Advertisement
ಪ್ರತಿವರ್ಷವೂ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸುವ ಸಂಸ್ಥೆಯೊಂದಿದೆ. ಅದರ ಮುಖ್ಯಸ್ಥರು ನಾಡಿನ ಮೂಲೆ ಮೂಲೆಯ ಕಲಾವಿದರನ್ನು ಆಹ್ವಾನಿಸುತ್ತಾ ಕೈಸುಟ್ಟು ಕೊಂಡು ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ನಾಡಿನ ಸಂಸ್ಕೃತಿಯ ಏಳಿಗೆಗಾಗಿ ಕೈಲಾದ ಸೇವೆ ಮಾಡುತ್ತಿದ್ದೇನೆ ಎನ್ನುವ ಸಂತೋಷದಿಂದ ಇರುವವರು. ಕಳೆದ ವರ್ಷ ಆ ಕಾರ್ಯಕ್ರಮ ನೋಡಲು ನಾನೂ ಹೋಗಿದ್ದೆ. ಕಾರ್ಯಕ್ರಮ ಮುಗಿದು ಪ್ರೇಕ್ಷಕರೆಲ್ಲರೂ ಇಂಥ ಕಾರ್ಯಕ್ರಮ ಮಾಡಿರುವುದಕ್ಕೆ ಅವರನ್ನು ಅಭಿನಂದಿಸುತ್ತಾ ಇರುವಾಗ, ವಯಸ್ಸಾದ ನಿವೃತ್ತವೇತನದಲ್ಲಿ ಜೀವನ ನಡೆಸುತ್ತಿರುವ ಒಬ್ಬರು ಬಂದು, ಅವರ ಕೈಗೆ ಒಂದಷ್ಟು ದುಡ್ಡು ಇಟ್ಟು, “ಇಂತಹ ಅದ್ಭುತ ಕಾರ್ಯಕ್ರಮಗಳನ್ನು ಹೀಗೆ ಪುಕ್ಕಟೆಯಾಗಿ ನೋಡಲು ಮನಸ್ಸು ಬರುತ್ತಿಲ್ಲ. ನನ್ನಲ್ಲಿರುವ ಇಷ್ಟು ದುಡ್ಡು ನೀವು ತೆಗೆದುಕೊಳ್ಳಲೇಬೇಕು’ ಎಂದು ಹೇಳಿ ಹೋದಾಗ ಅವರಿಗೆ ಕಣ್ಣಲ್ಲಿ ನೀರು. ಕಾರ್ಯಕ್ರಮ ಮಾಡುತ್ತೇನೆ ಎಂದು ದೊಡ್ಡ ದೊಡ್ಡವರ ಬಳಿ ಹೋದಾಗ ಭಿಕ್ಷೆ ನೀಡಿದಂತೆ ಒಂದಷ್ಟು ಕೊಟ್ಟು ಸಾಗ ಹಾಕುವವರ ನಡುವೆ ಸಾಮಾನ್ಯರ ಇಂತಹ “ಉದಾರ’ ಮನಸ್ಸು ಮತ್ತೆ ಈ ಪ್ರಪಂಚದ ಮೇಲೆ ವಿಶ್ವಾಸವಿಡುವಂತೆ ಮಾಡುತ್ತದೆ ಎನ್ನುತ್ತಿದ್ದರು ಆ ಸಂಘಟಕ ಕಲಾವಿದರು.
