ಬೆಂಗಳೂರು: ದಕ್ಷಿಣ ಕನ್ನಡದ ಬಿಸಿ ರೋಡ್‌ನಲ್ಲಿ ನಡೆದಿರುವ ಆರ್‌ಎಸ್‌ಎಸ್ ಕಾರ್ಯಕರ್ತನ ಹತ್ಯೆಯಿಂದ ಉದ್ಬವಿಸಿರುವ ಕೋಮು ಸಂಘರ್ಷಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಆರೋಪಿಸಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 15 ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಕೋಮು ಸಾಮರಸ್ಯ ಹಾಳಾಗುತ್ತಿದೆ. ಇದನ್ನ ತಡೆಗಟ್ಟಲು ರಾಜ್ಯ ಸರ್ಕಾರ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಪರೋಕ್ಷವಾಗಿ ಈ ಘಟನೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಮತ್ತು ಇತರ ಸಚಿವರು ಬೆಂಬಲ ನೀಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಜನರನ್ನು ಪ್ರಚೋದಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
“”ಸ್ವಾಮೀ.. ಸಿದ್ದರಾಮಯ್ಯನವರೇ ದಕ್ಷಿಣ ಕನ್ನಡದಲ್ಲಿನ ಈಗಿನ ಪರಿಸ್ಥಿತಿ ನಿಭಾಯಿಸಲು ನಿಮಗೆ ಸಾಧ್ಯವಾಗದಿದ್ದರೆ ನೀವು ಕೂಡಲೇ ರಾಜೀನಾಮೆ ಕೊಡಿ.
ಕಾನೂನು ಸುವ್ಯವಸ್ಥೆ ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟದ್ದು. ಇವರೇ ಬೆಂಕಿ ಹಚ್ಚು ವ ಕೆಲಸ ಮಾಡಿಕೊಂಡು ನಂದಿಸಲಿಲ್ಲ ಎಂದರೆ ಯಾರು ಆರಿಸಬೇಕು? ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ಹೋಗಿದ್ದರೂ ಸಹ, ಕಾನೂನು ಸುವ್ಯವಸ್ಥೆಯನ್ನು ಪರಿಶೀಲಿಸಿ ಅಲ್ಲಿನ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿ ಮತ್ತು ಮಂತ್ರಿಗಳನ್ನು ಕರೆಯಿಸಿ ಸಂಘರ್ಷ ಉಪಶಮನ ಕುರಿತು ಸಭೆ ನಡೆಸುವ ಯೋಗ್ಯತೆ ಇಲ್ಲ ಅವರಿಗೆ” ಎಂದು ಟೀಕಿಸಿದರು.
ಸಿದ್ದರಾಮಯ್ಯನವರೇ ಎಲ್ಲಾ ಘಟನೆಗೆ ಕಾರಣ! ಅವರೇ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು, ಮಂತ್ರಿಗಳಿಗೆ ಪ್ರಚೋದನೆ ಮಾಡುತ್ತಿದ್ದಾರೆ. ಯಾವುದೇ ರೀತಿಯಲ್ಲಿ ಕಟ್ಟುನಿಟ್ಟಿನ ನಿರ್ದೇಶನ ಕೊಡುತ್ತಿಲ್ಲ. ಒಟ್ಟಾರೆಯಾಗಿ ಕಾಂಗ್ರೆಸ್‌ನವರು ಹತಾಶರಾಗಿರುವುದು ಅಭಿವ್ಯಕ್ತಗೊಳ್ಳುತ್ತಿದೆ ಎಂದು ಆರೋಪಿಸಿದ ಅವರು, ಇದರಲ್ಲಿ ಕೇಂದ್ರ ಸರ್ಕಾರ ಸ್ವಲ್ಪ ನಿರ್ದೇಶನ ಕೊಟ್ಟರೂ ಕೂಡ ರಾಜ್ಯದ ಆಡಳಿತದೊಳಗೆ ಕೇಂದ್ರ ಮೂಗು ತೂರಿಸುತ್ತದೆ ಎಂದು ಗೂಬೆ ಕೂರಿಸುತ್ತಾರೆ. ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನೆಲ್ಲಾ ಕೇಂದ್ರದ ಮೇಲೆ ಹಾಕುತ್ತಿದೆ ಎಂದು ಸದಾನಂದ ಗೌಡ ಆರೋಪಿಸಿದರು.