Advertisement

ಭಾರತೀಯ ಗಗನದಲ್ಲಿ ಯುದ್ಧ ವಿಮಾನಗಳ ಸದ್ದು

08:21 AM Jul 30, 2020 | mahesh |

ಭಾರತೀಯ ವಾಯುಪಡೆಗೆ ಬುಧವಾರ 5 ಬಹೂಪಯೋಗಿ ರಫೇಲ್‌ ಯುದ್ಧವಿಮಾನಗಳು ಸೇರ್ಪಡೆಗೊಂಡಿವೆ. ಅತ್ಯಾಧುನಿಕ ಸ್ಪೆಕ್ಟ್ರಾ ರಕ್ಷಣಾ ವ್ಯವಸ್ಥೆಯನ್ನು ಹೊಂದಿರುವ ಈ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯ ಬಲವನ್ನು ಅಪಾರವಾಗಿ ವರ್ಧಿಸಲಿವೆ. ಒಂದು ದೇಶದ ರಕ್ಷಣಾ ವ್ಯವಸ್ಥೆಯನ್ನು ಸದೃಢವಾಗಿರಿಸುವಲ್ಲಿ, ಯುದ್ಧದ ದಿಶೆಯನ್ನೇ ಬದಲಿಸುವಲ್ಲಿ ಯುದ್ಧ ವಿಮಾನಗಳು ನಿರ್ಣಾಯಕ ಪಾತ್ರ ವಹಿಸುತ್ತವೆ. ರಫೇಲ್‌ ನಿಸ್ಸಂಶಯವಾಗಿಯೂ ಭಾರತದಲ್ಲಿನ ಇದುವರೆಗಿನ ಅತ್ಯಾಧುನಿಕ ಯುದ್ಧ ವಿಮಾನ ಎನ್ನುವುದು ನಿರ್ವಿವಾದವಾದರೂ, ವಾಯುಪಡೆಯ ಬತ್ತಳಿಕೆಯಲ್ಲಿನ ಇನ್ನಿತರೆ
ಯುದ್ಧ ವಿಮಾನಗಳೂ ಒಂದಲ್ಲ ಒಂದು ಸಮಯದಲ್ಲಿ, ರೀತಿಯಲ್ಲಿ ದೇಶದ ಬಲಿಷ್ಠ ಬೆನ್ನೆಲುಬಾಗಿ ನಿಂತಿವೆ. ಅಂಥ ಕೆಲವು ಯುದ್ಧ
ವಿಮಾನಗಳ ಪರಿಚಯ ಇಲ್ಲಿದೆ…