ಚನೆ ಸಿಕ್ಕಾಗ ಸಂದರ್ಶನ ಕೊಡಲು ಹಿಂದೆಮುಂದೆ ನೋಡಿ, ಅ ಧಿಕಾರ ಹೋದ ಬಳಿಕ ಸಂದರ್ಶನಕ್ಕಾಗಿ ದೂರವಾಣಿ ಕರೆ ಮಾಡಿ ಬನ್ನಿ ಎಂದವರನ್ನೂ ನೋಡಿದ್ದೇನೆ. ಅಧಿಕಾರ ಕಳೆದುಕೊಂಡ ಗಣ್ಯ ರಾಜಕಾರಣಿಗಳ ಸಂದರ್ಶನ ಮಾಡಿದ್ದೇನೆ. ಅಧಿಕಾರ ಕಳೆದುಕೊಂಡ ನಂತರ ಪ್ರಕಟವಾದ ಸಂದರ್ಶನ ನೋಡಿ “ಪುನರ್ಜನ್ಮ ನೀಡಿದಿರಿ’ ಎಂದೂ ಹೇಳಿದವರಿದ್ದಾರೆ. ಅಧಿಕಾರ ಕಳೆದುಕೊಂಡ ನಂತರ ಸಂದರ್ಶನ ಪ್ರಕಟವಾದ ದಶಕಗಳ ನಂತರವೂ ನೆನಪಿನಲ್ಲಿ ಇಟ್ಟುಕೊಂಡ ರಾಜಕಾರಣಿಯೂ ಇದ್ದಾರೆ. ಆದರೆ, ಇಂದಿಗೂ ನನ್ನನ್ನೂ ಸೇರಿದಂತೆ ಸದ್ದುಮಾಡದೇ ಕೆಲಸ ಮಾಡುವ ಅನೇಕ ಪತ್ರಕರ್ತರಿಗೆ ಅಚ್ಚರಿ ಮೂಡಿಸುವವರು ಜನಸಾಮಾನ್ಯರು ಮಾತ್ರ.
Related Articles
Advertisement
ಭಾಷಣಗಳಲ್ಲಿ ಎದುರಾಳಿಯ ಅಪ್ಪನನ್ನೇ ಪ್ರಸ್ತಾಪಿಸುತ್ತಾರೆ. ಅಪ್ಪನಾಣೆ ಹಾಕುತ್ತಾರೆ. ಆಯಸ್ಸಿನ ಬಗ್ಗೆ ಸಮಯ ನಿಗದಿಪಡಿಸುತ್ತಾರೆ. ದೇಶದ ಪ್ರಧಾನಿಗೇ ಏಕ ವಚನದಿಂದ ಸಂಬೋಧಿಸುತ್ತಾರೆ. ದರಿದ್ರ ಎನ್ನುತ್ತಾರೆ. ತಲೆತಿರುಕ ಎನ್ನುತ್ತಾರೆ. ಲೇ.., ನೀನು… ಪದಬಳಕೆ ಮಾಡುತ್ತಾರೆ. ನ್ಯಾಯಾಲಯ ಜಾಮೀನು ನೀಡಿದ್ದರೂ ಆ ವಿಷಯದ ಬಗ್ಗೆ ಪುಂಖಾನುಪುಂಖ ವಾಗಿ ಮಾತನಾಡುತ್ತಾರೆ. ರಾಜ್ಯದ ಅಭಿವೃದ್ಧಿ ವಿಚಾರಕ್ಕಿಂತ ಯಾರನ್ನು ಎಲ್ಲಿಗೆ ಕಳಿಸುತ್ತೇವೆ ಎಂಬುದನ್ನೇ ಮುಖ್ಯವಾಗಿ ಮಾತನಾಡುತ್ತಾರೆ. ದುಡ್ಡು ಹೊಡೆದವರು, ಕೊಳ್ಳೆ ಹೊಡೆದವರು ಎಂದು ದಾಖಲೆಪತ್ರಗಳಿಲ್ಲದೆ ಆರೋಪ ಮಾಡುತ್ತಾರೆ. ಈ ಆರೋಪಗಳನ್ನು ಚುನಾವಣೆ ಮುಗಿದ ಮೇಲೆ ಮಾಡುತ್ತಾರೋ? ಮುಂದೆ ಹೊಂದಾಣಿಕೆಯ ರಾಜಕಾರಣ ಮಾಡಿ ಅಧಿಕಾರ ಅನುಭವಿಸುವವರು ಇವರೇ ತಾನೇ?ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು ಹೆಚ್ಚು ದಿನವಿಲ್ಲ. ಅದಕ್ಕಾಗಿ ಮತದಾರರನ್ನು ಹುಚ್ಚೆಬ್ಬಿಸಿ ಕುಣಿಸಲು, ದಾರಿ ತಪ್ಪಿಸಲು, ಅವರ ಮನಸ್ಸನ್ನು ಕೆರಳಿಸಲು ನಾನಾ ವಿಧದ ಪದಪ್ರಯೋಗಗಳು ರಾಜಕಾರಣಿಗಳ ಬಾಯಲ್ಲಿ ಬರುತ್ತಿವೆ. ಹೀಗೆ ಭಾಷಣ ಮಾಡುವವರ ಹಿಂದೆಮುಂದೆ ಇರುವವರು ಅದನ್ನು ವಿಡಿಯೋ ಮಾಡಿ ಲಕ್ಷಾಂತರ ಮಂದಿಗೆ ವಾಟ್ಸಾಪ್ ಮುಖಾಂತರ ರವಾನಿಸಿ ದಾರಿತಪ್ಪಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಸರಕಾರದ ಸಾಧನೆಯನ್ನೋ, ಪ್ರತಿಪಕ್ಷಗಳ ಅರ್ಥಪೂರ್ಣ ವಿಮರ್ಶೆಯನ್ನೋ ಹೀಗೆ ಹರಡಲು ಆಸಕ್ತಿ ತೋರುವವರ ಸಂಖ್ಯೆ ಕಡಿಮೆ. ಯುಟ್ಯೂಬ್‌ನಲ್ಲಿ ಪ್ರಧಾನಮಂತ್ರಿಯನ್ನು, ಮುಖ್ಯಮಂತ್ರಿಯನ್ನು, ಪ್ರತಿಪಕ್ಷ ನಾಯಕರನ್ನೂ ಏಕವಚನದಲ್ಲಿ ಸಂಬೋಧಿಸುವ ಭಾಷಣಗಳ ವಿಡಿಯೋಗಳು ಯಥೇತ್ಛವಾಗಿವೆ. ಈ ಎಲ್ಲ ಭಾಷಣಗಳಲ್ಲಿ ನಾಡಿನ ಅಭಿವೃದ್ಧಿ ವಿಚಾರ ಇವರಿಗೆ ಕ್ಷುಲ್ಲಕ. ಭಾಷಣ ಕೇಳುವ ಮತದಾರರು ಕತ್ತಿ ಲಾಂಗು ಮಚ್ಚು ಹಿಡಿದು ಹುಚ್ಚೆದ್ದು ಎದುರಾಳಿಗಳನ್ನು ಕೊಲ್ಲಲು ಹೊರಡಬೇಕೆಂಬ ದುರುದ್ದೇ ಶವಿರಬಹುದೇ ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಈ ಎಲ್ಲ ರಾಜಕಾರಣಿಗಳು ಕಾಲಕ್ಕೆ ತಕ್ಕಂತೆ, ಸನ್ನಿವೇಶಕ್ಕೆ ತಕ್ಕಂತೆ, ಸಂದರ್ಭಕ್ಕೆ ತಕ್ಕಂತೆ ಮಿತ್ರರಾಗುತ್ತಾರೆ. ವಿಧಾನಸಭೆಯೊಳಗೆ ಗಂಭೀರ ಚರ್ಚೆಯನ್ನು ದಾರಿ ತಪ್ಪಿಸಿ ಸುಮ್ಮನಾಗುತ್ತಾರೆ. ಯೋಜನೆಗಳ ಗುತ್ತಿಗೆ ವಿಷಯದಲ್ಲಿ ಪರಸ್ಪರ ಸ್ನೇಹ ಕುದುರಿಸುತ್ತಾರೆ. ತಮಗೆ ಲಾಭ ಆಗುವ ಕಡತಗಳನ್ನು ಹಿಡಿದು ಮುಖ್ಯಮಂತ್ರಿ, ಮಂತ್ರಿಗಳ ಕಚೇರಿ ಬಾಗಿಲಲ್ಲಿ ಕಾದು ಸಹಿ ಹಾಕಿಸಿಕೊಳ್ಳುತ್ತಾರೆ. ಪತ್ರಿಕೆಗಳಲ್ಲಿ ಬೇಕಾದವರನ್ನು ಹೊಗಳಿ, ತೆಗಳಿ ಆಡುವ ಮಾತುಗಳು ಪ್ರಕಟವಾಗುತ್ತವೆ. ಈ ಜಾಲದ ಹೊರಗೆ ಇರುವ ಮತದಾರರಿಗೆ ಇದು ಅರ್ಥವಾಗದ ವಿಷಯ. ರಾಜಕಾರಣಿಗಳ ಭಾಷಣ ಕೇಳಿ ಪ್ರೇರೇಪಿತರಾಗಿ ಯಾರಾದರೂ ಸ್ನೇಹಿತ ರಾದರೆ ಅದು ಮೆಚ್ಚತಕ್ಕ ವಿಚಾರ. ಆದರೆ ಭಾಷಣ ಕೇಳಿ ಹಗೆ ಸಾಧಿಸಿ ವೈರಿಗಳಾಗಿ ಜೀವನಪರ್ಯಂತ ಮನಸ್ಸನ್ನು ವ್ಯಗ್ರಗೊಳಿಸಿಕೊಳ್ಳುವ ಮತದಾರರಿಗೆ ಈ ಒಳಗುಟ್ಟು ತಿಳಿಯಬೇಕಾಗಿದೆ. ಪತ್ರಿಕೆಗಳೇ ಅಮೂಲಾಗ್ರ ಅಧ್ಯಯನ ನಡೆಸಿ ತನಿಖಾ ವರದಿಗಳನ್ನು ಪ್ರಕಟಿಸಿದರೆ ರಾಜಕಾರಣಿಗಳು ಮರುದಿನವೇ ಕಾನೂನು ಸಮರಕ್ಕೆ ಸಜ್ಜಾಗಿ ನೋಟಿಸು ಜಾರಿಗೊಳಿಸುತ್ತಾರೆ. ಸಂಪಾದಕರ ಚೇಂಬರ್‌ನಲ್ಲಿ ಇಂತಹ ನೂರಾರು ನೋಟಿಸುಗಳು ಇರುತ್ತವೆ. ಆದರೆ ಚುನಾವಣಾ ಪ್ರಚಾರದಲ್ಲಿ ವೈಯಕ್ತಿಕ ತೇಜೋವಧೆ, ಭ್ರಷ್ಟಾಚಾರದ ಆರೋಪ, ಏಕವಚನದ ಪ್ರಯೋಗವಾದರೂ ಪರಸ್ಪರ ಒಂದು ಚೀಟಿಯ ಎಚ್ಚರಿಕೆಯ ನೋಟಿಸು ಕೂಡಾ ಜಾರಿಗೊಳಿಸುವುದಿಲ್ಲ, ಏಕೆ ಗೊತ್ತೇ? ಅವರೆಲ್ಲರೂ ಒಂದೇ ವರ್ಗದವರು, ಒಂದೇ ಕುಟುಂಬಕ್ಕೆ ಸೇರಿದವರು. ಅದುವೇ ರಾಜಕಾರಣಿಗಳ ಕುಟುಂಬ. ಅಧಿಕಾರಿಗಳು, ತಜ್ಞರು ನೀಡಿದ ಸಲಹೆಗಳಿಂದ ಸದನಗಳಲ್ಲಿ ಜನಪರವಾದ ಮಸೂದೆಗಳನ್ನೇನೋ ರೂಪಿಸುತ್ತಾರೆ. ಅಲ್ಲಿ ರಾಜ್ಯದ ಅಭಿವೃದ್ಧಿ, ಜನರ ಕುರಿತಾದ ಕಾಳಜಿ ಇರುತ್ತದೆ. ಅವುಗಳಲ್ಲಿ ಎಷ್ಟು ಅಭಿವೃದ್ಧಿ ಕಾರ್ಯಗಳು