Advertisement

ಬಂಗಾಳದಲ್ಲಿ ರಾಜ್ಯ ಬಿಜೆ‌ಪಿ ವಿಸ್ತಾರಕರ “ಪ್ರಚಾರ’

12:42 AM May 07, 2019 | Team Udayavani |

ಬೆಂಗಳೂರು: ದೂರದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಕರ್ನಾಟಕ ಬಿಜೆಪಿಯ ಪೂರ್ಣಾವಧಿ ಕಾರ್ಯಕರ್ತರು ವಾರ್ಡ್‌ ಹಾಗೂ ಬೂತ್‌ ಮಟ್ಟದಲ್ಲಿ ಸಂಘಟನಾ ಕಾರ್ಯದಲ್ಲಿ ತಲ್ಲೀನ‌ರಾಗಿದ್ದಾರೆ.

Advertisement

ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಕನಿಷ್ಠ 20 ರಿಂದ 25 ಸ್ಥಾನ ಗೆಲ್ಲಬೇಕೆಂದು ಗುರಿಯಿಟ್ಟುಕೊಂಡಿರುವ ಕೇಂದ್ರ ಬಿಜೆಪಿಗೆ ಶಕ್ತಿ ತುಂಬಲು ಕರ್ನಾಟಕ, ಗುಜರಾತ್‌, ಆಂಧ್ರ ಪ್ರದೇಶ, ಒಡಿಶಾ ಸಹಿತವಾಗಿ ಹಲವು ರಾಜ್ಯಗಳಿಂದ ಬಿಜೆಪಿಯ ವಿಸ್ತಾರಕರು ಹೆಚ್ಚಿನ ಸಂಖ್ಯೆಯಲ್ಲಿ ಹೋಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪತಾಕೆ ಹಾರಿಸಲು ಶ್ರಮಿಸುತ್ತಿರುವ ವಿಸ್ತಾರಕರೆಲ್ಲರಿಗೂ ಏಕ ರೂಪದ ಕೆಲಸವನ್ನು ಒಪ್ಪಿಸಲಾಗಿದೆ. ಎಲ್ಲರೂ ಮತದಾನ ಮಾಡಬೇಕು ಮತ್ತು ಮಾಧ್ಯಾಹ್ನದೊಳಗೆ ಅತಿಹೆಚ್ಚು ಮತದಾನ ಆಗುವಂತೆ ನೋಡಿಕೊಳ್ಳಬೇಕು ಎಂಬ ಟಾಸ್ಕ್ ನೀಡಲಾಗಿದೆ.

ಇದರ ಜತೆಗೆ ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ಪಶ್ಚಿಮ ಬಂಗಾಳದಲಿ ಬಿಜೆಪಿ ಅಭ್ಯರ್ಥಿಪರ ಕೆಲಸ ಮಾಡುತ್ತಿರುವ ಕರ್ನಾಟಕದ ವಿಸ್ತಾರಕರು “ಉದಯವಾಣಿ’ಗೆ ಮಾಹಿತಿ ನೀಡಿದರು.ನಾವು ನಾಲ್ಕೈದು ಮಂದಿ ಬಿಜೆಪಿಯ ಅಭ್ಯರ್ಥಿ ಗೆಲುವಿಗಾಗಿ ಪಶ್ಚಿಮ ಬಂಗಾಳಕ್ಕೆ ಬಂದಿದ್ದೇವೆ.

ಕಳೆದ ಒಂದೆರೆಡು ವಾರದಿಂದ ವಾರ್ಡ್‌ ಮಟ್ಟದಲ್ಲಿ ಪಕ್ಷ ಸಂಘಟನೆಯ ಕಾರ್ಯ ಮಾಡುತ್ತಿದ್ದೇವೆ. ಪೇಜ್‌ ಪ್ರಮುಖರೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಅವರೊಂದಿಗೆ ಮನೆ ಮನೆ ಪ್ರಚಾರ ಮಾಡುತ್ತಿದ್ದೇವೆ. ಬಿಜೆಪಿ ಅಭ್ಯರ್ಥಿಗಳು ಆಯೋಜಿಸುವ ಸೈಕಲ್‌ ಹಾಗೂ ಬೈಕ್‌ ರ್ಯಾಲಿ, ಸಭೆ, ಸಮಾವೇಶ ಇತ್ಯಾದಿಗಳಿಗೆ ಹಳ್ಳಿ ಹಳ್ಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವಂತಹ ಸಂಘಟನಾತ್ಮಕ ಕಾರ್ಯ ಮಾಡುತ್ತಿದ್ದೇವೆ ಎಂದು ಇನ್ನೊಬ್ಬ ಕಾರ್ಯಕರ್ತ ವಿವರ ನೀಡಿದರು.

