ದೇವನಹಳ್ಳಿ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಇನ್ನೂ ಟೇಕಾಫ್ ಆಗಿಲ್ಲ. ಅಭಿವೃದ್ಧಿಯ ಕಾರ್ಯಗಳಿಗೆ ಬಿಡುಗಾಸು ನೀಡುತ್ತಿಲ್ಲ. ಹಲವು ಯೋಜನೆಗಳ ಅನುದಾನ ತಡೆ ಹಿಡಿಯಲಾಗಿದೆ ಎಂದು ಶಾಸಕ ಎಲ್.ಎನ್ ನಾರಾಯಣಸ್ವಾಮಿ ಆಪಾದಿಸಿದರು.
ತಾಲೂಕಿನ ಬೊಮ್ಮವಾರ ಗ್ರಾಮದಲ್ಲಿ ವಿಶ್ವನಾಥಪುರ ಗ್ರಾಪಂ ವತಿಯಿಂದ ನಡೆದ ಮೊದಲ ಹಂತದ ಗ್ರಾಮ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸರ್ಕಾರದಿಂದ ತಾಲೂಕಿನಲ್ಲಿ ಸುಮಾರು 150 ಕೋಟಿ ರೂ.ಗಳ ವಿವಿಧ ಕಾಮಗಾರಿಗಳು ಸ್ಥಗಿತ ಗೊಂಡಿವೆ. ಕುಂದಾಣದಿಂದ ದೇವನಹಳ್ಳಿ ನಗರದ ಅಕ್ಕುಪೇಟೆ ಹೊರಗಿನ ರಸ್ತೆಗೆ 2ನೇ ಹಂತದಲ್ಲಿ 6.5 ಕೋಟಿ ಬಿಡುಗಡೆಯಾಗಿದ್ದು, ಕಾಮಗಾರಿಗೆ ಭೂಮಿ ಪೂಜೆ ನಡೆಸಬೇಕಿದೆ ಎಂದರು.
ಪ್ರತಿ ಬುಧವಾರ ತಾಲೂಕು ಪಂಚಾಯಿತಿಯಲ್ಲಿ ಶಾಸಕರ ಕಚೇರಿಯಲ್ಲಿ ಜನರ ಕುಂದು ಕೊರತೆ ಸಭೆ ನಡೆಸುತ್ತೇನೆ. ತಾಲೂಕಿನ ಅಭಿವೃದ್ಧಿಗಾಗಿ ಸರ್ಕಾರದಿಂದ ಅನುದಾನ ತರಲಾಗುವುದು. ವಿದ್ಯುತ್ ಕಡಿತ, ವಿದ್ಯುತ್ ಪರಿವರ್ತಕ ನೀಡದೇ ಇರುವುದು. ಅವೈಜ್ಞಾನಿಕ ವಿದ್ಯುತ್ ಕಂಬಗಳ ಮಾರ್ಗ, ಜೋತು ಬಿದ್ದಿರುವ ತಂತಿಗಳು, ರೈತರಿಗೆ ಸಮಸ್ಯೆಗಳು ಸೇರಿದಂತೆ ಬೆಸ್ಕಾಂನಿಂದ ಹಲವು ಸಮಸ್ಯೆಗಳ ಉಂಟಾಗುತ್ತಿದೆ. ಈ ಬಗ್ಗೆ ಇಂಧನ ಸಚಿವರೊಂದಿಗೆ ಚರ್ಚಿಸಲಾಗುವುದು.
ಗ್ರಾಮದ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿರುವ ಕಾಮಗಾರಿಗಳ ಕ್ರಿಯಾ ಯೋಜನೆ ತಯಾರಿಸಿ ಅನುಮೋದಿಸಲು ಗ್ರಾಮ ಸಭೆಗೆ ಜನರು ಸಕ್ರಿಯವಾಗಿ ಭಾಗವಹಿಸಬೇಕು ಎಂದರು. ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್ ಮಾತನಾಡಿ, ರೈತರು ಜಲ ಮೂಲಗಳಾದ ಕೆರೆ ಕುಂಟೆಗಳನ್ನು ಸಂರಕ್ಷಿಸಿಕೊಳ್ಳಬೇಕು.
ನೀರನ್ನು ಮಿತವಾಗಿ ಬಳಸಬೇಕು. ಇಂಗು ಗುಂಡಿ ಮತ್ತು ಮಳೆ ಕೊಯ್ಲು ಪದ್ಧತಿಗಳನ್ನು ಅಳವಡಿಸಿಕೊಂಡರೆ ನೀರಿನ ಸಮಸ್ಯೆಗೆ ಒಂದಿಷ್ಟು ಪರಿಹಾರ ನೀಡಬಹುದು. ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯಲ್ಲಿ ಸೀಕಾಯನ ಹಳ್ಳಿ ಒಂದು ಬೋರ್‌ವೆಲ್ ಕೊರೆಸಲಾಗಿದ್ದು, ಚಿಕ್ಕ ಒಬದೇನ ಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಲಾಗಿದೆ ಎಂದರು.
ತಾಪಂ ಅಧ್ಯಕ್ಷೆ ಚೈತ್ರಾ ಮಾತನಾಡಿ ತಾಲೂಕಿನಲ್ಲಿ ಬೆಸ್ಕಾಂ ಇಲಾಖೆಯಿಂದ ಹಲವಾರು ಸಮಸ್ಯೆಗಳು ಇವೆ. ರೈತರ ಸಮಸ್ಯೆಗಳಿಗೆ ಬೆಸ್ಕಾಂ ಅಧಿಕಾರಿಗಳು ಸ್ಪಂದಿಸುವುದಿಲ್ಲ. ಇಷ್ಟ ಬಂದ ಜಾಗಗಳಲ್ಲಿ ಕಂಬ ಹಾಕುತ್ತಿದ್ದಾರೆ. ಶಾಸಕರು ಇತ್ತ ಗಮನ ಹರಿಸಿ ಸಮಸ್ಯೆ ಬಗೆ ಹರಿಸಬೇಕು ಎಂದು ಹೇಳಿದರು. ಗ್ರಾಪಂ ಅಧ್ಯಕ್ಷ ರಾಮ ಮೂರ್ತಿ ಅಧ್ಯಕ್ಷತೆ ವಹಿಸಿದ್ದು, ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರಾಧಮ್ಮ, ತಾಪಂ ಸದಸ್ಯೆ ಶೈಲಜಾ, ಗ್ರಾಪಂ ಉಪಾಧ್ಯಕ್ಷೆ ರಮಾದೇವಿ, ತಾಪಂ ಇಒ ಮುರುಡಯ್ಯ, ಪಿಡಿಒ ಉಷಾ, ಹಾಗೂ ಗ್ರಾಪಂ ಸದಸ್ಯರು ಇದ್ದರು.