Advertisement

ಮತ್ತೆ ಕೇಳಿಸಲಿದೆ “ಕ್ಲಾಕ್‌’ಟವರ್‌ನ “ಸದ್ದು’

10:13 PM Sep 27, 2019 | mahesh |

ಮಹಾನಗರ: ಒಂದೊಮ್ಮೆ ನಗರದ ಕೇಂದ್ರ ಬಿಂದುವಾಗಿ ಗುರುತಿಸಿಕೊಂಡಿದ್ದ ಕ್ಲಾಕ್‌ ಟವರ್‌ ಇದೀಗ ಹಲವು ವರ್ಷಗಳ ಬಳಿಕ ಮತ್ತೆ ಕಾರ್ಯಾರಂಭಿಸಲು ಸಿದ್ಧಗೊಳ್ಳುತ್ತಿದೆ. ಸ್ಮಾರ್ಟ್‌ಸಿಟಿ ಮಂಗಳೂರು ಯೋಜನೆಯಡಿ ಹಂಪನಕಟ್ಟೆಯಲ್ಲಿ ನಿರ್ಮಿ ಸುತ್ತಿರುವ ನೂತನ ಕ್ಲಾಕ್‌ಟವರ್‌ನ ಕಾಮಗಾರಿ ಇದೀಗ ಕೊನೆಯ ಹಂತದಲ್ಲಿದ್ದು, ಗಡಿಯಾರ ಜೋಡಣೆಯ ಕಾರ್ಯ ಪ್ರಗತಿಯಲ್ಲಿದೆ. ವಿಶೇಷ ವೆಂದರೆ ಅಳವಡಿಸುವ ನೂತನ ಗಡಿಯಾರವನ್ನು ಇಟಲಿಯಿಂದ ತರಿಸಲಾಗಿದೆ. ಗುರುವಾರ ಟವರ್ ನ ಮೂರು ಬದಿಗೆ ಗಡಿಯಾರ ಅಳವಡಿಸಲಾಗಿದ್ದು, ಗಡಿಯಾರದ ಮುಳ್ಳುಗಳ ಅಳವಡಿಕೆ ಮತ್ತು ಮತ್ತೂಂದು ಬದಿ ಗಡಿಯಾರ ಜೋಡಿಸುವ ಕಾರ್ಯ ಪ್ರಗತಿಯಲ್ಲಿದೆ.

Advertisement

88 ಅಡಿ ಸುತ್ತಳತೆ ಹೊಂದಿರುವ ಈ ಕ್ಲಾಕ್‌ನಲ್ಲಿ ಬಳಕೆಯಾಗುವ ಯಂತ್ರೋಪಕರಣಗಳನ್ನು ಇಟಲಿಯಿಂದ ಆಮದು ಮಾಡಿಕೊಳ್ಳಲಾಗಿದೆ. 8 ನಾನಾ ಬಗೆಯ ಬೆಲ್‌ ಮಾಡುವ ಸಾಮರ್ಥ್ಯ ಇರುವ ಮೈಕ್ರೋ ಪ್ರೊಸೆಸರ್‌ ಇದರಲ್ಲಿದ್ದು, ಒಂದೇ ವಿಧದ ಬೆಲ್‌ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಅಕ್ರೆಲಿಕ್‌ ಶೀಟ್‌, ಸ್ಟೈನ್‌ಲೆಸ್‌ ಸ್ಟೀಲ್‌, ಎಸಿಪಿ ಶೀಟ್‌ಗಳನ್ನು ಕ್ಲಾಕ್‌ಗೆ ಬಳಸಿ ಸಿದ್ಧಪಡಿಸಲಾಗಿದೆ.

ಮಾರ್ನಮಿಕಟ್ಟೆಯ ನಾಯಕ್ಸ್‌ ಟೈಮ್‌ ಸಂಸ್ಥೆಯ ಸತೀಶ್‌ ಚಂದ್ರ ನಾಯಕ್‌ ಹಾಗೂ ಅವರ ಪುತ್ರ ಸಿದ್ಧಾಂತ್‌ ನಾಯಕ್‌ ಅವರು ಈ ಕ್ಲಾಕ್‌ ಟವರ್‌ಗೆ ಅಳವಡಿಸಲಾಗಿರುವ ಕ್ಲಾಕ್‌ನ ಹಿಂದಿನ ಶಕ್ತಿಗಳು. 1930ರ ದಶಕದಲ್ಲಿ ನಾಯಕ್‌ ಕ್ಲಾಕ್ಸ್‌ ಸಂಸ್ಥೆಯನ್ನು ಹುಟ್ಟುಹಾಕಿದ ವಾಮನ್‌ ನಾಯಕ್‌ ಅವರು ಕುಡ್ಲದ ಕ್ಲಾಕ್‌ ಟವರ್‌ಗೆ 1964ರಲ್ಲಿ ಕ್ಲಾಕ್‌ ನಿರ್ಮಿಸಿಕೊಟ್ಟಿದ್ದರು.

ಒಂದೇ ಯಂತ್ರ
ಇದು ಪೂರ್ಣವಾಗಿ ಯಾಂತ್ರಿಕ ಬಲದಿಂದಲೇ ಓಡುವ ಗಡಿಯಾರವಾಗಿತ್ತು. ವಾರಕ್ಕೆ ಒಂದು ಬಾರಿ ಕೀ ಕೊಡಬೇಕಿತ್ತು. ನಾಲ್ಕು ಬದಿಯ ಗಡಿಯಾರಕ್ಕೆ ಒಂದೇ ಯಂತ್ರವಿತ್ತು. ಆದರೆ ಕೆಲವು ವರ್ಷಗಳ ಬಳಿಕ ಈ ಕ್ಲಾಕ್‌ಟವರ್‌ ಅನ್ನೇ ಕೆಡವಲಾಯಿತು. ಈ ಮೂಲಕ ಕ್ಲಾಕ್‌ ಟವರ್‌ ಮರೆಯಾಗಿತ್ತು. ಇದೀಗ ಮತ್ತೆ ಕ್ಲಾಕ್‌ಟವರ್‌ ಅದೇ ಜಾಗದಲ್ಲಿ ಎದ್ದುನಿಂತಿದೆ.

ಗಂಟೆ ಪ್ರಕಾರ ಬೆಲ್‌ ಶಬ್ದ
ಪ್ರತಿ ಗಂಟೆ ಪ್ರಕಾರ ಬೆಲ್‌, ಅರ್ಧ ಗಂಟೆಗೆ ಸಿಂಗಲ್‌ ಬೆಲ್‌ ಶಬ್ದ ಇದರಲ್ಲಿ ಕೇಳಿಸಲಿದೆ. 75 ಅಡಿ ಎತ್ತರ 14 ಅಡಿ ಅಗಲದಲ್ಲಿ ಈ ಗಡಿಯಾರ ಕೂರಲಿದೆ. ಮೂರು ಬ್ಯಾಟರಿಗಳನ್ನು ಇಡಲಾಗುತ್ತದೆ. 400 ವ್ಯಾಟ್‌ ಸಾಮರ್ಥ್ಯ ಇರುವ ಎಲ್‌ಇಡಿ ಬಲ್ಬ್ಗಳನ್ನು ಗಡಿಯಾರದ ಒಳಭಾಗದಲ್ಲಿ ಅಳವಡಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next