Advertisement


ವಜ್ರದಷ್ಟು ಬಲಿಷ್ಠ ಮಿರಾಜ್‌-2000

ನಿಸ್ಸಂಶಯವಾಗಿಯೂ ಮಿರಾಜ್‌-2000 ಭಾರತೀಯ ವಾಯುಪಡೆಯ ಅತ್ಯಂತ ಬಹೂಪಯೋಗಿ ಹಾಗೂ ಬಲಿಷ್ಠ ಯುದ್ಧವಿಮಾನ. ಇದು 1985ರಲ್ಲಿ ಭಾರತೀಯ ವಾಯುಪಡೆಯ ಭಾಗವಾಯಿತು. ಮಿರಾಜ್‌ ಭಾರತೀಯ ಸೇನೆಯ ಭಾಗವಾಗುತ್ತಿದ್ದಂತೆಯೇ ಅದಕ್ಕೆ “ವಜ್ರ’ ಎನ್ನುವ ಹೆಸರು ಕೊಡಲಾಯಿತು. ಮಿರಾಜ್-2000 ಅನ್ನೂ ಸಹ ಫ್ರಾನ್ಸ್ ನ ಡಸಾಲ್ಟ್ ಏವಿಯೇಷನ್‌ ಕಂಪೆನಿಯೇ ನಿರ್ಮಿಸಿದೆ.  ಸಾಮಾನ್ಯ ಭಾರತೀಯರಿಗೆ ಮಿರಾಜ್‌ನ ಶಕ್ತಿ ಪರಿಚಯವಾದದ್ದು, ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಸೇನೆಯು ಬಾಲಾಕೋಟ್‌ನ ಮೇಲೆ ನಡೆಸಿದ ದಾಳಿಯಲ್ಲಿ! ಬಲಿಷ್ಠ ಯುದ್ಧ ವಿಮಾನ ಮಿರಾಜ…-2000 ಅನ್ನು ಅಂದು ಅಂತಾರಾಷ್ಟ್ರೀಯ ಗಡಿ ದಾಟಿ ಬಾಲಾಕೋಟ್‌ ಜೈಶ್‌ ಉಗ್ರ ಕೇಂದ್ರದ ಮೇಲೆ ನಿಖರ ದಾಳಿ ಮಾಡಲು ಬಳಸಿಕೊಳ್ಳಲಾಗಿತ್ತು. ಮಿರಾಜ…-2000 ವೈಶಿಷ್ಟವೆಂದರೆ, ಇದು ರನ್‌ವೇಯಲ್ಲೇ, ಅಂದರೆ 400 ಮೀಟರ್‌ಗಿಂತಲೂ ಕಡಿಮೆ ರನ್‌ವೇಯಲ್ಲೇ ಟೇಕ್‌ ಆಫ್ ಆಗಬಲ್ಲದು. ಇದರಲ್ಲಿ ವಾಯ್ಸ… ರೆಕಗ್ನಿಶನ್‌ ತಂತ್ರಜ್ಞಾನವಿದ್ದು, ಧ್ವನಿ ಆದೇಶಗಳ ಮೂಲಕವೂ ಹಲವು ಪ್ರೋಗ್ರಾಂಗಳನ್ನು ನಿಯಂತ್ರಿಸಬಹುದು. ಗಂಟೆಗೆ 2000 ಕಿಲೋಮೀಟರ್‌ ವೇಗದಲ್ಲಿ ಹಾರಬಲ್ಲ ಈ ಯುದ್ಧ ವಿಮಾನವು 1999ರ ಕಾರ್ಗಿಲ್‌ ಯುದ್ಧ ಗೆಲ್ಲುವಲ್ಲೂ ಪ್ರಮುಖ ಪಾತ್ರ ವಹಿಸಿತ್ತು.


ಸುಖೋಯ್‌ ಎಸ್‌ಯು-30 ಎಂಕೆಐ

ಸುಖೋಯ್, ಭಾರತೀಯ ವಾಯುಪಡೆಯ ಪ್ರಮುಖ ಲೋಹದ ಹಕ್ಕಿಯಾಗಿದ್ದು, ಏರ್‌ ಟು ಏರ್‌ ಮತ್ತು ಏರ್‌ ಟು ಗ್ರೌಂಡ್‌ ಕ್ಷಮತೆಯಲ್ಲಿ ಹೆಸರು ಮಾಡಿದೆ. ಗಂಟೆಗೆ 2120 ಕಿಲೋಮೀಟರ್‌ ವೇಗದಲ್ಲಿ ಹಾರುವ ಈ ಯುದ್ಧ ವಿಮಾನವು ಒಟ್ಟು 38 ಸಾವಿರ ಕೆಜಿ ಭಾರದೊಂದಿಗೆ ಹಾರಬಲ್ಲದು. ವಿವಿಧ ರೀತಿಯ ರೇಡಾರ್‌ಗಳು, ಕ್ಷಿಪಣಿಗಳು, ಬಾಂಬುಗಳು ಮತ್ತು ರಾಕೆಟ್‌ಗಳನ್ನು ಕೂಡ ಹೊತ್ತು ಹಾರಬಲ್ಲದು ಸುಖೋಯ್ ಭಾರತವು 290 ಸಕ್ರಿಯ 30 ಎಂಕೆಐಗಳನ್ನು ಹೊಂದಿದೆ.


