Advertisement

ಕೃಷಿಕರ ಹಿತ ಕಾಪಾಡಲು ರಾಜ್ಯ ಸರಕಾರ ಬದ್ಧ: ಸಚಿವ ರಮಾನಾಥ ರೈ

03:11 PM Nov 08, 2017 | Team Udayavani |

ಸುಬ್ರಹ್ಮಣ್ಯ: ಪರಿಸರ ಸೂಕ್ಷ್ಮ ವಲಯ ಮತ್ತು ಪ್ರದೇಶ ಅನುಷ್ಠಾನ ವಿಚಾರವಾಗಿ ಜನತೆಯ ಬಲಿ ಕೊಡಲು ರಾಜ್ಯ ಸರಕಾರ ಎಂದಿಗೂ ಸಿದ್ಧವಿಲ್ಲ. 2011ರಿಂದ ಆರಂಭಿಸಿ ಇಂದಿನ ತನಕ ಕೇಂದ್ರವು ರಾಜ್ಯಕ್ಕೆ ಅಧಿಸೂಚನೆ ಕಳುಹಿಸಿಕೊಟ್ಟ ವೇಳೆ ಪ್ರತಿ ಬಾರಿಯೂ ಜನರ ಪರವಾದ ನಿಲುವು ವ್ಯಕ್ತಪಡಿಸಿ ರೈತರ ಹಿತ ಕಾಪಾಡಿದೆ. ಮುಂದೆಯೂ ಕೇಂದ್ರದ ಸಹಕಾರ ಪಡೆದು ನ್ಯಾಯ ಒದಗಿಸಲು ಸರಕಾರ
ಬದ್ಧವಿದೆ ಎಂದು ಅರಣ್ಯ ಮತ್ತು ಜೀವಿಶಾಸ್ತ್ರ  ಸಚಿವ ಬಿ. ರಮಾನಾಥ ರೈ ಹೇಳಿದರು.

Advertisement

ಹರಿಹರ ಪಳ್ಳತ್ತಡ್ಕದಲ್ಲಿ ಸೋಮವಾರ ನಡೆದ ಸೂಕ್ಷ್ಮ ವಲಯದ ಐದು ಭಾಗದ ಕೃಷಿಕರ ಜತೆಗಿನ ಸಮಾಲೋಚನ ಸಭೆಯಲ್ಲಿ ಅವರು ಮಾತನಾಡಿದರು. ಪರಿಸರ ಸೂಕ್ಷ್ಮ ಪ್ರದೇಶ ಮತ್ತು ಪರಿಸರ ಸೂಕ್ಷ್ಮ ವಲಯ ಪ್ರತ್ಯೇಕ ವಿಚಾರವಾಗಿದೆ. ಇದರ ಕುರಿತು ಜನತೆಯಲ್ಲಿ ಗೊಂದಲವಿದೆ. ಸೂಕ್ಷ್ಮ ವಲಯಕ್ಕೆ ಸಂಬಂಧಿಸಿ ಡಾ| ಕಸ್ತೂರಿ ರಂಗನ್‌ ವರದಿಯನ್ನು ರಾಜ್ಯ ಸರಕಾರ ಸಾರಾಸಗಟಾಗಿ ತಿರಸ್ಕರಿಸಿ ಕೇಂದ್ರಕ್ಕೆ ಕಳುಹಿಸಿಕೊಟ್ಟಿದೆ. ಸೂಕ್ಷ್ಮ ಪ್ರದೇಶ ಭಾರತದ ರಾಜಪತ್ರದಲ್ಲಿ ಘೋಷಣೆಯಾಗಿದೆ. ಇದು ಅಂತಿಮ. ಕೇಂದ್ರದ ಅಧಿಸೂಚನೆಯಲ್ಲಿ 10.ಕಿ.ಮೀ. ವ್ಯಾಪ್ತಿ ಇತ್ತು. ಅದನ್ನು ಕಡಿತಗೊಳಿಸಿ 100 ಮೀ. ನಿಗದಿಪಡಿಸುವಂತೆ ರಾಜ್ಯದಿಂದ ನಾವು ಕೇಂದ್ರಕ್ಕೆ ಕೇಳಿದ್ದೆವು. ಅದಕ್ಕೆ ಕೇಂದ್ರವು ಕಾಡು ಪ್ರದೇಶಗಳಲ್ಲಿ ನೀಡಲಾಗುವುದಿಲ್ಲ ಎಂದು ಪರಿವರ್ತಿಸಿ 1.ಕಿ.ಮೀ. ನಿಗದಿಪಡಿಸಿ ಕಳುಹಿಸಿಕೊಟ್ಟಿದೆ. ಜನರ ತೀವ್ರ ವಿರೋಧ ಇರುವುದನ್ನು ಗಮನಿಸಿ ಮತ್ತೂಮ್ಮೆ ಶೂನ್ಯಕ್ಕೆ (ಝೀರೋ) ನಿಗದಿ ಪಡಿಸಿ ವರದಿ ಕಳುಹಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದರು.

ಅರಣ್ಯ ಸುರಕ್ಷತೆ ಕಾನೂನು ಪಾಲನೆ ಅವಶ್ಯ. ಅದರ ಅಡಿ ಗಾಳಿಬೀಡು ಕಡಮಕಲ್ಲು ರಸ್ತೆ ಅಭಿವೃದ್ಧಿಗೆ ಅವಕಾಶ ಕಲ್ಪಿಸಲಾಗುವುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದಲ್ಲಿ ಈ ಕುರಿತು ಅರಣ್ಯ ಇಲಾಖೆ ಸ್ಪಂದಿಸಲಿದೆ ಎಂದು ಸಚಿವರು ಹೇಳಿದರು.

ಹರಿಹರ ಗ್ರಾ.ಪಂ. ಅಧ್ಯಕ್ಷ ಹಿಮ್ಮತ್‌ ಕೆ.ಸಿ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಸದಸ್ಯ ವೆಂಕಪ್ಪ ಗೌಡ, ಕೆಪಿಸಿಸಿ ಸದಸ್ಯ ಡಾ| ರಘು, ತಾ.ಪಂ. ವಿಪಕ್ಷ ನಾಯಕ ಅಶೋಕ ನೆಕ್ರಾಜೆ, ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಕೃಷ್ಣ ಕುಧ್ಕುಳಿ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್‌ ವಳಲಂಬೆ, ವನ್ಯ ಜೀವಿ ಗೌರವ ಸಲಹೆಗಾರ ಕಿರಣ್‌, ಸಹಕಾರ ಧುರೀಣ ಹರ್ಷ ಕುಮಾರ ಡಿ.ಎಸ್‌., ತಾ.ಪಂ. ಸದಸ್ಯ ಎಸ್‌. ಉದಯ, ರಾಧಾಕೃಷ್ಣ, ತಹಶೀಲ್ದಾರ್‌ ಗಣೇಶ್‌ ವನ್ಯ ಜೀವಿ ಅಧಿಕಾರಿ ಜಯ, ಅರಣ್ಯಾಧಿಕಾರಿಗಳಾದ ಜಗನ್ನಾಥ್‌, ತ್ಯಾಗರಾಜ್‌ ಉಪಸ್ಥಿತರಿದ್ದರು. ಸೋಮಶೇಖರ ಪ್ರಸ್ತಾವಿಸಿ, ಮಹೇಶ್‌ ಸ್ವಾಗತಿಸಿ, ವಂದಿಸಿದರು.

ಕೇಂದ್ರ-ರಾಜ್ಯ ಒಟ್ಟಾಗಿ ಸಾಗಬೇಕು
ಸೂಕ್ಷ್ಮ ಪರಿಸರ ವಲಯ ಯೋಜನೆಯಿಂದ ತೊಂದರೆಗೆ ಒಳಗಾದ ಭಾಗದ ಸಂಸದರ ನಿಯೋಗ ಈ ಹಿಂದೆ ಕೇಂದ್ರ ಪರಿಸರ ಖಾತೆ ಸಚಿವರ ಭೇಟಿಯಾಗಿ ಅಧಿಸೂಚನೆ ವಾಪಸಾತಿ ಕುರಿತು ಚರ್ಚಿಸಿದೆ. ಜನರಿಗೆ ಯೋಜನೆಯ ವಿಚಾರದಲ್ಲಿ ನ್ಯಾಯ ಒದಗಿಸಲು ಕೇಂದ್ರ-ರಾಜ್ಯ ಸರಕಾರಗಳು ಒಟ್ಟಾಗಿ ಸಾಗಬೇಕು. ಕೇಂದ್ರ ವ್ಯಾಪ್ತಿಯಲ್ಲಿ ನಾನು. ರಾಜ್ಯದಲ್ಲಿ ನೀವು ಕೆಲಸ ಮಾಡಿ ಜತೆಯಾಗಿ ಮುಂದುವರಿದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಎಂದು ಸಂಸದ ನಳಿನ್‌ಕುಮಾರ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next