Advertisement
ಸಭೆ ಆರಂಭಕ್ಕೂ ಮುನ್ನ ಜಿಪಂ ಸದಸ್ಯೆ ಭಾಗ್ಯವತಿ ಪ್ರಸ್ತಾಪಿಸಿ, ಕೊಪ್ಪಳದ ಹಾಸ್ಟೆಲ್ನಲ್ಲಿ ಐವರು ವಿದ್ಯಾರ್ಥಿಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಈ ಘಟನೆ ನಡೆದಿದೆ. ಆದರೆ ಪೊಲೀಸರು ಬಂಧಿಸಿದ ಆರೋಪಿತರಿಗೆ ಒಂದೇ ದಿನದಲ್ಲಿ ಜಾಮೀನು ಸಿಕ್ಕಿದೆ. ಈ ಘಟನೆಗೆ ಯಾರು ಹೊಣೆ? ಮಕ್ಕಳ ಜೀವಕ್ಕೆ ಬೆಲೆ ಇಲ್ಲವೇ ಎಂದು ಪ್ರಶ್ನೆ ಮಾಡಿದರಲ್ಲದೇ, ಇನ್ನೂ ಕನಕಗಿರಿ ತಾಲೂಕಿನ ನವಲಿಯಲ್ಲಿ ಅಕ್ರಮ ಮರಳು ದಂಧೆ ಮಾಫಿಯಾಗೆ ಮೂರು ಕಂದಮ್ಮಗಳ ಪ್ರಾಣಪಕ್ಷಿ ಹಾರಿಹೋಗಿದೆ. ತಂದೆ-ತಾಯಿಗೆ ಮಕ್ಕಳನ್ನು ಕಳೆದುಕೊಂಡ ದುಃಖ ನೋಡಲಾಗುತ್ತಿಲ್ಲ. ದೂರದ ಮಹಾರಾಷ್ಟ್ರದಿಂದ ಇಲ್ಲಿಗೆ ಬಂದು ಇದ್ದಲು ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರ ಬದುಕೇ ಕತ್ತಲಾಗಿದೆ. ಆ ಕಂದಮ್ಮಗಳ ಜೀವಕ್ಕೆ ಹೊಣೆಯಾರು ಎಂದು ಅಸಮಾಧನದಿಂದಲೇ ಪ್ರಸ್ತಾಪಿಸಿದರು.
Related Articles
Advertisement
ಆಡಳಿತ ಯಂತ್ರ ಕುಸಿದಿದೆಯೋ?: ಸದಸ್ಯ ಮಹೇಶ ಮಾತನಾಡಿ, ಸಭೆಗೆ ಅಧಿಕಾರಿಗಳು ಬರಲ್ಲ. ನಾವು ಕೇಳಿದ ಮಾಹಿತಿ ಕೊಡಲ್ಲ. ಪ್ರಗತಿಯಂತೂ ಅಷ್ಟಕ್ಕಷ್ಟೇ ಹಲವು ಬಾರಿ ಹೇಳಿದರೂ ನಮಗೆ ಸ್ಪಂದನೆ ಮಾಡಲ್ಲ. ಅಧ್ಯಕ್ಷರು ಕರೆದ ಸ್ಥಾಯಿ ಸಮಿತಿಗೆ ಅಧಿಕಾರಿಗಳೇ ಗೈರು ಹಾಜರಾಗಿದ್ದಾರೆ. ಇಲ್ಲಿ ಆಡಳಿತ ಯಂತ್ರವೇ ಕುಸಿದಿದೆಯೋ ಎಂದು ಪ್ರಶ್ನೆ ಮಾಡಿದರು.
ಎನ್‌ಆರ್‌ಡಬ್ಲ್ಯೂಪಿಗೆ ಪ್ರಸಕ್ತ ಸಾಲಿನ ಪ್ರಸ್ತಾವನೆಗೆ ಜಿಪಂ ಸಭೆಯಲ್ಲಿ ಅನುಮತಿ ನೀಡಿಲ್ಲ. ಆದರೂ ಮೇಲ್ಮಟ್ಟದ ಅಧಿಕಾರಿಗಳು ಕೇಳಿದ್ದಾರೆಂದು ಅನುಮೋದನೆ ನೀಡಲಾಗಿದೆ. ಅಂದರೆ ಸಾಮಾನ್ಯ ಸಭೆ, ಜನಪ್ರತಿನಿಧಿಗಳಿಗೆ ಬೆಲೆಯೇ ಇಲ್ಲವೇ? ನಾವು ಅನುಮೋದನೆ ಕೊಡದೇ ಹೇಗೆ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ ಎಂದು ಅಧ್ಯಕ್ಷ ವಿಶ್ವನಾಥರಡ್ಡಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದು ನಮಗೆ ಮಾಡಿದ ಅವಮಾನ, ಜಿಪಂ ಸಭೆಯಲ್ಲಿ ಹಕ್ಕು ಚ್ಯುತಿ ಮಾಡಲಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮವಾಗಲೇಬೇಕು ಎಂದು ಒತ್ತಾಯ ಮಾಡಿದರು.
