Advertisement
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಒಂದು ವರ್ಷದ ಹಾದಿ ಸುಲಭವಾಗಿರಲಿಲ್ಲ. ಸರ್ಕಾರ ರಚನೆಯಾದ ಮೊದಲ ದಿನದಿಂದಲೂ ‘ಆಪರೇಷನ್ ಕಮಲ’ ಭೀತಿಯಲ್ಲೇ ಒಂದು ವರ್ಷ ಪೂರೈಸುತ್ತಿದ್ದು, ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಮತ್ತೆ ಏನಾಗುವುದೋ ಎಂಬ ಆತಂಕವೂ ಇದೆ.
Related Articles
Advertisement
ಸಮ್ಮಿಶ್ರ ಸರ್ಕಾರ ರಚನೆಯಾದಾಗ ಸಮನ್ವಯ ಸಮಿತಿ ರಚಿಸಿ, ಸಮಾನ ಕನಿಷ್ಠ ಕಾರ್ಯಕ್ರಮ ರೂಪಿಸಲು ತೀರ್ಮಾನಿಸಲಾಗಿತ್ತು. ಆದರೆ, ಒಂದು ವರ್ಷ ಕಳೆದರೂ ಸಮಾನ ಕನಿಷ್ಠ ಕಾರ್ಯಕ್ರಮ ರಚನೆಯಾಗಿಲ್ಲ. ಸಮನ್ವಯ ಸಮಿತಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ಅವರ ಸೇರ್ಪಡೆ ಆಗದಿರುವುದೇ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ.
ವಿಧಾನಸಭೆ ಚುನಾವಣೆ ನಂತರ ಎದುರಾದ ಉಪ ಚುನಾವಣೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಮೈತ್ರಿ ಆದರೂ ಕೆಳ ಹಂತದಲ್ಲಿ ಸಮನ್ವಯತೆ ಇಲ್ಲದೆ ಒಲ್ಲದ ಮನಸ್ಸಿನಿಂದಲೇ ಒಟ್ಟಿಗೆ ಹೋಗುವಂತಾಗಿದೆ. ಲೋಕಸಭೆ ಚುನಾವಣೆ ಫಲಿತಾಂಶದ ನಂತರದ ವಿದ್ಯಮಾನಗಳು ಸಮ್ಮಿಶ್ರ ಸರ್ಕಾರದ ಭವಿಷ್ಯವನ್ನು ನಿರ್ಧರಿಸುತ್ತವೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಹೀಗಾಗಿ, ಎಲ್ಲರೂ ಫಲಿತಾಂಶದ ಚಿತ್ತ ನೆಟ್ಟಿದ್ದಾರೆ.
ಜನಪರ ಸರ್ಕಾರ: ಎಚ್ಡಿಕೆರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಹೊಂಗನಸಿನೊಂದಿಗೆ ನಮ್ಮ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಗುತ್ತಿದೆ. ಈ ಅವಧಿ ಯಲ್ಲಿ ನಾವು ಮಂಡಿಸಿದ ಎರಡು ಆಯವ್ಯಯಗಳು ನಮ್ಮ ಸರ್ಕಾರದ ಒಲವು- ನಿಲುವುಗಳು ಸಾಗಬೇಕಾದ ಹಾದಿಯನ್ನು ಸ್ಪಷ್ಟಪಡಿಸಿವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾÃರೆ. ಈ ಅವಧಿಯಲ್ಲಿ ನಾವು ರೂಪಿಸಿದ ಕಾರ್ಯಕ್ರಮಗಳು ಜನರಲ್ಲಿ ಜನಪರ ಸರ್ಕಾರ, ರೈತರ ಪರವಾದ ಸರ್ಕಾರ ಎಂಬ ಭಾವನೆ ಮೂಡಿಸಿವೆ. ಎಲ್ಲ ವರ್ಗದವರ ಆಶೋತ್ತರಗಳಿಗೆ ಸ್ಪಂದಿಸಿರುವುದು ತೃಪ್ತಿ ತಂದಿದೆ. ಜತೆಗೆ ನಮ್ಮ ಮುಂದಿನ ನಡೆಗೆ ಸ್ಫೂರ್ತಿಯೂ ಆಗಿದೆ. ರೈತರ ಸಾಲಮನ್ನಾ ವಿಚಾರದಲ್ಲಿ ಕ್ರಾಂತಿಕಾರಕ ನಿರ್ಧಾರ ಕೈಗೊಂಡಿದ್ದು, ಈಗಾಗಲೇ 15.5 ಲಕ್ಷ ರೈತರ ಸಾಲಮನ್ನಾ ಆಗಿದೆ. ಪ್ರಸಕ್ತ ಸಾಲಿನಲ್ಲಿ ಉಳಿದ ಎಲ್ಲ ಅರ್ಹ ರೈತರ ಸಾಲಮನ್ನಾ ಆಗಲಿದೆ. ಸರ್ಕಾರವನ್ನು ಬೆಂಬಲಿಸಿದ ಸಹೋದ್ಯೋಗಿಗಳು, ನನ್ನ ಮಾರ್ಗದರ್ಶಕರಾದ ದೇವೇಗೌಡರು, ಮಿತ್ರ ಪಕ್ಷದ ನೇತಾರರಾದ ರಾಹುಲ್ಗಾಂಧಿ, ಕೆ.ಸಿ.ವೇಣುಗೋಪಾಲ್, ಸಿದ್ದರಾಮಯ್ಯ ಸೇರಿ ಎಲ್ಲರಿಗೂ ಕೃತಜ್ಞತೆಗಳು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ. ಸಾಧನಾ ಸಮಾವೇಶ
ಸಮ್ಮಿಶ್ರ ಸರ್ಕಾರಕ್ಕೆ ಒಂದು ವರ್ಷ ಪೂರ್ಣವಾಗಿರುವುದರಿಂದ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಜತೆಗೂಡಿ ಬೃಹತ್ ಸಾಧನಾ ಸಮಾವೇಶ ನಡೆಸುವ ಚಿಂತನೆಯೂ ಇದೆ. ಒಂದು ವರ್ಷದ ಸಾಧನೆ ಹಾಗೂ ಮುಂದಿನ ನಾಲ್ಕು ವರ್ಷದ ಮುನ್ನೋಟ ಕುರಿತು ಕೈಪಿಡಿ ಮುದ್ರಿಸುವ ಬಗ್ಗೆಯೂ ಚರ್ಚೆಗಳು ನಡೆದಿವೆ ಎಂದು ಹೇಳಲಾಗಿದೆ.