SEPECAT ಜಾಗ್ವಾರ್‌

ಜಾಗ್ವಾರ್‌ ಎಂಬುದು ಆಂಗ್ಲೋ-ಫ್ರೆಂಚ್‌ ಮೂಲದ ಅವಳಿ-ಎಂಜಿನ್‌ ಹೊಂದಿರುವ ವಿಮಾನ. ಇದರ ಗರಿಷ್ಠ ವೇಗ ಗಂಟೆಗೆ 1,350 ಕಿ.ಮೀ . ಕೆಲ ಸಮಯದ ಹಿಂದಷ್ಟೇ ಎಇಎಸ್‌ಎ (ಆಕ್ಟಿವ್‌ ಎಲೆಕ್ಟ್ರಾನಿಕಲಿ ಸ್ಕ್ಯಾನ್ಡ್ ಅರ್ರೆ) ರಾಡಾರ್‌ ಅಳವಡಿಸಿರುವ ಸುಧಾರಿತ ಜಾಗ್ವಾರ್‌ ಯುದ್ಧ ವಿಮಾನವನ್ನು ಸರಕಾರಿ ಒಡೆತನದ ಹಿಂದೂಸ್ತಾನ್‌ ಏರೋನಾಟಿಕಲ್ಸ್ ಲಿಮಿಟೆಡ್‌ ಪರಿಷ್ಕರಿಸಿದೆ. ಇದರೊಂದಿಗೆ ಭಾರತದ ವಾಯುಪಡೆಯ ರಕ್ಷಣಾ ಸಾಮರ್ಥ್ಯ ಮತ್ತಷ್ಟು ಬಲಗೊಂಡಂತಾಗಿದೆ. ಭಾರತದಲ್ಲಿ ಇದನ್ನು ಶಮ್‌ಶೇರ್‌ ಎನ್ನಲಾಗುತ್ತದೆ. ಜಾಗ್ವಾರ್‌ನ ಒಂದೇ ಸಮಸ್ಯೆಯೆಂದರೆ, ಹೆಚ್ಚು ಭಾರವನ್ನು ಹೊತ್ತು, ಅತಿ ಎತ್ತರಕ್ಕೆ ಹಾರಲು ಇದಕ್ಕೆ ಸಾಧ್ಯವಾಗುವುದಿಲ್ಲ.


ಎಚ್‌.ಎ.ಎಲ್‌ ತೇಜಸ್‌

ತೇಜಸ್‌. ಸಂಪೂರ್ಣ ದೇಶೀಯ ತಂತ್ರಜ್ಞಾನವನ್ನು ಬಳಸಿ ಎಚ್‌ಎಎಲ್‌ ಈ ಯುದ್ಧ ವಿಮಾನವನ್ನು ನಿರ್ಮಿಸಿದೆ. ತೇಜಸ್‌ ಲಘು ಯುದ್ಧ ವಿಮಾನ ಅನ್ಯ ಯುದ್ಧ ವಿಮಾನಗಳಷ್ಟು ಸಮರ ಸಾಮರ್ಥ್ಯದಲ್ಲಿ ಪ್ರಬಲವಾಗಿಲ್ಲವಾದರೂ, ಈಗಲೂ ಇದರ ಮೇಲೆ ಪ್ರಯೋಗಗಳು ನಡೆದಿದ್ದು ಮುಂದಿನ ವರ್ಷಗಳಲ್ಲಿ ಇದು ಬಲಿಷ್ಠವಾಗಲಿದೆ. ತೇಜಸ್‌ 50 ಸಾವಿರ ಅಡಿ ಎತ್ತರದಲ್ಲಿ ಹಾರಾಡುವ ಸಾಮರ್ಥ್ಯ ಹೊಂದಿದ್ದು. ಈ ಯುದ್ಧ ವಿಮಾನ ಖರೀದಿಗೆ ವಿಯಟ್ನಾಂ, ಮ್ಯಾನ್ಮಾರ್‌ ಸೇರಿದಂತೆ ಅನೇಕ ದೇಶಗಳೀಗ ಆಸಕ್ತಿ ತೋರಿವೆ. ಅಂದಹಾಗೆ, ಇದಕ್ಕೆ ತೇಜಸ್‌ ಎಂದು ಹೆಸರಿಟ್ಟವರು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ.

Advertisement

ಮಿಗ್‌ ಸರಣಿಯ ಯುದ್ಧ ವಿಮಾನಗಳು
1963ರಲ್ಲಿ ಭಾರತೀಯ ವಾಯುಪಡೆಗೆ ಮಿಗ್‌ ಸರಣಿಯ ಯುದ್ಧ ವಿಮಾನಗಳು ಪದಾರ್ಪಣೆ ಮಾಡಿದವು. ಸೋವಿಯತ್‌ ಒಕ್ಕೂಟದ ಮಿಕೋಯಾನ್‌ ಗೌರೆವಿಚ್‌ ಮಿಗ್‌ ವಿಮಾನಗಳ ನಿರ್ಮಾತೃ ಸಂಸ್ಥೆಯಾಗಿದೆ. ಮಿಗ್‌-21, ಮಿಗ್‌-23 ಎಂಎಫ್, ಮಿಗ್‌ 23ಬಿಎನ್‌, ಮಿಗ್‌ 25, ಮಿಗ್‌ 27 ಸರಣಿ ವಿಮಾನಗಳು ಭಾರತೀಯ ವಾಯು ಪಡೆಗೆ ಅಪಾರ ಕೊಡುಗೆ ನೀಡಿವೆ.


ಮಿಗ್‌ -21

1973-74ರಲ್ಲಿ ಭಾರತೀಯ ವಾಯುಪಡೆಗೆ ಮಿಗ್‌-21 ಯುದ್ಧ ವಿಮಾನ ಸೇರ್ಪಡೆಯಾಯಿತು. ಭಾರತೀಯ ವಾಯುಪಡೆಯಲ್ಲಿ ಬಳಸಿದ ಮೊದಲ ಸೂಪರ್ಸಾನಿಕ್‌ ಜೆಟ್‌ ಯುದ್ಧ ವಿಮಾನವಿದು. 1971ರ ಬಾಂಗ್ಲಾ ವಿಮೋಚನಾ ಯುದ್ಧ ಮತ್ತು 1999ರ ಕಾರ್ಗಿಲ್‌ ಯುದ್ಧಗಳ ಗೆಲುವಿನಲ್ಲಿ ಈ ವಿಮಾನಗಳು ಮಹತ್ವದ ಪಾತ್ರ ವಹಿಸಿವೆ. 2006ರಲ್ಲಿ ಕನಿಷ್ಠ 110 ಮಿಗ್‌-21 ಯುದ್ಧ ವಿಮಾನಗಳನ್ನು ಆಧುನೀಕರಿಸಲಾಯಿತು. ಮಿಗ್‌-21 ಬೈಸನ್‌ ಹೆಸರಿನ ಅವುಗಳು ಅಧಿಕ ಸಾಮರ್ಥ್ಯದ ರಾಡಾರ್‌, ಪರಿಷ್ಕರಿತ ಎಲೆಕ್ಟ್ರಾನಿಕ್‌ ವ್ಯವಸ್ಥೆ ಹಾಗೂ ಸಂವಹನ ವ್ಯವಸ್ಥೆಯನ್ನು ಒಳಗೊಂಡಿವೆ. ವಿಶ್ವದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿರುವ ಯುದ್ಧ ವಿಮಾನಗಳ ಪೈಕಿ ಸೋವಿಯತ್‌ ರಷ್ಯಾದ ಮಿಗ್‌-21 ವಿಮಾನ ಮುಂಚೂಣಿಯಲ್ಲಿದೆ. 1955ರಲ್ಲಿ ತಯಾರಾದ ಈ ವಿಮಾನ ಈಗಲೂ ಬೇರೆ ಬೇರೆ ರಾಷ್ಟ್ರಗಳ ವಾಯುಪಡೆಗಳಲ್ಲಿ ಸೇವೆ ಸಲ್ಲಿಸುತ್ತಿವೆ. ಆದರೆ ನಿವೃತ್ತಿಯ ಅಂಚಿನಲ್ಲಿರುವ ಈ ವಿಮಾನಗಳು ಆಗಾಗ ಅಪಘಾತಕ್ಕೆ ಈಡಾಗುತ್ತಿವೆ. ಅವಧಿ ಮುಗಿದ ಅನಂತರವೂ ಅವನ್ನು ಬಳಸುತ್ತಿರುವುದು ಇದಕ್ಕೆ ಕಾರಣ ಎನ್ನಲಾಗುತ್ತದೆ. ಪಾಕ್‌ ವಿರುದ್ಧದ ಕಾರ್ಯಾಚರಣೆಗೆ ವಿಂಗ್‌ ಕಮಾಂಡರ್‌ ಅಭಿನಂದನ್‌ ಬಳಸಿದ್ದು ಮಿಗ್‌ 21 ಬೈಸನ್‌ ಯುದ್ಧವಿಮಾನವನ್ನು.