ಶುದ್ಧ ಘಟಕಕ್ಕೆ ಮೊಬೈಲ್ ಆ್ಯಪ್: ಇನ್ಮುಂದೆ ಜಿಲ್ಲೆಯ ಶುದ್ಧ ಕುಡಿಯುವ ನೀರಿನ ಘಟಗಳ ಸ್ಥಿತಿಗತಿ ತಿಳಿಯಲು ಮೊಬೈಲ್ ತಂತ್ರಜ್ಞಾನ ತರುವ ಸಿದ್ಧತೆ ನಡೆಸಿದ್ದೇವೆ. ಘಟಕ ಸರಿಯಿದ್ದರೆ ಪಿಡಿಒ ಅದರ ಎರಡು ಭಾವಚಿತ್ರ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಕೆಟ್ಟಿದ್ದರೂ ಫೋಟೋ ಅಪ್‌ಲೋಡ್ ಮಾಡಬೇಕು. ಇಲ್ಲಿ ಪಿಡಿಒ ನಿರ್ಲಕ್ಷ ್ಯ ವಹಿಸಿದ್ದರೆ ತಪ್ಪಿತಸ್ಥರ ಮೇಲೆ ಕ್ರಮವಾಗಲಿದೆ. ವಿವಿಧ ಏಜೆನ್ಸಿಗಳಿಗೆ ಇಲ್ಲಿ ಜಾರಿಕೊಳ್ಳಲು ಅವಕಾಶವಿಲ್ಲ. ಆ ತಂತ್ರಜ್ಞಾನ ಅಭಿವೃದ್ಧಿಪಡಿಸಿದ್ದು, ಇನ್ನೊಂದು ತಿಂಗಳಲ್ಲಿ ಈ ಪ್ರಕ್ರಿಯೆ ನಡೆಯಲಿದೆ ಜಿಪಂ ಸಿಇಒ ರಘುನಂದನ್ ಮೂರ್ತಿ ಹೇಳಿದರು.
ಮುಂಡರಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 43 ಕೋಟಿ ರೂ. ಖರ್ಚು ಮಾಡಿದೆ. ಆದರೆ ಒಂದೇ ಒಂದು ಗ್ರಾಮಕ್ಕೆ ಹನಿ ನೀರು ಹರಿಸಿಲ್ಲ. ನನಗೆ ಜಿಪಂ ಸದಸ್ಯನಾಗಿದ್ದಕ್ಕೆ ಜಿಗುಪ್ಸೆ ಬಂದಿದೆ. 8 ವರ್ಷಗಳಿಂದ ವಿಳಂಬ ಮಾಡಲಾಗುತ್ತಿದೆ. ಇದಕ್ಕೆ ಹೊಣೆಯಾರು? ಗುತ್ತಿಗೆದಾರನಿಗೆ ಅನುದಾನ ಬಿಡುಗಡೆ ಮಾಡಿದೆ.
ಬೆಳೆವಿಮೆ ಸಕಾಲಕ್ಕೆ ಖಾತೆಗೆ ಹಾಕಿ: ಜಿಲ್ಲೆಯಲ್ಲಿ 2016-17ನೇ ಸಾಲಿನಲ್ಲಿ ಬೆಳೆ ವಿಮೆಗೆ ತುಂಬಿದ ರೈತರಲ್ಲಿ 17 ಸಾವಿರ ರೈತರ ಖಾತೆ, ಆಧಾರ್ ಸಂಖ್ಯೆ ಸೇರಿ ಇತರೆ ಮಾಹಿತಿ ತಪ್ಪಾಗಿವೆ. ಹೀಗಾಗಿ 40 ಕೋಟಿ ಹಣ ಬಾಕಿ ಇದೆ. ಅದನ್ನು ಸರಿಪಡಿಸಿ ಕೂಡಲೇ ಖಾತೆಗೆ ಜಮೆ ಮಾಡಲಿದ್ದೇವೆ ಎಂದು ಜಂಟಿ ಕೃಷಿ ನಿರ್ದೇಶಕಿ ಶಬಾನಾ ಶೇಖ್ ಅವರು ಹೇಳಿದರು.
ಸಭೆಯಲ್ಲಿ ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ, ಜಿಪಂ ಸಿಇಒ ರಘುನಂದನ ಮೂರ್ತಿ ಅವರು ಉಪಸ್ಥಿತರಿದ್ದರು.