ನಿಜಕ್ಕೂ ಅನುಷ್ಠಾನವಾಗಿವೆ, ಆಗಿಲ್ಲದಿದ್ದರೆ ಯಾಕೆ ಆಗಿಲ್ಲ ಎನ್ನುವ ಯೋಚನೆ, ಪ್ರಶ್ನೆ ಒಬ್ಬನೂ ಮಾಡದೇ ತನ್ನದೇ ಹಿತಾಸಕ್ತಿಯಲ್ಲಿ ಮುಳುಗಿರುತ್ತಾನೆ. ಈ ಚುನಾವಣೆ ಪ್ರಚಾರ ಕಾಲದಲ್ಲಿಯೂ ಇಂತಹ ಕಾಳಜಿಗಳಿಗಿಂತ ವೈಯಕ್ತಿಕ ಟೀಕೆಗಳೇ ಹೆಚ್ಚಾಗಿ, ಅವು ಪತ್ರಿಕೆಗಳಲ್ಲಿಯೂ ರಾರಾಜಿಸುತ್ತಿರುವುದು ದೌರ್ಭಾಗ್ಯ. ಅದೂ ಟೀಕೆಗಳು ಸಭ್ಯತೆಯ ಎಲ್ಲ ಮಿತಿಗಳನ್ನು ಮೀರಿ ರಾಜಕಾರಣಿಗಳ ಅತ್ಯಂತ ಕೊಳಕುಮುಖದ, ಅತ್ಯಂತ ಟೊಳ್ಳಾದ ಮುಖದ ಪರಿಚಯ ಮಾಡಿಸುತ್ತಿವೆ. “ಆಚಾರವಿಲ್ಲದ ನಾಲಗೆ ನಿನ್ನ ನೀಚಬುದ್ಧಿಯ ಬಿಡು ನಾಲಗೆ, ವಿಚಾರವಿಲ್ಲದೆ ಪರರ ದೂಷಿಸುವುದಕೆ ಚಾಚಿಕೊಂಡಿರುವಂಥ ನಾಲಗೆ’ ದಾಸರ ಹಾಡು ಪದೇ ಪದೇ ನೆನಪಾಗುತ್ತಿದೆ. ಸುಶಿಕ್ಷಿತ ಸಮಾಜದ ಒಂದು ಅನಿವಾರ್ಯ ಭಾಗವಾದ, ಸಮಾಜದ ದಿಕ್ಕನ್ನು ರೂಪಿಸುವ ರಾಜಕಾರಣಿಗಳು ಇದೇ ರೀತಿ ನಾಲಗೆಯಿಂದ ತಮ್ಮ ವ್ಯಕ್ತಿತ್ವವನ್ನು ಹರಾಜು ಹಾಕಿಕೊಳ್ಳುತ್ತಿದ್ದರೆ ಜನಸಾಮಾನ್ಯರು ಇವರನ್ನು ಎಷ್ಟು ಗೌರವಿಸಲು ಸಾಧ್ಯ? ಚುನಾವಣೆಗಳನ್ನು ಸಭ್ಯ ಮಾತುಗಳಿಂದ, ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ಗೆಲ್ಲಲು ಅಸಾಧ್ಯವೆಂದು ಯಾಕೆ ರಾಜಕಾರಣಿಗಳು ನಿರ್ಧರಿಸಿ ದ್ದಾರೆ! ಸಭ್ಯ ರಾಜಕಾರಣಿಗಳ ಪಟ್ಟಿಯೂ ದೊಡ್ಡದೇ ಇರುವಾಗ ಕ್ಷೇತ್ರದ ಅಭಿವೃದ್ಧಿಯನ್ನು ನೋಡಿ ಜನಸಾಮಾನ್ಯ ಮತದಾರ ಮತ ಹಾಕುತ್ತಾನೆ ಎನ್ನುವ ನಂಬಿಕೆ ರಾಜಕಾರಣಿಗಳಿಗಿದ್ದರೆ ಇಷ್ಟು ಹೊಲಸು ಮೆತ್ತಿಕೊಳ್ಳುವ ಅಗತ್ಯವಿದೆಯೇ! ಫೋಟೊಗ್ರಫಿಯ ಹುಚ್ಚಿನಿಂದ ಕಾಡು ಸುತ್ತುವಾಗ ಕಾಡು