ಬಹಳ ಹಿತವೆನಿಸುವ ಸಿನಿಮಾ. ಸಂಗೀತದ ನಾದದ ಸಾಧ್ಯತೆಯನ್ನು ಹೇಳುವುದಾಗಿ ಹೊರಟರೂ ಹೇಳುವುದು ಬದುಕಿನ ನಾದದ ಸಾಧ್ಯತೆ. ಅದಕ್ಕೆ ಪೂರಕವೆನಿಸುವ ಅಥವಾ ಮಾರ್ಗವಾಗುವ ಸಂಗೀತದ್ದು. ಶಿಸ್ತು, ಸ್ವಾತಂತ್ರ್ಯ, ಸಂತೋಷವೆಂಬ ಮುತ್ತುಗಳನ್ನು ಬದುಕಿನ ದಾರಕ್ಕೆ ಹೆಣೆಯುವುದೇ ಚೆಂದ. ಮುತ್ತಿನ ಹಾರ ಚಿತ್ರದಲ್ಲಿನ ದೇವರು ಹೊಸೆದ ಪ್ರೇಮದ ದಾರ ಎಂಬ ಹಾಡಿನಂತೆಯೇ ನಿರ್ದೇಶಕ ರಾಬರ್ಟ್ ವೈಸ್ ದೇವರು ಹೊಸೆದ ಬದುಕಿನ ದಾರಕ್ಕೆ ಮೂರೂ ಮಣಿಗಳನ್ನು ಚೆಂದವಾಗಿ ಪೋಣಿಸಿದ್ದಾರೆ.
ರಾಬರ್ಟ್ ವೈಸ್ ನಿರ್ದೇಶಿಸಿ ನಿರ್ಮಿಸಿದ ಚಿತ್ರವಿದು. ಮೂಲತಃ ಹೊವಾರ್ಡ್ ಲಿಂಡ್ಸೆ ಹಾಗೂ ರಸೆಲ್ ಕ್ರೌವ್ ಅವರ ಇದೇ ಹೆಸರಿನ ಕೃತಿಯನ್ನು ಆಧರಿಸಿದ ಸಿನಿಮಾ. ಆರ್ನೆಸ್ಟ್ ಲೆಮ್ಯಾನ್ ರದ್ದು ಚಿತ್ರಕಥೆ.
1938 ರ ಸಂದರ್ಭದ ಕಥೆ. ಎರಡನೇ ವಿಶ್ವ ಜಾಗತಿಕ ಯದ್ಧಕ್ಕೆ ಅಣಿಗೊಳ್ಳುತ್ತಿದ್ದ ಸಮಯ. ಆಸ್ಟ್ರಿಯಾದ ನಗರವೊಂದರಲ್ಲಿ ನನ್ ಆಗಲು ತರಬೇತಿ ಪಡೆಯುತ್ತಿದ್ದ ಮಾರಿಯಾಳಿಗೆ ಅಗಾಧವಾದ ಜೀವನೋತ್ಸಾಹ. ನಿರ್ದಿಷ್ಟ ನಿಯಮ, ಶಿಸ್ತುಗಳಿಗೆ ಒಗ್ಗಿಸಿಕೊಳ್ಳದ ಮಾರಿಯಾಳನ್ನು ಕಂಡು ಆ ಕೇಂದ್ರದ ಮುಖ್ಯಸ್ಥೆಗೆ ಚಿಂತೆಗೀಡಾಗುತ್ತಾಳೆ. ಹೇಗಾದರೂ ಮಾಡಿ ನಿಯಮಗಳಿಗೆ ಒಗ್ಗಿಸಬೇಕೆಂದು ನಿವೃತ್ತ ನೌಕಾದಳದ ಕ್ಯಾಪ್ಟನ್‌ನ ಮನೆಗೆ ಅವರ ಏಳು ಮಕ್ಕಳನ್ನು ನಿರ್ವಹಿಸಲು ಕಳುಹಿಸಲಾಗುತ್ತದೆ. ಕ್ಯಾಪ್ಟನ್‌ನ ಪತ್ನಿ ಮರಣಗೊಂಡ ಹಿನ್ನೆಲೆಯಲ್ಲಿ ಮಕ್ಕಳ ಉಸ್ತುವಾರಿ ವಹಿಸಿಕೊಂಡ ಕ್ಯಾಪ್ಟನ್ ತನ್ನ ಮಿಲಿಟರಿ ಶಿಸ್ತಿಗೆ ಒಳಪಡಿಸುತ್ತಾನೆ.
