Advertisement

ಕೇಸು ಹಿಂದೆಗೆಯುವ ಮೂಲಕ ರಾಜ್ಯ ಸರಕಾರದಿಂದ ತಪ್ಪು ನಡೆ: ಡಾ|ವೈ. ಭರತ್‌ ಶೆಟ್ಟಿ

03:30 PM Apr 10, 2019 | Team Udayavani |

ಮಂಗಳೂರು: ಕೋಮು ಗಲಭೆ ಮತ್ತು ಮಹಿಳೆಯ ಮಾನಭಂಗ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಮೇಲಿನ 142 ಪ್ರಕರಣಗಳನ್ನು ವಾಪಸ್‌ ಪಡೆಯುವ ಮೂಲಕ ರಾಜ್ಯದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರವು ತಪ್ಪು ಹೆಜ್ಜೆಯನ್ನಿಟ್ಟಿದೆ ಎಂದು ಶಾಸಕ ಡಾ| ವೈ. ಭರತ್‌ ಶೆಟ್ಟಿ ಆರೋಪಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಜಿಲ್ಲೆ ಯಲ್ಲಿ ಈ ಹಿಂದಿನ ಕಾಂಗ್ರೆಸ್‌ ಸರಕಾರವಿದ್ದಾಗ, ಪದೇಪದೇ ಗಲಭೆಗಳು ನಡೆಯುತ್ತಿದ್ದವು. ಆದರೆ ಬಿಜೆಪಿಯ ಏಳು ಶಾಸಕರು ಆಯ್ಕೆಯಾದ ಬಳಿಕ ಕೋಮು ಗಲಭೆಗೆ ಆಸ್ಪದ ನೀಡುತ್ತಿಲ್ಲ. ಆದರೆ ಉಳಾಬೆಟ್ಟುವಿನಲ್ಲಿ ರಿಕ್ಷಾದಲ್ಲಿ ತೆರಳುತ್ತಿದ್ದ ತಾಯಿ ಮತ್ತು ಮಗಳನ್ನು ಥಳಿಸಿ, ಮಾನಭಂಗಕ್ಕೆ ಯತ್ನಿಸಿದ್ದ ಪ್ರಕರಣ ಸಹಿತ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವ ಕೇಸ್‌ಗಳನ್ನು ಸರಕಾರವು ವಾಪಸ್‌ ಪಡೆದಿರುವ ಬಗ್ಗೆ ಪತ್ರಿಕೆಗಳು ವರದಿ ಮಾಡಿವೆ. ಆ ಮೂಲಕ, ರಾಜ್ಯ ಸರಕಾರವೇ ಅಪರಾಧಿಗಳ ರಕ್ಷಣೆಗೆ ನಿಂತಿದೆ. ಸರಕಾರದ ಇಂಥ ತೀರ್ಮಾನಗಳು
ಕರಾವಳಿಯಲ್ಲಿ ಮತ್ತೆ ಜನರ ಅಸಮಾಧಾನಕ್ಕೆ ಕಾರಣವಾಗಿವೆ. ಸರಕಾರದ ಈ ನಡೆಗೆ ಕಾರಣವೇನುಎಂದು ಮುಖ್ಯಮಂತ್ರಿ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.

ಕರಾವಳಿಯ ಜನತೆ ತಿಳಿವಳಿಕೆ ಇಲ್ಲದವರು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿ ಮತ್ತೆ ಕರಾವಳಿ ಜಿಲ್ಲೆಗೆ ಆಗಮಿಸಿ ಮತ
ನೀಡುವಂತೆ ವಿನಂತಿಸುತ್ತಿದ್ದಾರೆ.ಇಲ್ಲಿನ ದೇವಸ್ಥಾನ ಇವರಿಗೆ ಬೇಕು. ಆದರೆ ತಿಳಿವಳಿಕೆ ಇಲ್ಲದ ಕರಾವಳಿಜನರು ತಮ್ಮ ಮತ ನೀಡಲು ಅವರಿಗೆ ಈಗ ಬೇಕೇ? ಮೈತ್ರಿ ಸರಕಾರ ನಡೆಸುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷ ಇದಕ್ಕೆ ಉತ್ತರಿಸಬೇಕಾಗಿದೆ. ದ.ಕ. ಜಿಲ್ಲಾ ಕಾಂಗ್ರೆಸ್‌ ಬಿಡುಗಡೆ ಮಾಡಿದ ಪ್ರಣಾಳಿಕೆ ಹಾಸ್ಯಾಸ್ಪದವಾಗಿದೆ. ರಾಜ್ಯ ಸರಕಾರ ಮಾಡಬೇಕಿರುವ ಕೆಲಸಗಳನ್ನು ಈ ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಸಂಸದ ನಳಿನ್‌ ಕುಮಾರ್‌ ಕಟೀಲು ಕಳೆದ 5 ವರ್ಷಗಳಲ್ಲಿ ಕೇಂದ್ರ ಸರಕಾರದಿಂದ ಜಿಲ್ಲೆಗೆ 16,520 ಕೋಟಿ ರೂ. ಅನುದಾನ ತಂದಿದ್ದಾರೆ. ರಾಜ್ಯದ ಸಿದ್ದರಾಮಯ್ಯ ಸರಕಾರ ಮತ್ತು ಈಗಿನ ಮೈತ್ರಿ ಸರಕಾರ ಜಿಲ್ಲೆಗೆ ಎಷ್ಟು ಅನುದಾನ ನೀಡಿದೆ ಎಂಬುದನ್ನು ತಿಳಿಸಲಿ.

ಮೋದಿ ನೇತೃತ್ವದ ಭ್ರಷ್ಟಾಚಾರ ರಹಿತ ಸರಕಾರ ಮತ್ತೂಮ್ಮೆ ಅಧಿಕಾರಕ್ಕೆ ಬರಬೇಕಿದೆ. ಅದಕ್ಕಾಗಿ ಜಿಲ್ಲೆಯ ಜನತೆ ನಳಿನ್‌ ಕುಮಾರ್‌ ಕಟೀಲು ಅವರನ್ನು ಗೆಲ್ಲಿಸಬೇಕು ಎಂದು ಭರತ್‌ ಶೆಟ್ಟಿ ಹೇಳಿದರು. ಮಾಜಿ ಮೇಯರ್‌ ಗಣೇಶ ಹೊಸಬೆಟ್ಟು, ಸುಧಾಕರ್‌ ಅಡ್ಯಾರ್‌, ಪ್ರಮುಖರಾದ ಕಿರಣ್‌ ಕುಮಾರ್‌ ಕೋಡಿಕಲ್‌, ಲೋಹಿತ್‌ ಕುಮಾರ್‌ ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next