ಮಿಗ್‌ -27

ಭಾರತೀಯ ಸೇನೆಯ ಬಲಿಷ್ಠ ಯುದ್ಧ ವಿಮಾನಗಳಲ್ಲೊಂದು ಎಂಬ ಹೆಸರು ಮಿಗ್‌-27ಗಿತ್ತು. 1999ರ ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ಈ ವಿಮಾನ ಹೀರೋ ಎನಿಸಿಕೊಂಡಿತ್ತು. ಆದರೆ ರಷ್ಯಾ ಮೂಲದ ಮಿಗ್‌-27 ವಿಮಾನ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಇತಿಹಾಸದ ಪುಟವನ್ನು ಸೇರಿತು. ಪ್ರಸ್ತುತ ಭಾರತೀಯ ವಾಯುಸೇನೆಯಲ್ಲಿ 7 ಮಿಗ್‌-27 ಯುದ್ಧ ವಿಮಾನಗಳಿದ್ದು, ಎಲ್ಲವೂ ನಿವೃತ್ತವಾಗಿವೆ. ಬಹದ್ದೂರ್‌ ಎಂದು ಕರೆಸಿಕೊಳ್ಳುತ್ತಿದ್ದ ಇವು ರಾಜಸ್ಥಾನದ ಜೋಧ್‌ಪುರದಲ್ಲಿ ಕೊನೆಯ ಹಾರಾಟ ನಡೆಸುವ ಮೂಲಕ ಇತಿಹಾಸದ ಪುಟ ಸೇರಿದವು.


ಮಿಗ್‌ -29

ಅತ್ತ ಚೀನದೊಂದಿಗೆ ಬಿಕ್ಕಟ್ಟು ಸೃಷ್ಟಿಯಾಗಿರುವ ಸಮಯದಲ್ಲಿ ರಕ್ಷಣ ಇಲಾಖೆಯು ಇತ್ತೀಚೆಗಷ್ಟೇ ರಷ್ಯಾದಿಂದ 33 ಯುದ್ಧ ವಿಮಾನಗಳ ಖರೀದಿಗೆ ಮುಂದಾದ ಸುದ್ದಿ ಹೊರಬಿತ್ತು. ಭಾರತ ಈಗ 12 ಸುಖೋಯ್‌ -30 ಎಂಕೆಐ ಮತ್ತು ಇಪ್ಪತ್ತೂಂದು ಮಿಗ್‌-29 ಯುದ್ಧ ವಿಮಾನಗಳ ಖರೀದಿಗೆ ಹಾಗೂ 59 ಮಿಗ್‌-29ಗಳ ನವೀ‌ಕರಣಕ್ಕೆ ರಷ್ಯಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರರ್ಥವಿಷ್ಟೆ, ಭಾರತಕ್ಕೆ ಮಿಗ್‌-29 ಅಮೂಲ್ಯ ಶಕ್ತಿಯನ್ನು ನೀಡುತ್ತಿದೆ. ಈಗ ಗಡಿ ಭಾಗದಲ್ಲಿ ಚೀನದ ಮೇಲೆ ಹದ್ದಿನಗಣ್ಣಿಡಲು ಈ ಯುದ್ಧ ವಿಮಾನಗಳು ಸಜ್ಜಾಗಿ ನಿಂತಿವೆ.

Advertisement

Udayavani is now on Telegram. Click here to join our channel and stay updated with the latest news.

Next