ಕಾಡುತ್ತದೆ. ಅಲ್ಲಿ ಕಾಡಿನ ಗಮ್ಯಗಳು ಅಚ್ಚರಿಗೊಳಿಸುತ್ತವೆ. ಆತಂಕ ಗೊಳಿಸುವುದಿಲ್ಲ. ಆದರೆ ಅಲ್ಲೂ ಈ ಮನುಷ್ಯ ಕಾಲಿಟ್ಟಾಗ ಆಗುವ ಅನಾಹುತಗಳು ನಡೆಯುತ್ತಲೇ ಇವೆ. ಕಾಡನ್ನೂ ತನ್ನ ರಾಜಕಾ ರಣದ ಬೇಳೆ ಬೇಯಿಸಿಕೊಳ್ಳಲು ಉಪಯೋಗಿಸುವವರಿದ್ದಾರೆ. ಅಂಥವರ ನಡುವೆ ಹಕ್ಕಿಗಳ ಗೂಡು ಕಟ್ಟಲು ಉಪಯೋಗವಾ ಗುತ್ತದೆ ಎಂದು ಹಕ್ಕಿಗಳು ಹಾರಾಡುವ ಸ್ಥಳಗಳಲ್ಲಿ ಕಡ್ಡಿಗಳನ್ನು ತಂದು ಹಾಕುತ್ತಿದ್ದ, ರಂಗನತಿಟ್ಟಿನಲ್ಲಿ ಬೋಟಿಂಗ್ ಮಾಡುತ್ತ ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಗೋವಿಂದನಂಥವರು ಮನಸ್ಸು ಮುಟ್ಟುತ್ತಾರೆ.. ಹೆಜ್ಜಾರ್ಲೆ ಹಕ್ಕಿಗಳು ಬಂದು ಕಡ್ಡಿ ಎತ್ತಿಕೊಂಡು ಹೋಗುವಾಗ ಸಾರ್ಥಕತೆ ಅನುಭವಿಸುತ್ತಿದ್ದರು. ಸಾಮಾನ್ಯನೊಬ್ಬನ ಯಾವುದೇ ಸ್ವಾರ್ಥವಿಲ್ಲದೇ ಮಾಡುವ ಈ ಉದಾರ ಕೆಲಸ ಪ್ರಕೃತಿಯ ಪೂಜೆ ಮಾಡಿದಂತೆಯೇ. ಸಾಮಾನ್ಯನ ಅಸಾಮಾನ್ಯ ಗುಣವಿದು. ಚುನಾವಣೆ ಹೊತ್ತಿನಲ್ಲಿ ದೇವಸ್ಥಾನಗಳ ಭೇಟಿ ದೊಡ್ಡವರ ಸಾಮಾನ್ಯ ಸ್ವಾರ್ಥದ ಗುಣ. ಎಷ್ಟೇ ತೂಕ ಹಾಕಿದರೂ ಮತ್ತೆ ಜನಸಾಮಾನ್ಯನ ತೂಕವೇ ಹೆಚ್ಚೆಂದು ಕಾಣುತ್ತದೆ. ಯಾವುದೇ ಪಕ್ಷಕ್ಕೆ ಸೇರಿದ ಅಭ್ಯರ್ಥಿ ಮನೆ ಬಾಗಿಲಿಗೆ ಬಂದಾಗ ಮತದಾರ ಮುಗುಳ್ನಕ್ಕು ಸ್ವಾಗತಿಸಿ, ಆಯ್ತು ಓಟು ಹಾಕ್ತೀವಿ ಎಂದು ಹೇಳುತ್ತಾರೆ. ಆದರೆ, ಅದೇ ಅಭ್ಯರ್ಥಿ ಗೆದ್ದರೆ, ಅಧಿಕಾರ ವಹಿಸಿಕೊಂಡ ನಂತರ ಮತದಾರ ಅವರ ಕಚೇರಿಗೆ ಬಂದಾಗ ಮುಗುಳ್ನಕ್ಕು ಸ್ವಾಗತಿಸುತ್ತಾರಾ? ಇದುವೇ ಮತದಾರ ಮತ್ತು ರಾಜಕಾರಣಿಗಳ ವ್ಯತ್ಯಾಸ. – ಶಿವಸುಬ್ರಹ್ಮಣ್ಯ ಕೆ.