Advertisement

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಪೂರಕವಾದ ವಾತಾವರಣ ಇದೆ. ಬಿಜೆಪಿ ಕಾರ್ಯಕರ್ತರ ಮನೆಗೆ ನುಗ್ಗಿ ಹಲ್ಲೆ ಮಾಡುವ ಪ್ರವೃತ್ತಿ ಇಲ್ಲಿ ಹೆಚ್ಚಿದೆ. ಬಾಗ್ಲಾ ನುಸುಳುಕೋರರ ಸಮಸ್ಯೆಯೂ ಹೆಚ್ಚಿದೆ. ಬಂಗಾಲಿಗರು ಬಿಜೆಪಿಯ ಪರವಾಗಿದ್ದಾರೆ. ಅದರ ಜತೆಗೆ ಮೋದಿ ಅಲೆಯೂ ಹೆಚ್ಚಿದೆ.

ತೃಣಮೂಲ ಕಾಂಗ್ರೆಸ್‌ನಲ್ಲಿ ನಾಯಕರಾಗಿದ್ದು, ಅಲ್ಲಿನ ವ್ಯವಸ್ಥೆಯಿಂದ ಬೇಸೆತ್ತು ಬಿಜೆಪಿ ಸೇರಿರುವ ಅನೇಕರಿಗೆ ಟಿಕೆಟ್‌ ನೀಡಿರುವುದರಿಂದ ಬಿಜೆಪಿಗೆ ಅನುಕೂಲ ಹೆಚ್ಚಿದೆ. ಪಕ್ಷ ಸಂಘಟನೆ ಇನ್ನಷ್ಟು ಸುಧಾರಿಸಬೇಕಿದೆ. ಆದರೆ, ಈ ಬಾರಿ ಬಿಜೆಪಿಗೆ ಮತ ಹಾಕಬೇಕು ಎಂದು ಹೇಳುವವರು ಪ್ರತಿ ಮನೆಯಲ್ಲೂ ಇದ್ದಾರೆ.

ಬಿಜೆಪಿಯ ಜಿಲ್ಲಾ ತಾಲೂಕು ಹಾಗೂ ಮಂಡಲ ಘಟಕದ ಅಧ್ಯಕ್ಷರು ಕೂಡ ಜೀವ ಭಯದಿಂದ ಸಂಚರಿಸಬೇಕಾದ ಪರಿಸ್ಥಿತಿ ಇಡೀ ರಾಜ್ಯದಲ್ಲಿದೆ. ಬಿಜೆಪಿ ಧ್ವಜ ಹಿಡಿದುಕೊಂಡು ಪ್ರಚಾರಕ್ಕೆ ಹೋದರೆ, ದಾರಿ ಮಧ್ಯದಲ್ಲೇ ತಡೆಯುತ್ತಾರೆ. ಪಕ್ಷದ ಸಂಘಟನೆಗೆ ಕಾರ್ಯಕರ್ತರಿದ್ದಾರೆ. ಆದರೆ, ಜೀವಭಯದಿಂದ ಬಹಿರಂಗವಾಗಿ ಪ್ರಚಾರಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಒಂದೊಂದು ರಾಜ್ಯದ ವಿಸ್ತಾರಕರಿಗೆ ಒಂದೊಂದು ಲೋಕಸಭಾ ಕ್ಷೇತ್ರ ಹಂಚಿಕೆ ಮಾಡಲಾಗಿದೆ. ಒಂದೊಂದು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 7ರಿಂದ 8 ವಿಧಾನಸಭಾ ಕ್ಷೇತ್ರಗಳಿದ್ದು, ಅವುಗಳಲ್ಲಿ ಬಿಜೆಪಿ ಪ್ರಾಬಲ್ಯ ಕಡಿಮೆ ಇರುವ ಕಡೆಗಳಲ್ಲಿ ವಿಸ್ತಾರಕರು ವಾರ್ಡ್‌ ಮತ್ತು ಬೂತ್‌ ಮಟ್ಟದಲ್ಲಿ ಸಂಘಟನೆ ಕಾರ್ಯ ಮಾಡುತ್ತಿದ್ದಾರೆ. ಪಕ್ಷದ ಸೂಚನೆಯಂತೆ ಇಲ್ಲಿಗೆ ಬಂದಿದ್ದೇವೆ. ಚುನಾವಣೆ ಮುಗಿದ ನಂತರ ವಾಪಾಸ್‌ ತವರಿಗೆ ತೆರಳಿ, ಮುಖಂಡರಿಗೆ ವರದಿ ಒಪ್ಪಿಸಲಿದ್ದೇವೆ ಎಂದು ಹೇಳಿದರು.

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next