ಕಾರು ಬಾಗಿಲು ತೆಗೆದು, “ನಾನು ಹೋಗಿರ್ತೀನಿ, ನೀನು ಬಂದುಬಿಡು …’ ಅಂತ ಹೇಳಿ ಓಡಿದರು ಪ್ರಥಮ್. ಕಲಾವಿದರ ಸಂಘದ ಮೂರು ಮಹಡಿ ಹತ್ತಿ, ಏದುಸಿರು ಬಿಡುತ್ತಲೇ ವೇದಿಕೆಗೆ ಹೋದರು. ಪ್ರಥಮ್ ಮುಖ ನೋಡಿದ ಸಂಘಟಕರು, ಖುಷಿಯಾಗಿ ಅವರಿಗೇ ಮೊದಲು ಮೈಕು ನೀಡಿದರು. ಏದುಸಿರುಬಿಡುತ್ತಲೇ, “ಎಲ್ಲರಿಗೂ ಒಳ್ಳೇದಾಗ್ಲಿ. ಏನ್ ಹೆಸರಿದು? ಇಲ್ಲಿ ಕೀರ್ತಿರಾಜ್ ಕೂತಿದ್ದಾರೆ. ಅವರು ಚೆನ್ನಾಗಿ ರೇಪ್ ಮಾಡುತ್ತಿದ್ದರು. ಆಡಿಯೋ ಬಿಡುಗಡೆ ಅಂದರೆ, ಅದು ಸಂಗೀತ ನಿರ್ದೇಶಕನ ಹುಟ್ಟುಹಬ್ಬವಿದ್ದಂತೆ. ವಿನು ಮನಸ್‌ಗೆ ಒಳ್ಳೆಯದಾಗಲಿ. ನಿರ್ಮಾಪಕರು ಎರಡು ಬೆರಳುಗಳಿಗೆ ಉಂಗುರ ಹಾಕಿದ್ದಾರೆ. ಐದು ಬೆರಳುಗಳಿಗೆ ಹಾಕುವಂತಾಗಲಿ. ಧರ್ಮಂಗೆ ಒಳ್ಳೇದಾಗಲಿ. ನಿರ್ಮಾಪಕರಿಗೆ “ಬಿಂದಾಸ್ ಗೂಗ್ಲಿ 5′ ಮಾಡುವಷ್ಟು ದುಡ್ಡು ಬರಲಿ. ಅವರ ಮನೆ ಮೇಲೆ ಐಟಿ ರೇಡ್ ಆಗಲಿ. ಕನ್ನಡ ಸಿನಿಮಾ ನೋಡಿ. ಕನ್ನಡ ಮಾತಾಡಿ …’ ಸುಸ್ತಾಗಿ ಮೈಕಿಟ್ಟರು ಪ್ರಥಮ್.
“ಬಿಂದಾಸ್ ಗೂಗ್ಲಿ’ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭದಲ್ಲಿ ಅಂದು ಪ್ರಥಮ್ ಜೊತೆಗೆ ಇನ್ನೊಂದಿಷ್ಟು ಗಣ್ಯರು ಮುಖ್ಯ ಅತಿಥಿಗಳಾಗಿ ಬಂದಿದ್ದರು. ವಿಜಯ್ ರಾಘವೇಂದ್ರ, ಆಶಿಕಾ ರಂಗನಾಥ್, ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ, ಹಿರಿಯ ನಟ ರಾಮಕೃಷ್ಣ, ಕೀರ್ತಿರಾಜ್ ಮುಂತಾದವರಿದ್ದರು. ಇನ್ನು ಸಭಾಂಗಣದ ಭರ್ತಿ ಜನರಿದ್ದರು. ನಿರ್ಮಾಪಕ ವಿಜಯ್ ಅನ್ವೇಕರ್ ಬೆಳಗಾವಿಯವರಾದ್ದರಿಂದ, ಅಲ್ಲಿಂದೆಲ್ಲಾ ಜನ ಬಂದಿದ್ದರು. ಅವರೆಲ್ಲರ ಸಮ್ಮುಖದಲ್ಲಿ “ಬಿಂದಾಸ್ ಗೂಗ್ಲಿ’ ಚಿತ್ರದ ಹಾಡುಗಳು ಬಿಡುಗಡೆಯಾದವು.