ಮಕ್ಕಳ ನಿರ್ವಹಣೆಗೆ ಬರುವ ಮಾರಿಯಾಳಿಗೆ ಮೊದ ಮೊದಲು ಮಕ್ಕಳು ಅಸಾಧ್ಯ ಎನಿಸುತ್ತಾರೆ. ಕ್ರಮೇಣ ತನ್ನ ಸಂಗೀತದ ಮಂತ್ರದಂಡದ ಮೂಲಕ ಅವರ ಮನಗೆದ್ದು ಹತೋಟಿಗೆ ತೆಗೆದುಕೊಳ್ಳುತ್ತಾಳೆ. ಈ ಮಧ್ಯೆ ಒಂದು ದಿನ ಕ್ಯಾಪ್ಟನ್ ತನ್ನ ಭಾವಿ ಪತ್ನಿ ಹಾಗೂ ಅವರ ಸ್ನೇಹಿತನೊಂದಿಗೆ ಮನೆಗೆ ಬಂದಾಗ ಮಕ್ಕಳು ಹಾಡುತ್ತಿರುತ್ತಾರೆ. ಮನೆಯಲ್ಲಿ ಸಂಗೀತ ಕೇಳಿ ಅಚ್ಚರಿಗೆ ಒಳಗಾಗುವ ಕ್ಯಾಪ್ಟನ್ ನಂತರ ಖುಷಿ ಪಡುತ್ತಾನೆ. ಹಾಗೆಂದು ಸಾರ್ವಜನಿಕವಾಗಿ ತನ್ನ ಮಕ್ಕಳು ಹಾಡುವುದನ್ನು ಒಪ್ಪುವುದಿಲ್ಲ. ಹೀಗೆ ಮಾರಿಯಾಳ ಶಾಂತ ಮನಸ್ಥಿತಿ, ಮಕ್ಕಳಿಗೆ ತೋರುವ ಪ್ರೀತಿ ಎಲ್ಲವೂ ಕ್ಯಾಪ್ಟನ್‌ನಲ್ಲಿ ಅವಳ ಬಗೆಗೆ ಅನುರಕ್ತಳಾಗುವಂತೆ ಮಾಡುತ್ತದೆ. ಅನಂತರ ಬರುವ ಕೆಲವು ಸನ್ನಿವೇಶಗಳು ಮಾರಿಯಾಳನ್ನು ಬೇರ್ಪಡಿಸಿದರೂ, ಮತ್ತೆ ಸುಖಾಂತ್ಯದಿಂದ ಸಿನಿಮಾ ಮುಗಿಯುತ್ತದೆ.
ಕ್ಯಾಪ್ಟನ್ ಅಗಿ ಕ್ರಿಸ್ಟೋಫರ್ ಪ್ಲಮರ್ ಆಭಿನಯಿಸಿದ್ದರು. ಮಾರಿಯಾ ಪಾತ್ರದಲ್ಲಿ ಅಭಿನಯಿಸಿದ ಜೂಳಿ ಆಂಡ್ರಿಯಾಸ್ ಈ ಚಿತ್ರದ ನಟನೆಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಪಡೆದಿದ್ದರು. ಈ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಿರ್ದೇಶನ (ರಾಬರ್ಟ್ ವೈಸ್) ಸೇರಿದಂತೆ ಐದು ವಿಭಾಗಗಳಲ್ಲಿ ಆಸ್ಕರ್ ಪುರಸ್ಕಾರ ಲಭಿಸಿತ್ತು. ಒಟ್ಟು 174 ನಿಮಿಷಗಳ ಸಿನಿಮಾವನ್ನು 8. 2 ಮಿಲಿಯನ್ ಡಾಲರ್‌ಗಳಲ್ಲಿ ನಿರ್ಮಿಸಲಾಗಿತ್ತು. ಆದರೆ 280 ಮಿಲಿಯನ್ ಡಾಲರ್‌ನಷ್ಟು ಗಳಿಕೆ ಮಾಡಿ ದಾಖಲೆ ನಿರ್ಮಿಸಿತ್ತು.
-ಅಪ್ರಮೇಯ