ಬೀದರ: ರಾಜ್ಯದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ನಾಲ್ಕು ಕ್ರೀಡಾ ಸಂಕೀರ್ಣಗಳನ್ನು ಕಲಬುರಗಿ, ಬೆಳಗಾವಿ, ಮೈಸೂರು ಹಾಗೂ ಬೆಂಗಳೂರು ವ್ಯಾಪ್ತಿಯೊಳಗೆ ನಿರ್ಮಾಣವಾಗಬೇಕು ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ರಹೀಮ್ ಖಾನ್ ಹೇಳಿದರು.
ಬೆಂಗಳೂರಿನ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಇಲಾಖೆ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
20 ಕ್ರೀಡೆಗಳನ್ನು ಆಡಲಿಕ್ಕೆ ಅನುಕೂಲವಾಗುವಂತಹ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಸಂರ್ಕೀಣಗಳು ನಿರ್ಮಿಸಬೇಕು. ನಾಲ್ಕು ವಿಭಾಗಗಳಲ್ಲಿ ಸಂಕೀರ್ಣ ನಿರ್ಮಿಸಬೇಕು. ಕಲಬುರಗಿ ವಿಭಾಗದಲ್ಲಿ ಬೀದರ ನಗರದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣವಾಗಬೇಕು ಎಂದು ಸಚಿವರು ಸಭೆಯಲ್ಲಿ ಹೇಳಿದರು.
ರಾಮನಗರ, ತುಮಕೂರು, ಹಾಸನ, ಬೀದರ ಸೇರಿದಂತೆ ನಾಲ್ಕು ಕಡೆಗಳಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ಕ್ರೀಡಾಂಗಣಗಳನ್ನು ತಲಾ 50 ಕೋಟಿ ರೂ.ವೆಚ್ಚದಲ್ಲಿ ಮೇಲ್ದರ್ಜೆಗೇರಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸಲಹೆ ನೀಡಿದರು. ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ಗೆದ್ದಂತಹ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ಕೊಡಲು ಹಾಗೂ ಈ ವರ್ಷದಿಂದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ತಲಾ 20 ಲಕ್ಷ ರೂ. ವೆಚ್ಚದಲ್ಲಿ ಮಾದರಿ ಯುವಕ ಸಂಘ ಕಟ್ಟಡ ಕಟ್ಟಲು ಮತ್ತು ಪ್ರಸಕ್ತ ವರ್ಷದಿಂದ 13 ರಿಂದ 15 ವರ್ಷದೊಳಗಿನ ಚಿಕ್ಕಮಕ್ಕಳಿಗೆ ಮಿನಿ ಒಲಿಂಪಿಕ್ ಏರ್ಪಡಿಸುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿರುವುದಾಗಿ ಸಚಿವರು ತಿಳಿಸಿದರು.
ಇಲಾಖೆಯ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಕ್ಕೆ ಸಂಬಂಧಿಸಿದಂತೆ ಅನುದಾನ ಹಂಚಿಕೆ, ವಿತರಣೆ ಹಾಗೂ ವೆಚ್ಚದ ಬಗ್ಗೆ ಬಜೆಟ್ ಪೂರ್ವ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಬೀದರನಲ್ಲಿ ಇತ್ತೀಚೆಗೆ ಹೈದ್ರಾಬಾದ್ ಕರ್ನಾಟಕ ಪ್ರದೇಶ ವ್ಯಾಪ್ತಿಯ 6 ಜಿಲ್ಲೆಗಳ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಅಲ್ಲಿ ಆಯಾ ಜಿಲ್ಲೆಗಳ ಪ್ರಗತಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆಯಲಾಗಿದೆ. ಇಲಾಖೆಗಳಲ್ಲಿನ ಕುಂದುಕೊರತೆಗಳ ಬಗ್ಗೆ ಚರ್ಚಿಸಲಾಗಿದೆ ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ| ಡಿ.ಕಲ್ಪನಾ ಸಭೆಯಲ್ಲಿ ಹೇಳಿದರು.
ಇಲಾಖೆ ಆಯುಕ್ತ ಕೆ.ಶ್ರೀನಿವಾಸ, ಜಂಟಿ ನಿರ್ದೇಶಕ ಎಂ.ಎಸ್.ರಮೇಶ. ಸುಭಾಷ್ ಚಂದ್ರ, ಉಪ ನಿರ್ದೇಶಕ ಬಸವರಾಜ ಹಡಪದ ಹಾಗೂ ಇತರರು ಇದ್ದರು.