ಈ ಚಿತ್ರವನ್ನು ಸಂತೋಷ್ ನಿರ್ದೇಶಿಸುತ್ತಿದ್ದಾರೆ. ಇದು ಅವರ ಎರಡನೆಯ ಚಿತ್ರ. ಇದೊಂದು ಸಂಗೀತ ಮತ್ತು ನೃತ್ಯ ಪ್ರಧಾನ ಚಿತ್ರ ಎನ್ನುತ್ತಾರೆ ಅವರು. “ನಮ್ಮ ಚಿತ್ರದಲ್ಲಿ 11 ಹಾಡುಗಳಿದೆ. ಬಹುಶಃ “ಪ್ರೇಮ ಲೋಕ’ ಬಿಟ್ಟರೆ ಇಷ್ಟೊಂದು ಸಂಖ್ಯೆಯ ಹಾಡುಗಳು ಯಾವ ಚಿತ್ರದಲ್ಲಿದೆಯೋ ಗೊತ್ತಿಲ್ಲ. 11 ಹಾಡುಗಳಿರುವ ಚಿತ್ರ ಮಾಡುವುದು ದೊಡ್ಡ ರಿಸ್ಕಾ. ಆದರೆ, ನಿರ್ಮಾಪಕರು ಬಹಳ ಪ್ರೋತ್ಸಾಹ ಕೊಟ್ಟಿದ್ದಾರೆ. ಚಿತ್ರದಲ್ಲಿ ಧರ್ಮ ಕೀರ್ತಿರಾಜ್ ಡ್ಯಾನ್ಸ್ ಕೋಚ್ ಪಾತ್ರ ಮಾಡಿದ್ದಾರೆ. ಇನ್ನು ಆಕಾಶ್, ಮಮತಾ ರಾಹುತ್, ನಿಮಿಷ, ಶಿಲ್ಪ ಮುಂತಾದವರು ನಟಿಸಿದ್ದಾರೆ. ವಿನು ಮನಸು ಒಳ್ಳೆಯ ಹಾಡುಗಳನ್ನು ಮಾಡಿಕೊಟ್ಟಿದ್ದಾರೆ. ಮ್ಯಾಥ್ಯೂ ರಾಜನ್ ಅವರ ಛಾಯಾಗ್ರಹಣ ಚೆನ್ನಾಗಿದೆ’ ಎಂದು ಹೇಳಿದರು.
ಚಿತ್ರದಲ್ಲಿ ನಿರ್ಮಾಪಕ ವಿಜಯ್ ಅನ್ವೇಕರ್ ಸಹ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಈ ಚಿತ್ರ ನೋಡಿದರೆ ಒಂದು ದಿನ ಮಾತ್ರೆ ತೆಗೆದುಕೊಳ್ಳುವುದಿಲ್ಲ ಎಂದು ಪ್ರಮಾಣ ಮಾಡುತ್ತಾರೆ ಅವರು. “ಈ ಚಿತ್ರ ಬಿಪಿ, ಶುಗರ್ ಎಲ್ಲಾ ಕಡಿಮೆ ಮಾಡುತ್ತೆ. ಚಿತ್ರದಲ್ಲಿ ಒಳ್ಳೆಯ ಹಾಡುಗಳಿವೆ. ಇದೊಂದು ಕ್ಲೀನ್ ಸಿನಿಮಾ. ಡಬ್ಬಲ್ ಮೀನಿಂಗ್ ಸಂಭಾಷಣೆ ಇಲ್ಲದ ಸಿನಿಮಾ. ಚಿತ್ರದಲ್ಲಿ ನಾನು ನಟಿಸೀನಿ. ಇಷ್ಟ ಆದರೆ, ನಿರ್ಮಾಪಕರು ನನಗೆ ಅವಕಾಧ ಕೊಡಬಹುದು. ಬ್ರೇಕ್ ಸಿಕ್ಕರೆ ಮಾತ್ರ ಮುಂದೆ ದುಡ್ಡು ತಗೋತೀನಿ. ಈ ಚಿತ್ರ ಮಾಡೋ ಮುನ್ನ, ನನಗೆ ಏನೂ ಗೊತ್ತಿರಲಿಲ್ಲ. ಇದರಿಂದ ತುಂಬಾ ತಿಳಿದುಕೊಂಡ ಹಾಗಾಯ್ತು’ ಎಂದರು.
ನಂತರ ಧರ್ಮ, ಆಕಾಶ್, ಮಮತಾ, ನಿಮಿಷ, ಶಿಲ್ಪ, ವಿನು, ಕೀರ್ತಿರಾಜ್, ರಾಮಕೃಷ್ಣ ಎಲ್ಲರೂ ಮಾತಾಡಿ, ಚಿತ್ರಕ್ಕೆ ಸಹಕಾರ, ಪ್ರೋತ್ಸಾಹಗಳನ್ನು ಕೇಳಿದರು.