Advertisement

ಐಶಾರಾಮಿ ಬೈಕ್‌ಗಳ ವೇಗಕ್ಕೆ ಬೀಳಲಿದೆ ಕಡಿವಾಣ

12:13 PM Mar 10, 2018 | |

ಬೆಂಗಳೂರು: ರಾಯಲ್‌ ಎನ್‌ಫೀಲ್ಡ್‌ ಸೇರಿದಂತೆ ಅತಿ ವೇಗವಾಗಿ ಸಂಚರಿಸುವ ಹೈಟೆಕ್‌ ಬೈಕ್‌ಗಳ ವೇಗಕ್ಕೂ ಶೀಘ್ರ ಬ್ರೇಕ್‌ ಬೀಳಲಿದೆ. ಸಾರಿಗೆ ವಾಹನಗಳ ಮಾದರಿಯಲ್ಲಿ ಸಾರಿಗೆಯೇತರ ವಾಹನಗಳಿಗೆ ಅದರಲ್ಲೂ ಹೆಚ್ಚು ಅಪಘಾತಕ್ಕೆ ಕಾರಣವಾಗುತ್ತಿರುವ ದ್ವಿಚಕ್ರ ವಾಹನಗಳಿಗೂ “ವೇಗ ನಿಯಂತ್ರಕ’ ಅಳವಡಿಕೆಗೆ ದಕ್ಷಿಣ ಭಾರತದ ಸಾರಿಗೆ ಪರಿಷತ್ತು ಮುಂದಾಗಿದೆ. ಈ ಸಂಬಂಧದ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು  ನಿರ್ಧರಿಸಲಾಗಿದೆ.

Advertisement

ನಗರದ ಜೆ.ಡಬ್ಲ್ಯು ಮೆರಿಯಟ್‌ನಲ್ಲಿ ಶುಕ್ರವಾರ ನಡೆದ 22ನೇ ದಕ್ಷಿಣ ಭಾರತ ಸಾರಿಗೆ ಪರಿಷತ್ತಿನ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಎಚ್‌.ಎಂ. ರೇವಣ್ಣ, ರಸ್ತೆ ಅಪಘಾತಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ದ್ವಿಚಕ್ರ ವಾಹನಗಳು ಸೇರಿದಂತೆ ಸಾರಿಗೆಯೇತರ ವಾಹನಗಳ ವೇಗಕ್ಕೆ ಬ್ರೇಕ್‌ ಹಾಕುವ ಬಗ್ಗೆ ವಿವಿಧ ರಾಜ್ಯಗಳ ಸಾರಿಗೆ ಸಚಿವರು ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ ಖಾಸಗಿ ವಾಹನಗಳಿಗೂ ಸ್ಪೀಡ್‌ ಗವರ್ನರ್‌ ಅಥವಾ ವಾಹನಗಳ ತಯಾರಿಕೆ ಹಂತದಲ್ಲೇ ವೇಗ ನಿಯಂತ್ರಕಗಳನ್ನು ಅಳವಡಿಸಲು ನಿರ್ಣಯ ಕೈಗೊಳ್ಳಲಾಯಿತು. ಈ ಸಂಬಂಧ 1988ರ ಮೋಟಾರು ವಾಹನ ಕಾಯ್ದೆ ಕಲಂ 118ಕ್ಕೆ ತಿದ್ದುಪಡಿ ತರುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. 

ಸಾರಿಗೆಯೇತರ ವಾಹನಗಳ ವೇಗಮಿತಿ ಗಂಟೆಗೆ 100 ಕಿ.ಮೀ.ಗಿಂತ ಹೆಚ್ಚಿದೆ. ಕೆಲವು ಹೈಟೆಕ್‌ ಬೈಕ್‌ಗಳ ವೇಗ 150-200 ಕಿ.ಮೀ. ಇದೆ. ಮೂಲಗಳ ಪ್ರಕಾರ ಇದನ್ನು 80 ಕಿ.ಮೀ.ಗೆ ತಗ್ಗಿಸುವ ಚಿಂತನೆ ಇದೆ. ಇದನ್ನು ಕೇಂದ್ರ ಸರ್ಕಾರ ನಿರ್ಧರಿಸಲಿದೆ. 

ತಾತ್ಕಾಲಿಕ ನೋಂದಣಿಗೆ ಬ್ರೇಕ್‌: ಅಲ್ಲದೆ, ಪುದುಚೆರಿಯಿಂದ ನೋಂದಣಿ ಮಾಡಿಕೊಂಡು ಲಕ್ಷಾಂತರ ತೆರಿಗೆ ವಂಚನೆ ಮಾಡುತ್ತಿರುವ ಐಷಾ ರಾಮಿ ಕಾರುಗಳಿಗೆ ಕಡಿವಾಣ ಹಾಕಲು ಮುಂದಾಗಿರುವ ರಾಜ್ಯ ಸರ್ಕಾರ, ತಾತ್ಕಾಲಿಕ ನೋಂದಣಿ ಹೊಂದಿದ ವಾಹನಗಳ ಕಾರ್ಯಾಚರಣೆಯನ್ನು ರಾಜ್ಯದಲ್ಲಿ ಸ್ಥಗಿತಗೊಳಿಸಲು ನಿರ್ಧರಿಸಿದೆ.

ಪುದುಚೆರಿಯಲ್ಲಿ ರಸ್ತೆ ತೆರಿಗೆ ಕೇವಲ ಶೇ. 2ರಷ್ಟಿದ್ದರೆ, ಕರ್ನಾಟಕದಲ್ಲಿ ಕನಿಷ್ಠ 13ರಿಂದ ಗರಿಷ್ಠ ಶೇ. 20ರಷ್ಟಿದೆ. ಇದೇ ಕಾರಣಕ್ಕೆ ತಾತ್ಕಾಲಿಕ ವಿಳಾಸ ನೀಡಿ, ಪುದುಚೆರಿಯಲ್ಲಿ ವಾಹನಗಳ ನೋಂದಣಿ ಮಾಡಿಕೊಂಡು ರಾಜ್ಯವನ್ನು ಪ್ರವೇಶಿಸುತ್ತಿವೆ. 

Advertisement

ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರಸ್ತೆ ತೆರಿಗೆ ಖೋತಾ ಆಗುತ್ತಿದೆ. ಸಭೆಯಲ್ಲಿ ರಾಜ್ಯದಲ್ಲಿ ತಾತ್ಕಾಲಿಕ ನೋಂದಣಿ ವಾಹನಗಳ ಕಾರ್ಯಾಚರಣೆ ಸ್ಥಗಿತಗೊಳಿಸುವ ತೀರ್ಮಾನ ಕೈಗೊಳ್ಳಲಾಯಿತು. 

ಪ್ರವಾಸೋದ್ಯಮ ಉತ್ತೇಜಿಸಲು ಎಲ್ಲ ರಾಜ್ಯಗಳಲ್ಲಿ ಸಮಾನ ತೆರಿಗೆ ವಿಧಿಸುವ ಸಂಬಂಧ ಮೋಟಾರು ವಾಹನ ಕಾಯ್ದೆ ಕಲಂ 88 (9)ಕ್ಕೆ ತಿದ್ದುಪಡಿ ತರುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಾರಿಗೆ ಪರಿಷತ್ತಿನಲ್ಲಿ ನಿರ್ಧರಿಸಲಾಯಿತು. ಕೇರಳ ಸಾರಿಗೆ ಸಚಿವ ಎ.ಕೆ. ಶಶೀಂದ್ರನ್‌, ತಮಿಳುನಾಡು ಸಾರಿಗೆ ಸಚಿವ ಎಂ.ಆರ್‌. ವಿಜಯಭಾಸ್ಕರ್‌ ಉಪಸ್ಥಿತರಿದ್ದರು

ರಾತ್ರಿ ಬಸ್‌ ಸಂಚಾರಕ್ಕೆ ಅವಕಾಶ ಬೇಡ ಬಂಡಿಪುರ-ನಾಗರಹೊಳೆ ಅರಣ್ಯದಲ್ಲಿ ರಾತ್ರಿ ಸರ್ಕಾರಿ ಬಸ್‌ಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಯಿತು. ಕರ್ನಾಟಕ ಮತ್ತು ಕೇರಳ ನಡುವೆ ಈ ಹಿಂದೆ ಕ್ರಮವಾಗಿ 32 ಮತ್ತು 40 ಸರ್ಕಾರಿ ಬಸ್‌ಗಳು ರಾತ್ರಿ ಸಂಚರಿಸುತ್ತಿದ್ದವು. ಆದರೆ, ಈಗ ಸುಪ್ರೀಂಕೋರ್ಟ್‌ ಆದೇಶದಂತೆ ನಿಷೇಧಿಸಲಾಗಿದೆ. ಈಗ ಪ್ರಯಾಣಿಕರ ಅನುಕೂಲಕ್ಕಾಗಿ ಈ ಹಿಂದಿನಂತೆ ಬಸ್‌ಗಳ ಕಾರ್ಯಾಚರಣೆಗೆ ಅವಕಾಶ ನೀಡುವಂತೆ ಉನ್ನತ ಸಮಿತಿ ಮೂಲಕ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next