ಮುಂಬಯಿ: ಬಂಜಾರ ಸಮುದಾಯದ ಪ್ರಸಿದ್ಧ ಧಾರ್ಮಿಕ ಸಂತ ಶ್ರೀ ರಾಮರಾವ್‌ಜೀ ಮಹಾರಾಜ್ ಶುಕ್ರವಾರ ದೀರ್ಘ ಕಾಲದ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದಾರೆ.
84 ವರ್ಷದ ಶ್ರೀಗಳು ಮುಂಬಯಿನ ಲೀಲಾವತಿ ಆಸ್ಪತ್ರೆಯಲ್ಲಿ ಕಳೆದ 1 ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ದೇಹದ ಸ್ಥಿತಿಗತಿ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ರಾತ್ರಿ 11ಕ್ಕೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
12 ಕೋಟಿ ಭಕ್ತರು!: ದೇಶಾದ್ಯಂತ 12 ಕೋಟಿಗೂ ಅಧಿಕ ಅನುಯಾಯಿಗಳನ್ನು ಹೊಂದಿದ್ದ ಶ್ರೀಗಳು ಮೂಢನಂಬಿಕೆ ವಿರುದ್ಧ ಜಾಗೃತಿ, ಸಾಕ್ಷರತೆಗೆ ಪ್ರೋತ್ಸಾಹ, ವರದಕ್ಷಿಣೆ ವಿರುದ್ಧ ವ್ಯಾಪಕ ಸಮರ ಸಾರಿದ್ದರು. ಪ್ರಧಾನಿ ಸೇರಿದಂತೆ ರಾಜ ಕೀಯ ರಂಗದ ಅತ್ಯುನ್ನತ ಮುಖಂಡ ರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.
ಮೋದಿ ಸಂತಾಪ: ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, “ಬಡತನ ನಿರ್ಮೂಲನೆ, ಮಾನವ ಸಂಕಷ್ಟ ಪರಿಹರಿಸಲು ಶ್ರೀ ರಾಮ ರಾವ್ ಬಾಪು ಮಹಾರಾಜ್ ದಣಿವರಿ ಯದೆ ಶ್ರಮಿಸಿದ್ದರು. ಶ್ರೀಗಳ ಸೇವೆ, ಅಧ್ಯಾತ್ಮಿಕ ಮಾರ್ಗದರ್ಶನವನ್ನು ಸಮಾಜ ಸದಾ ನೆನಪಿಟ್ಟುಕೊಳ್ಳುತ್ತದೆ’ ಎಂದು ಟ್ವೀಟಿಸಿದ್ದಾರೆ. “ಕೆಲವು ತಿಂಗಳ ಹಿಂದಷ್ಟೇ ಶ್ರೀಗಳನ್ನು ಭೇಟಿಯಾಗುವ ಸೌಭಾಗ್ಯ ಲಭಿಸಿತ್ತು. ಈ ದುಃಖದ ಸಮಯದಲ್ಲಿ ನಾನು ಅವರ ಭಕ್ತರ ಜತೆಗಿದ್ದೇನೆ. ಓಂ ಶಾಂತಿ’ ಎಂದು ಸಂತಾಪ ಸೂಚಿಸಿದ್ದಾರೆ.
ಗಣ್ಯರ ಕಂಬನಿ: ಶ್ರೀಗಳ ಅಗಲಿಕೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಶ್ರೀ ರಾಮರಾವ್‌ಜೀ ಮಹಾರಾಜರು ತಮ್ಮ ಇಡೀ ಬದುಕನ್ನು ಬಡವರ, ದೀನ- ದಲಿತರ ಉದ್ಧಾರಕ್ಕೆ ಸಮರ್ಪಿಸಿಕೊಂಡಿದ್ದರು. ಅವರ ಮಾದರಿ ಸೇವೆ ಸದಾ ಅಮರ’ ಎಂದು ಟ್ವೀಟಿಸಿದ್ದಾರೆ.
ಕರ್ನಾಟಕ ಸಿಎಂ ಬಿ.ಎಸ್. ಯಡಿಯೂರಪ್ಪ, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ, ಮಾಜಿ ಸಿಎಂ ದೇವೇಂದ್ರ ಫಡ್ನವೀಸ್, ಎನ್‌ಸಿಪಿ ನಾಯಕ ಶರದ್ ಪವಾರ್ ಸೇರಿದಂತೆ ಹಲವು ಗಣ್ಯರು ಸಂತಾಪ ನಮನ ಸಲ್ಲಿಸಿದ್ದಾರೆ.
ಅಂತ್ಯಕ್ರಿಯೆ: ಮೃತ ಶ್ರೀಗಳ ಅಂತ್ಯಸಂಸ್ಕಾರ ಮಹಾರಾಷ್ಟ್ರದ ವಾಶಿಂ ಜಿಲ್ಲೆಯ ಪೊಹ್ರಾ ದೇವಿ ಪುಣ್ಯಸ್ಥಳದಲ್ಲಿ ಸೋಮವಾರ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ.