ಬೆಂಗಳೂರು: ಪ್ರಸಕ್ತ ಸಾಲಿನಲ್ಲಿ 4 ಸಾವಿರ ವಾಹನಗಳ ನೋಂದಣಿ ಫಲಕಗಳಿಗೆ ಕನ್ನಡದ ಅಂಕಿ ಮತ್ತು ಅಕ್ಷರಗಳನ್ನು ಬರೆಸುವ ಕನ್ನಡ ಅಂಕಿ ಬಳಕೆ ಸಪ್ತಾಹಕ್ಕೆ ಶುಕ್ರವಾರ ಚಾಲನೆ ದೊರೆತಿದೆ.
ಕನ್ನಡ ಅಂಕಿ ಅನುಷ್ಠಾನ ಮತ್ತು ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕನ್ನಡ ಅನುಷ್ಠಾನ ಮಂಡಳಿಯು ಮಲ್ಲೇಶ್ವರದ ಆಟದ ಮೈದಾನದಲ್ಲಿ ಆಯೋಜಿಸಿರುವ ಸಪ್ತಾಹದ ಮೊದಲ ದಿನವಾದ ಶುಕ್ರವಾರ, ದ್ವಿಚಕ್ರ ವಾಹನಗಳು, ಕಾರುಗಳು ಸೇರಿದಂತೆ ನೂರಾರು ವಾಹನಗಳ ನೋಂದಣಿ ಫಲಕದಲ್ಲಿ ಉಚಿತವಾಗಿ ಕನ್ನಡ ಅಂಕಿ ಬರೆದು ಕೊಡಲಾಯಿತು ಎಂದು ಮಂಡಳಿ ಅಧ್ಯಕ್ಷ ಡಾ.ಆರ್. ಎ.ಪ್ರಸಾದ್ ಮಾಹಿತಿ ನೀಡಿದರು.
ಕನ್ನಡ ಭಾಷೆ ಜತೆಗೆ ಕನ್ನಡ ಅಕ್ಷರ ಹಾಗೂ ಅಂಕಿಗಳನ್ನು ಜೀವಂತವಾಗಿರಿಸಲು ಮಂಡಳಿಯು 25 ವರ್ಷಗಳಿಂದ ವಾಹನಗಳಿಗೆ ಕನ್ನಡ ಅಂಕಿಗಳನ್ನು ಉಚಿತವಾಗಿ ಬರೆಸುವ ಕಾರ್ಯ ಮಾಡುತ್ತಿದೆ. ಕಳೆದ ವರ್ಷ 5,500 ವಾಹನಗಳಿಗೆ ಕನ್ನಡ ಅಂಕಿ ಬರೆಸಲಾಗಿತ್ತು. ಈ ಸಾಲಿನಲ್ಲಿ 4 ಸಾವಿರ ವಾಹನಗಳಲ್ಲಿ ಬರೆಯುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ಬಹಳಷ್ಟು ಸಂಚಾರ ಪೊಲೀಸರಿಗೆ ವಾಹನಗಳ ಮೇಲಿನ ಕನ್ನಡ ಅಂಕಿಗಳನ್ನು ತಕ್ಷಣವೇ ಗುರುತಿಸಲು ಆಗುವುದಿಲ್ಲ. ಹೀಗಾಗಿ ಪೊಲೀಸರಿಗೆ ಕನ್ನಡ ಅಂಕಿಗಳನ್ನು ಕಲಿಸುವ ಕಾರ್ಯಾಗಾರ ನಡೆಸಲು ನಿರ್ಧರಿಸಿದ್ದು, ಈ ಕುರಿತು ಸಂಬಂಧಪಟ್ಟವರೊಂದಿಗೆ ಚರ್ಚೆ ನಡೆಯುತ್ತಿದೆ. ಪೊಲೀಸರಿಗೆ ಇಂತಹ ಕಾರ್ಯಾಗಾರಗಳ ಅಗತ್ಯವಿದೆ ಎಂದು ಹೇಳಿದರು.
ವಾಹನಗಳ ಮೇಲೆ ಕನ್ನಡ ಅಂಕಿಗಳನ್ನು ಬರೆಸುವ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಎಲ್ಲರೂ ಸಹಕರಿಸಬೇಕು. ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಕಾರ್ಯವನ್ನು ಎಲ್ಲರೂ ಒಟ್ಟಾಗಿ ಮಾಡಬೇಕಿದೆ. ಕನ್ನಡ ಭಾಷೆ ತಾಂತ್ರಿಕವಾಗಿ ಹಿಂದುಳಿದಿದ್ದು, ಅದನ್ನು ಪ್ರಸ್ತುತ ದಿನಕ್ಕೆ ಬೇಕಾದಂತೆ ಬೆಳೆಸಬೇಕು ಎಂದರು.
ಸರ್ಕಾರದ ನಿವೃತ್ತ ಕಾರ್ಯದರ್ಶಿ ಡಾ.ಸಿ.ಸೋಮಶೇಖರ್ ಮಾತನಾಡಿ, ಕನ್ನಡ ಭಾಷೆ ಮತ್ತು ಅಂಕಿಗಳು ಕನ್ನಡಿಗರ ಶ್ರೀಮಂತಿಕೆಯಾಗಿದೆ. ಕನ್ನಡಿಗರ ಬದುಕಿನ ಅವಿಭಾಜ್ಯ ಅಂಗವಾಗಿರುವ ಕನ್ನಡ ಭಾಷೆ ಮತ್ತು ಅಂಕಿ ಬಳಕೆ ನಿತ್ಯ, ನಿರಂತರವಾಗಿರಬೇಕು ಎಂದು ಹೇಳಿದರು.
ನಿಯಮದ ಪ್ರಕಾರ ವಾಹನಗಳ ಎರಡೂ ಸಂಖ್ಯಾ ಫಲಕಗಳಲ್ಲಿ ಕನ್ನಡ ಅಂಕಿ ಬರೆಸುವಂತಿಲ್ಲ. ಆದರೆ, ಒಂದು ಕಡೆ ಬರೆಸಲು ನ್ಯಾಯಾಲಯವೇ ಅನುಮತಿ ನೀಡಿದೆ. ಹೀಗಾಗಿ ಈ ಬಗ್ಗೆ ಜನ ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ.
–ಡಾ.ಆರ್.ಎ.ಪ್ರಸಾದ್, ಕನ್ನಡ ಅನುಷ್ಠಾನ ಮಂಡಳಿ ಅಧ್ಯಕ್ಷ