Advertisement

ಬಸವಣ್ಣನ ವಿಚಾರ ಇಂದಿಗೂ ಪ್ರೇರಣೆ

04:02 PM Apr 20, 2018 | |

ಆಳಂದ: ಪಾಪ-ಪುಣ್ಯ, ಸ್ವರ್ಗ-ನರಕಗಳಂತಹ ಕರ್ಮ ಸಿದ್ಧಾಂತದ ವಿಚಾರಗಳನ್ನು ಬಲವಾಗಿ ಖಂಡಿಸಿದ ಬಸವಾದಿ ಶರಣರು ಮುಗ್ಧರ ಸ್ವಾತಂತ್ರ್ಯಕ್ಕೆ ಶ್ರಮಿಸಿದರು. ಬಸವಣ್ಣನವರು ಅಸ್ಪೃಶ್ಯತೆ ನಿವಾರಣೆಗಾಗಿ, ಪ್ರಜಾಪ್ರಭುತ್ವ ತತ್ವಕ್ಕಾಗಿ ಹೋರಾಡಿದ ವಿಚಾರಗಳು ಇಂದಿಗೂ ನಮಗೆ ಪ್ರೇರಣೆಯಾಗಿವೆ ಎಂದು ಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ ಡಾ| ಬಸವಲಿಂಗ ಪಟ್ಟದ್ದೇವರು ಹೇಳಿದರು.

Advertisement

ತಾಲೂಕಿನ ಕಡಗಂಚಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಆಡಳಿತ ಸೌಧದಲ್ಲಿ ನಡೆದ ಮಹಾನ್‌ ಮಾನವತಾವಾದಿ ಬಸವಣ್ಣನವರ 885ನೇ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ನಿತ್ಯ ಸತ್ಯವಾದ ಮತ್ತು ವಿಶ್ವಮಾನ್ಯವಾದ ತತ್ವಗಳನ್ನು ಬಸವಣ್ಣನವರು ಜಗತ್ತಿಗೆ ನೀಡಿದ್ದಾರೆ ಎಂದು ಹೇಳಿದರು.
 
12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಪ್ರಜಾಸತ್ತಾತ್ಮಕತೆ ಮೂರ್ತ ರೂಪದಂತಿತ್ತು. ಜಾತಿ, ಲಿಂಗ ಭೇದವಿಲ್ಲದೆ ಎಲ್ಲರ ಅಭಿವ್ಯಕ್ತಿಗೆ ಆಶ್ರಯ ಒದಗಿಸಿದ್ದ ತಾಣ ಅದಾಗಿತ್ತು ಎಂದು ಹೇಳಿದರು. ಗಾಂಧೀಜಿ 1924ರಲ್ಲಿ ಬೆಳಗಾವಿ ಅ ಧಿವೇಶನಕ್ಕೆ ಬಂದಾಗ ಬಸವಣ್ಣನವರ ಕುರಿತ ಪುಸ್ತಕ ಓದಿ ಬಸವಣ್ಣನವರು ಸಿದ್ಧ ಪುರುಷರು, ಅವರ ತತ್ವಗಳನ್ನು ನಾವು ಸರಿಯಾಗಿ ಪ್ರಸರಿಸಿದ್ದೇ ಆದಲ್ಲಿ, ಜಗತ್ತಿಗೆ ಮಾದರಿಯಾಗುತ್ತೇವೆ ಎಂದು ಅಭಿಪ್ರಾಯಪಟ್ಟಿದ್ದ ಪ್ರಸಂಗವನ್ನು ಅವರು ಸ್ಮರಿಸಿದರು.
 
ದೇಶದೆಲ್ಲೆಡೆಯಿಂದ ಕಲ್ಯಾಣಕ್ಕೆ ಬಂದ ಶರಣರು ಕನ್ನಡದಲ್ಲಿಯೇ ವಚನಗಳನ್ನು ರಚಿಸಿ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದರು ಎಂದು ಅಭಿಪ್ರಾಯಪಟ್ಟರು.

ಅತಿಥಿಗಳಾಗಿದ್ದ ವಿಶ್ವವಿದ್ಯಾಲಯದ ಸಮಕುಲಪತಿ ಪ್ರೊ| ಜಿ.ಆರ್‌. ನಾಯಕ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ನೀಡಿದಂತಹ ಮಾನವೀಯ ತತ್ವಗಳನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಾದದ್ದು ವರ್ತಮಾನದ ಅಗತ್ಯವಾಗಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ| ಎಚ್‌.ಎಂ. ಮಹೇಶ್ವರಯ್ಯ ಮಾತನಾಡಿ, ಶರಣರ ವಚನಗಳು ಜೀವ ಚೈತನ್ಯ ಕೊಡುವ ಆಕರಗಳಾಗಿವೆ. ಅಕ್ಕಮಹಾದೇವಿಯ ಜನ್ಮಸ್ಥಳವಾದ ಉಡುತಡಿಯಲ್ಲಿ ಅಂತಾರಾಷ್ಟ್ರೀಯ ಮಹಿಳಾ ಅಧ್ಯಯನ ಕೇಂದ್ರ ಸ್ಥಾಪಿಸಬೇಕಾದ ಅವಶ್ಯಕತೆ ಇದೆ. ಅದಕ್ಕಾಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದೊಂದಿಗೆ ಕಾರ್ಯನಿರ್ವಹಿಸಲು ಸಿದ್ಧವಿದೆ ಎಂದು ