ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಮೇ 13ಕ್ಕೆ ನಾಲ್ಕು ವರ್ಷಗಳು ಪೂರೈಸುತ್ತಿರುವ ಹಿನ್ನೆಲೆ ಅಂದು ಮೈಸೂರಿನ ಕಲಾ ಮಂದಿರದಲ್ಲಿ ಬೆಳಗ್ಗೆ 11 ಗಂಟೆಗೆ ವಿವಿಧ ಯೋಜನೆಗಳ ಫಲಾನುಭವಿಗಳ ಅನಿಸಿಕೆ ಆಲಿಸಲು ಲೋಕೋಪಯೋಗಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಸಿ. ಮಹದೇವಪ್ಪರ ಅಧ್ಯಕ್ಷತೆಯಲ್ಲಿ ಜನ – ಮನ ಕಾರ್ಯಕ್ರಮ ಆಯೋಜಿಸಿದೆ.
ಜಿಲ್ಲಾಡಳಿತ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಯೋಗ ದಲ್ಲಿ ನಡೆಯುವ ಈ ಕಾರ್ಯಕ್ರಮದ ಪೂರ್ವ ಸಿದ್ಧತೆ ಪರಿಶೀಲಿಸಲು ಜಿಲ್ಲಾಧಿಕಾರಿ ಡಿ.ರಂದೀಪ್, ಗುರುವಾರ ಜಲದರ್ಶಿನಿ ಅತಿಥಿ ಗೃಹದಲ್ಲಿ ಅಧಿಕಾರಿಗಳ ಸಭೆ ನಡೆಸಿದರು.
ರಾಜ್ಯ ಸರ್ಕಾರವು ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿ ಭಾಗ್ಯ, ಕ್ಷೀರಧಾರೆ, ಪಶು ಭಾಗ್ಯ, ವಿದ್ಯಾಸಿರಿ, ರಾಜೀವ್ ಆರೋಗ್ಯ ಭಾಗ್ಯ, ಶಾದಿ ಭಾಗ್ಯ, ಋಣಮುಕ್ತ, ಮುಖ್ಯಮಂತ್ರಿ ಸಾಂತ್ವನ ಹರೀಶ್ ಯೋಜನೆ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಗಳಲ್ಲಿ ಗರಿಷ್ಠ ಅಂಕ ಗಳಿಸಿದ ಪ.ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಯೋಜನೆ, ವಸತಿ ಭಾಗ್ಯ ಮುಂತಾದ ಯೋಜನೆಗಳನ್ನು ಪ್ರಯೋಜನ ಪಡೆದು ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಲು ವೇದಿಕೆ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕಳೆದ ವರ್ಷ ಆಯೋಜಿಸಿದ್ದ ಜನಮನ ಕಾರ್ಯ ಕ್ರಮದಲ್ಲಿ ಫಲಾನುಭವಿಗಳನ್ನು ಅನ್ನಭಾಗ್ಯ ಯೋಜನೆಯಡಿ ಪ್ರತಿ ಯೂನಿಟ್‌ಗೆ ಕೊಡುತ್ತಿರುವ 5 ಕೆ.ಜಿ ಅಕ್ಕಿ ಪ್ರಮಾಣವನ್ನು ಹೆಚ್ಚಿಸುವಂತೆ ಮನವಿ ಮಾಡಿದ್ದರು. ಅದರಂತೆ ಸರ್ಕಾರ ಈ ಪ್ರಮಾಣವನ್ನು 7 ಕೆ.ಜಿ.ಗೆ ಹೆಚ್ಚಿಸಿದೆ. ಕ್ಷೀರಭಾಗ್ಯ ಯೋಜನೆಯಡಿ 3 ದಿನದ ಬದಲಿಗೆ 5 ದಿನ ಶಾಲೆಗಳಲ್ಲಿ ಮಕ್ಕಳಿಗೆ ಹಾಲು ನೀಡಲು ಈ ಸಾಲಿನ ರಾಜ್ಯ ಬಜೆಟ್ ನಲ್ಲಿ ಘೋಷಿಸಲಾಗಿದೆ. ಇದೆಲ್ಲವು ಜನ ಮನ ಕಾರ್ಯ ಕ್ರಮದ ಫಲಶೃತಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ, ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ಪ್ರಸಾದ್ ಮೂರ್ತಿ, ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಮಂಜುನಾಥ್, ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಉದಯ್ ಕುಮಾರ್, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಭಾರತಿ, ಜಿಪಂ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿ ಕಾರಿ ರಾಜುಗೋಪಾಲ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಆರ್. ರಾಜು ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಮೇ 13ರಂದು ಬೆಳಗ್ಗೆ 11 ಗಂಟೆಗೆ ಕಲಾ ಮಂದಿರದಲ್ಲಿ ನಡೆಯಲಿರುವ ಜನ-ಮನ ಕಾರ್ಯ ಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಉದ್ಘಾಟಿಸಿ, ಫಲಾನು ಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಶಾಸಕ ವಾಸು ಅಧ್ಯಕ್ಷತೆ ವಹಿಸುವರು.