ಬೆಂಗಳೂರು: ಸರ್ಕಾರದಿಂದ ರಾಗಿಗೆ ಉತ್ತಮ ದರ ನಿಗದಿಪಡಿಸಿರುವುದರಿಂದ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಡಿ ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ರೈತರಲ್ಲಿ ಮನವಿ ಮಾಡಿದ್ದಾರೆ. ಧಾನ್ಯಗಳ ಖರೀದಿಗೆ ಶೀಘ್ರದಲ್ಲೇ ಸರ್ಕಾರದಿಂದ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದರು.
ವಿಕಾಸಸೌಧದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಬಲ ಬೆಲೆಯಡಿ ಹೆಸರು ಕಾಳು, ರಾಗಿ,ಶೇಂಗಾ, ಉದ್ದು ಖರೀದಿಗೆ ಯಾವುದೇ ಸಮಸ್ಯೆ ಇಲ್ಲ. ಆದರೆ, ತೊಗರಿ, ಮೆಕ್ಕ ಜೋಳ ಖರೀದಿಗೆ ಕೇಂದ್ರ ಸರ್ಕಾರದಿಂದ ಇನ್ನೂ ಅನುಮತಿ ಸಿಕ್ಕಿಲ್ಲ. ತೊಗರಿ ಖರೀದಿಗೆ ಶೀಘ್ರದಲ್ಲೇ ಅನುಮತಿ ಸಿಗುವ ನಿರೀಕ್ಷೆಯಿದೆ. ಮೆಕ್ಕೆ ಜೋಳಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆದಿದೆ ಎಂದರು.
400 ರೂ. ಬೋನಸ್: ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ರಾಗಿ ಬೆಲೆ 1,500ರಿಂದ 1,700 ಇದೆ. ಆದರೆ, ಕೇಂದ್ರ ಸರ್ಕಾರ ಕ್ವಿಂಟಾಲ್‌ಗೆ 1,900 ರೂ. ಬೆಂಬಲ ಬೆಲೆ ನಿಗದಿಪಡಿಸಿದ್ದು, ಅದಕ್ಕೆ ರಾಜ್ಯ ಸರ್ಕಾರ 400 ರೂ. ಬೋನಸ್ ನೀಡುತ್ತಿದ್ದು, ಒಟ್ಟು 2,300 ರೂ.ಗೆ ಖರೀದಿ ಮಾಡಲಾಗುವುದು. ಇನ್ನೂ 15 ದಿನಗಳಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತದೆ. ಹಾಗಾಗಿ, ರೈತರು ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ರಾಗಿ ಮಾರಾಟ ಮಾಡುವುದು ಬೇಡ ಎಂದು ಸಚಿವರು ವಿವರಿಸಿದರು.
ಹೆಸರು ಕಾಳು ಹಾಗೂ ಉದ್ದು ಖರೀದಿಗೆ ಕೇಂದ್ರಗಳನ್ನು ತೆರೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೇಂಗಾ ಖರೀದಿಗೆ 40 ಕೇಂದ್ರಗಳನ್ನು ಪ್ರಾರಂಭಿಸಬೇಕಾಗಿದ್ದು, ಈಗಾಗಲೇ 15 ಕೇಂದ್ರಗಳನ್ನು ತೆರೆಯಲಾಗಿದೆ. 4,450 ರೂ.ಗೆ ಕ್ವಿಂಟಾಲ್‌ನಂತೆ ಈ ವರ್ಷ 47,500 ಟನ್ ಕಡಲೆ ಖರೀದಿಸುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
110 ಲಕ್ಷ ಟನ್ ಆಹಾರ ಉತ್ಪಾದನೆ ನಿರೀಕ್ಷೆ: ಈ ವರ್ಷ ಹಿಂಗಾರು ಹಂಗಾಮು ಪರಿಸ್ಥಿತಿ ಚೇತರಿಕೆ ಕಂಡಿದ್ದು,73 ಲಕ್ಷ ಹೆಕ್ಟೇರ್ ಪೈಕಿ 64 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು 75 ಲಕ್ಷ ಟನ್ ಇಳುವರಿ ಬರುವ ಸಾಧ್ಯತೆಯಿದೆ. ಈ ರೀತಿ ಈ ಬಾರಿ ಒಟ್ಟಾರೆ 105 ರಿಂದ 110 ಲಕ್ಷ ಟನ್ ಆಹಾರ ಉತ್ಪಾದನೆಯಾಗುವ ನಿರೀಕ್ಷೆಯಿದೆ ಎಂದು ವಿವರಿಸಿದರು.
ಹಿಂದಿನ ಸರ್ಕಾರದ 5 ವರ್ಷಗಳ ಅವಧಿಯಲ್ಲಿ ಕೃಷಿ ಇಲಾಖೆಯ ಅನುದಾನದಲ್ಲಿ ಶೇ.60ರಷ್ಟು ಹೆಚ್ಚಳ ಆಗಿದ್ದರೆ, ಈ ಸರ್ಕಾರದ ಅವಧಿಯಲ್ಲಿ ಶೇ.150ರಷ್ಟು ಹೆಚ್ಚಳ ಆಗಿದೆ. ಕಳೆದ ವರ್ಷ ನಿಗದಿತ ಅನುದಾನಕ್ಕಿಂತ ಹೆಚ್ಚು ವೆಚ್ಚ ಮಾಡಿದ್ದು, ಶೇ.111.1ರಷ್ಟು ಪ್ರಗತಿ ಆಗಿದೆ.
ನಮ್ಮ ಸರ್ಕಾರದಲ್ಲಿ ಸೂಕ್ಷ್ಮ ನೀರಾವರಿಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಹಿಂದಿನ ಐದು ವರ್ಷಗಳಿಗೆ ಹೋಲಿಕೆ ಮಾಡಿದರೆ, ಅನುದಾನ ಮತ್ತು ವೆಚ್ಚದಲ್ಲಿ 5 ಪಟ್ಟು ಹೆಚ್ಚಳವಾಗಿದೆ. ಕೃಷಿ ಯಾಂತ್ರೀಕರಣಕ್ಕೆ 5 ವರ್ಷಗಳಲ್ಲಿ ನಾಲ್ಕು ಪಟ್ಟು ಹೆಚ್ಚು ಅನುದಾನ ನೀಡಲಾಗಿದೆ ಎಂದರು.