ಬೆಂಗಳೂರು: ಸಿನಿಮಾ ಸಾಹಿತ್ಯವೆಂದರೆ ಕೇವಲ ಚಿತ್ರಗೀತೆ ರಚನೆಯಲ್ಲ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ಪಟ್ಟಿದ್ದಾರೆ. ಬಂಜಾರ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಸರ್ಕಾರಿ ಕಲಾ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಸಿನಿಮಾ ಸಾಹಿತ್ಯ ಮತ್ತು ವಿಮರ್ಶೆ ರಾಜ್ಯಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಸಿನಿಮಾ ಸಾಹಿತ್ಯ ಎಂದರೆ ಕೇವಲ ಚಿತ್ರಗೀತೆಗಳಲ್ಲ. ಗೀತೆ ಸಿನಿಮಾ ಸಾಹಿತ್ಯದ ಒಂದು ಭಾಗವಷ್ಟೇ. ಕಥೆ, ಚಿತ್ರಕಥೆ, ಗೀತೆ ಹಾಗೂ ಸಂಭಾಷಣೆ ಸೇರಿದರೆ ಸಿನಿಮಾ ಸಾಹಿತ್ಯವಾಗುತ್ತದೆ. ಸಿನಿಮಾಕ್ಕೆ ಸಾಹಿತ್ಯ ಆತ್ಮ ವಿದ್ದಂತೆ. ಸಾಹಿತ್ಯ ಸರಿ ಇಲ್ಲದಿದ್ದರೆ ಇಡೀ ಸಿನಿಮಾದ ಶೃಂಗಾರ ಹದಗೆಡುತ್ತದೆ ಎಂದರು.
ಸಿನಿಮಾ ಒಕ್ಕೂಟ ಕಲೆ. ಸಾಹಿತ್ಯ, ಸಂಗೀತ, ಛಾಯಾಗ್ರಾಹಣ, ಸಂಕಲನ, ಕಲಾವಿಭಾಗ ಹೀಗೆ ಬೇರೆ ಬೇರೆ ವಿಭಾಗಗಳು ಸರಿಯಾಗಿ ಸಂಯೋಜನೆಗೊಂಡಾಗ ಒಳ್ಳೆಯ ಸಿನಿಮಾ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು
ಅಭಿಪ್ರಾಯಪಟ್ಟರು.
ವ್ಯಾಪಾರಿ ಮನೋಭಾವ: ನಟ ಸುಂದರರಾಜ್ ಮಾತನಾಡಿ, ಇವತ್ತಿನ ಸಿನಿಮಾಗಳಲ್ಲಿ ಸಾಹಿತ್ಯ ಹುಡಬೇಕಾಗಿದೆ. ಗೀತೆಗಳ ಸಾಲುಗಳು ಅರ್ಥವನ್ನೇ ಕಳೆದುಕೊಂಡಿವೆ. ವ್ಯಾಪಾರಿ ಮನೋಭಾವ ಸಿನಿಮಾ ಕ್ಷೇತ್ರವನ್ನು ಆಳುತ್ತಿದೆ. ಹೀಗಾಗಿ ಬೌದ್ಧಿಕ ಜಗತ್ತಿನ ಸಿನಿಮಾ ಕಮರ್ಷಿಯಲ್ ಎಂಬುದರ ಸುತ್ತ ತಿರುಗುತ್ತಿದೆ. ತಂತ್ರಜ್ಞಾನದಿಂದ ಬಂದ ಕಲೆ (ಸಿನಿಮಾ) ಆತ್ಮ ಕಳೆದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಲಾವಿದ ಡಾ.ಎ.ಆರ್.ಗೋವಿಂದ ಸ್ವಾಮಿ, ಶಿಕ್ಷಣ ಇಲಾಖೆ ನಿರ್ದೇಶಕ ಪ್ರೊ. ಎಂ.ಕೆ.ನಾಯಕ್, ಪ್ರೊ.ಮಲ್ಲೇಶ್ವರಪ್ಪ.ಎಸ್, ಪ್ರೊ.ಕೆ.ಎಂ.ವೆಂಕಟಶಾಮರೆಡ್ಡಿ ಇತರರಿದ್ದರು.