ನೆಲಮಂಗಲ: ರಾಜ್ಯದ ಅಭಿವೃದ್ಧಿಗೆ ಸದಾ ಮುಂದಿರುವೆ ಎಂದು ಹೇಳುವ ಮುಖ್ಯಮಂತ್ರಿ ಯಡಿಯೂರಪ್ಪ ವಿರೋಧ ಪಕ್ಷಗಳ ಶಾಸಕರ ಕ್ಷೇತ್ರಗಳ ಅನುದಾನ ಹಿಂಪಡೆದುಕೊಂಡು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಆಕ್ರೋಶ ವ್ಯಕ್ತಪಡಿಸಿದರು. ತಾಲೂಕಿನ ಯಂಟಗನಹಳ್ಳಿ ಗ್ರಾಮ ಪಂಚಾಯಿತಿಯ ಕೋಡಪ್ಪನಹಳ್ಳಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಬಿಜೆಪಿಯದ್ದು ದ್ವೇಷ ರಾಜಕಾರಣ: ತಾಲೂಕಿನ ಅನೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ರಸ್ತೆ, ಚರಂಡಿಗಳಿಗೆ ಅನುದಾನ ನೀಡುವ ಮೂಲಕ ಗ್ರಾಮಗಳನ್ನು ಅಭಿವೃದ್ಧಿಗೊಳಿಸಲಾಗಿದೆ. ಕ್ಷೇತ್ರದ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ ನೀಡುವಂತೆ ಕುಮಾರಸ್ವಾಮಿ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಆದರೆ ಇಂದಿನ ಬಿಜೆಪಿ ನೇತೃತ್ವದ ಸರ್ಕಾರ ಅನುದಾನ ಹಿಂಪಡೆದುಕೊಂಡಿದ್ದು, ಬಹಳ ಬೇಸರದ ಸಂಗತಿ.
ಈ ರೀತಿ ಸರ್ಕಾರ ದ್ವೇಷದ ರಾಜಕಾರಣ ಮಾಡಿದರೆ, ನಾವು ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿ ಮಾಡುವುದಾದರೂ ಹೇಗೆ? ಜನರಿಗೆ ಯಾವ ರೀತಿ ಉತ್ತರ ನೀಡಲು ಸಾಧ್ಯ? ಸರ್ಕಾರ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಶಾಸಕರ ಕ್ಷೇತ್ರಗಳಲ್ಲಿ ಅನುದಾನ ನಿಲ್ಲಿಸಿರುವುದು ದ್ವೇಷದ ರಾಜಕಾರಣಕ್ಕೆ ಸಾಕ್ಷಿ ಎಂದರು.
ವಿಧಾನಪರಿಷತ್ ಮಾಜಿ ಸದಸ್ಯ ಇ.ಕೃಷ್ಣಪ್ಪ ಮಾತನಾಡಿ, ಅಭಿವೃದ್ಧಿ ಕೆಲಸ ಪೂರ್ಣವಾದ ಮೇಲೆ ಹಳ್ಳಿಯ ಜನರು ಸೌಲಭ್ಯಗಳನ್ನು ಕಾಪಾಡಿಕೊಳ್ಳಬೇಕು. ಗ್ರಾಮ ಸಮೃದ್ಧಿಯಾಗಬೇಕೆಂದರೆ ಗ್ರಾಮದ ಜನ ಒಗ್ಗಟ್ಟಾಗುವುದು ಬಹಳ ಮುಖ್ಯ. ಉತ್ತಮ ಆರೋಗ್ಯಕ್ಕಾಗಿ ಸಾರ್ವಜನಿಕರು ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನು ಬಳಸಬೇಕು ಎಂದು ಸಲಹೆ ನೀಡಿದರು.
ಕಾಮಗಾರಿಗೆ ಚಾಲನೆ: ತಾಪಂ 1.5 ಲಕ್ಷ ರೂ. ಅನುದಾನದಲ್ಲಿ ರಸ್ತೆ ಚರಂಡಿ ಕಾಮಗಾರಿಗೆ ಚಾಲನೆ ಹಾಗೂ ಕೋಡಪ್ಪನಹಳ್ಳಿಯಲ್ಲಿ 20 ಲಕ್ಷ ರೂ. ವೆಚ್ಚದ ರಸ್ತೆ ಹಾಗೂ 5 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಡಾ.ಕೆ ಶ್ರೀನಿವಾಸಮೂರ್ತಿ ಶಂಕುಸ್ಥಾಪನೆ ಮಾಡಿದರು.
ಉದ್ಘಾಟನೆ: 12 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಶುದ್ಧ ಕುಡಿಯುವ ನೀರಿನ ಘಟಕವನ್ನು ಮಾಜಿ ವಿಧಾನ ಪರಿಷತ್‌ಸದಸ್ಯ ಇ.ಕೃಷ್ಣಪ್ಪ, ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಉದ್ಘಾಟಿಸಿದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಸವನಹಳ್ಳಿ ರಂಗನಾಥ್, ಜಿಲ್ಲಾ ಪಂಚಾಯಿತಿ ಸದಸ್ಯೆ ಪುಷ್ಪಸಂಪತ್, ತಾಲೂಕು ಪಂಚಾಯಿತಿ ಸದಸ್ಯ ರುದ್ರೇಶ್, ಗ್ರಾಮಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾಚಿಕ್ಕಣ್ಣ, ಸದಸ್ಯೆ ಲಕ್ಷೀದೇವಮ್ಮ ವೆಂಕಟೇಶ್,ಗಂಗಲಕ್ಷಮ್ಮ, ಎಪಿಎಂಸಿ ನಿರ್ದೇಶಕ ಗೋವಿಂದರಾಜು, ಪಿಡಿಒ ಪ್ರಶಾಂತ್, ಕೋಡಪ್ಪನಹಳ್ಳಿ ವೆಂಕಟೇಶ್, ಕೃಷಿಕ ಸಮಾಜದ ಅಧ್ಯಕ್ಷ ಸಿದ್ದಪ್ಪ, ಮುಖಂಡರಾದ ಜಯರಾಮು, ರುದ್ರಪ್ಪ, ಬಾಲಕೃಷ್ಣ, ಚಿಕ್ಕಣ್ಣ, ಪ್ರಕಾಶ್ ಮತ್ತಿತರರಿದ್ದರು.