ಹುಬ್ಬಳ್ಳಿ: ಸ್ಥಳೀಯ ವಿದ್ಯುತ್ ಗುತ್ತಿಗೆದಾರರನ್ನು ನಿರ್ಲಕ್ಷಿಸಿ ಹೊರ ರಾಜ್ಯದ ವಿದ್ಯುತ್ ಗುತ್ತಿಗೆದಾರರಿಗೆ ಪ್ಯಾಕೇಜ್ ಹೆಸರಿನಲ್ಲಿ ವಿದ್ಯುತ್ ಕಾಮಗಾರಿಗಳನ್ನು ನೀಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ(ಕರಾಅಪವಿಗುಸಂ) ದವರು ಗುರುವಾರ ಇಲ್ಲಿನ ನವನಗರದ ಹೆಸ್ಕಾಂ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು.
ಹೆಸ್ಕಾಂನವರು ಹೊರ ರಾಜ್ಯದ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ನೀಡುವ ಉದ್ದೇಶದಿಂದ ದೊಡ್ಡ-ದೊಡ್ಡ ಪ್ಯಾಕೇಜ್ ಮಾಡಿ ಗುತ್ತಿಗೆ ನೀಡುತ್ತಿದ್ದಾರೆ. ಈ ಮೊದಲು ಭೇಟಿ ಮಾಡಿ ಸಂಘದ ಸದಸ್ಯರ ಸಮಸ್ಯೆಗಳ ಕುರಿತು ಮನವಿ ಮಾಡಿಕೊಂಡಾಗ ಕುಡಿಯುವ ನೀರಿನ ಯೋಜನೆ, ಗಂಗಾ ಕಲ್ಯಾಣ ಹಾಗೂ ಇನ್ನಿತರೆ ಕಾಮಗಾರಿ ಕೆಲಸಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ಕೊಡಲಾಗುವುದು ಎಂದು ಭರವಸೆ ನೀಡಿದ್ದರು.
ಆದರೀಗ ಎಲ್ಲ ಕಾಮಗಾರಿಗಳಿಗೂ ಟೆಂಡರ್ ಕರೆಯಲಾಗುತ್ತಿದೆ. ಗುತ್ತಿಗೆದಾರರು ಎಸ್‌ಆರ್ ದರಕ್ಕೆ ವಿದ್ಯುತ್ ಕಾಮಗಾರಿ ಕೈಗೊಳ್ಳಲು ಸಿದ್ಧರಿದ್ದರೂ ಕೂಡ ಹೆಸ್ಕಾಂ ಮತ್ತು ಸರಕಾರಕ್ಕೆ ವಂಚಿಸಿ ಶೇ.30-40ರಷ್ಟು ಹೆಚ್ಚುವರಿ ಮಾಡಿ ಹೊರ ರಾಜ್ಯದ ವಿದ್ಯುತ್ ಗುತ್ತಿಗೆದಾರರಿಗೆ ಕಾಮಗಾರಿ ನೀಡುತ್ತಿರುವುದು ಖಂಡನೀಯವೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕರಾರುಪತ್ರವು ಕಂಪನಿ ಪರವಾಗಿ ಏಕಮುಖವಾಗಿದೆ. ಗುತ್ತಿಗೆದಾರರ ಕಾರ್ಮಿಕರಿಗೆ ವಿದ್ಯುತ್ ಅವಘಡವಾದಲ್ಲಿ ಕಂಪನಿಯೇ ಎಲ್ಲ ಜವಾಬ್ದಾರಿ ತೆಗೆದುಕೊಳ್ಳಬೇಕು. ಕುಡಿಯುವ ನೀರಿನ ಯೋಜನೆ, ಗಂಗಾ ಕಲ್ಯಾಣ ಯೋಜನೆಯ ವಿದ್ಯುತ್ ಹಾಗೂ ಲೇಬರ್ ಕಾಮಗಾರಿಯನ್ನು ತುಂಡುಗುತ್ತಿಗೆಯ ರೂಪದಲ್ಲಿ ಸ್ಥಳೀಯ ಗುತ್ತಿಗೆದಾರರಿಗೆ ನೀಡಬೇಕು.
ಹೆಸ್ಕಾನ ಅಧಿಕಾರಿಗಳು ಸದ್ಯ ಕರೆದಿರುವ ಟೆಂಡರ್ ರದ್ದುಪಡಿಸಿ ಸ್ಥಳೀಯ ಗುತ್ತಿಗೆದಾರರಿಗೆ ವಿದ್ಯುತ್ ಕಾಮಗಾರಿ ಕೆಲಸಗಳನ್ನು ನೀಡಬೇಕು. ಇಲ್ಲವಾದರೆ ಗುತ್ತಿಗೆದಾರರು ಸ್ಥಳೀಯ ವಿದ್ಯುತ್ ಕಂಪನಿಗಳ ಎದುರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪ್ರಸಂಗ ಬರುತ್ತದೆ ಎಂದು ಎಚ್ಚರಿಸಿದರು.
ನಂತರ ಹೆಸ್ಕಾಂನ ವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು. ಕರಾಅಪವಿಗು ಸಂಘದ ಅಧ್ಯಕ್ಷ ಪ್ರಕಾಶ ಅಂಗಡಿ, ಪ್ರಧಾನ ಕಾರ್ಯದರ್ಶಿ ಜಿ. ರುದ್ರೇಶ, ಅಬ್ದುಲಮುನಾಫ ದೇವಗಿರಿ, ಶಿವಾಜಿ ವೈದ್ಯ, ವಿಜಕುಮಾರ ಗುಡ್ಡದ, ನಿಜಾಮುದ್ದೀನ ರೇಶಂವಾಲೆ, ತುಷಾರ ಬದ್ದಿ, ವಿಜಯಕುಮಾರ ಅಣ್ಣಿಗೇರಿ, ನಾಗಯ್ಯ ಪ್ಯಾಟಿಮಠ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.