದಕ್ಕೆ ಹೊರತಾಗಿ ಖಾಸಗಿ, ತಾಲೂಕು ಆಸ್ಪತ್ರೆ ಮತ್ತು ಚಿಕಿತ್ಸೆಗಾಗಿ ನೆರೆ ರಾಜ್ಯಕ್ಕೆ ಹೋಗಿ ಮೃತಪಟ್ಟವರ ಲೆಕ್ಕವೇ ಇಲ್ಲ. ಕೊರೊನಾದಿಂದ ಈವರೆಗೆ ಬೀದರ ಜಿಲ್ಲೆಯಲ್ಲಿ ೨೫೦೦-೩೦೦೦ ಸೋಂಕಿತರು ಮೃತಪಟ್ಟಿರುವ ಅಂದಾಜು ಇದ್ದು, ಸರ್ಕಾರ 371 ಸಾವಿನ ಸಂಖ್ಯೆ ನೀಡಿದೆ ಎಂದು ತಿಳಿಸಿದರು.
ಸತ್ತ ಹೆಣಗಳ ಮೇಲೆ ಕಾಂಗ್ರೆಸ್ ಎಂದಿಗೂ ರಾಜಕೀಯ ಮಾಡುವುದಿಲ್ಲ, ವ್ಯವಸ್ಥೆ ಸರಿಯಾಗಬೇಕು ಎಂಬುದು ಪಕ್ಷದ ಉದ್ದೇಶ. ಇದಕ್ಕಾಗಿ ಆರಂಭದಿಂದಲೂ ಹೋರಾಟ ನಡೆಸಿಕೊಂಡು ಬಂದಿದೆ. ಕಾಂಗ್ರೆಸ್ ಒತ್ತಡದ ಪರಿಣಾಮವೇ ಇಂದು ಸರ್ಕಾರ ಮೃತ ಬಿಪಿಎಲ್ ಕಾರ್ಡ್‌ದಾರರಿಗೆ 1 ಲಕ್ಷ ರೂ. ಪರಿಹಾರ ಘೋಷಿಸಿದೆ. ಆದರೆ, ವಿಪತ್ತು ಸಂದರ್ಭದಲ್ಲಿ 5 ಲಕ್ಷ ರೂ. ಪರಿಹಾರ ನೀಡಬೇಕು ಎಂಬುದು ತಮ್ಮ ಒತ್ತಾಯ ಇದೆ. ಜತೆಗೆ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಕೇಂದ್ರದಿಂದ ೨ ಲಕ್ಷ ರೂ. ಘೋಷಣೆ ಸಾಧ್ಯತೆ ಇದೆ ಎಂದು ಹೇಳಿದರು.
ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಗಳನ್ನು ಭೇಟಿ ಮಾಡಿ ಸಾಂತ್ವನ ಹೇಳುವ ಕಾಂಗ್ರೆಸ್ ಸಹಾಯ ಹಸ್ತ ಕಾರ್ಯಕ್ರಮ ಜು.7 ರಿಂದ ರಾಜ್ಯಾದ್ಯಂತ ಆರಂಭವಾಗಲಿದೆ. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಆ ಕುಟುಂಬಗಳಿಗೆ ಅತ್ಮಸ್ಥ್ರೆರ್ಯ ತುಂಬುವುದ ಜತಗೆ ನೆರವು ನೀಡಲು ಮಾಹಿತಿ ಸಂಗ್ರಹಿಸುವರು. ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾದವರ ಕುಟುಂಬಗಳ ಮಾಹಿತಿ, ಅವರಿಗೆ ಸರ್ಕಾರದಿಂದ ಇದುವರೆಗೆ ದೊರೆತಿರುವ ಪರಿಹಾರ, ಪ್ಯಾಕೇಜ್‌ಗಳ ಬಗ್ಗೆ ಮಾಹಿತಿ ಮತ್ತು ಸೋಂಕಿನಿಂದ ಮೃತಪಟ್ಟಿದ್ದರೆ ಅಂಥವರ ಮರಣ ಪ್ರಮಾಣ ಪತ್ರದಲ್ಲಿ ಕೋವಿಡ್‌ನಿಂದ ಸಾವು ಎಂದು ನಮೂದಿಸಿರುವ ನಿಖರ ಮಾಹಿತಿ ಸಂಗ್ರಹಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.