ಬಾಗಲಕೋಟೆ: ಜಿಲ್ಲಾಡಳಿತ, ತಾಲೂಕಾಡಳಿತ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ರೈತರಿಗೆ ರಿಯಾಯಿತಿ ದರದಲ್ಲಿ ಮೇವು ವಿತರಿಸಲಾಯಿತು. ನವನಗರದ ಎಪಿಎಂಸಿ ಆವರಣದಲ್ಲಿ ತೆರೆಯಲಾದ ಮೇವು ಬ್ಯಾಂಕ್‌ನಲ್ಲಿ ಬಾಗಲಕೋಟೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಸರಕಾರ ಘೋಷಿಸಿದ ಹಿನ್ನೆಲೆಯಲ್ಲಿ ತಾಲೂಕಿನ ರೈತರಿಗೆ ಪಶು ಇಲಾಖೆಯ ಸಹಾಯಕ ನಿರ್ದೇಶಕ ಡಾ|ಆರ್.ಎಸ್. ಪದರಾ, ಮೇವು ವಿತರಿಸಿ , ಪ್ರತಿ ಕೆ.ಜಿಗೆ ರೂ. 2ರಂತೆ ಒಂದು ಜಾನುವಾರುಗಳಿಗೆ ದಿನಕ್ಕೆ 5 ಕೆಜಿಯಂತೆ ಒಂದು ವಾರಕ್ಕಾಗುವಷ್ಟು ಮೇವನ್ನು ನೀಡಲಾಗುತ್ತಿದೆ. ಮೇವು ತೀರಿದ ನಂತರವು ಸಹ ನೀಡಲಾಗುವುದು ಎಂದರು. ಮೇವು ಖರೀದಿಗೆ ಬರುವಾಗ ಸ್ಥಳೀಯ ಪಶು ವೈದ್ಯಾಕಾರಿಗಳಿಂದ ದೃಢೀಕರಣ ಪ್ರಮಾಣ ಪತ್ರ, ಗ್ರಾಮ ಲೆಕ್ಕಾಕಾರಿಗಳಿಂದ ರಹವಾಸಿ ಪ್ರಮಾಣ ಪತ್ರ ತರಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಾನುವಾರು ಅಭಿವೃದ್ಧಿ ಅಧಿಕಾರಿ ಡಿ.ಎಫ್.ತಳವಾರ, ಗ್ರಾಮ ಲೆಕ್ಕಾಧಿಕಾರಿ ಎ.ಎಸ್. ಕರಿಗಾರ ಉಪಸ್ಥಿತರಿದ್ದರು.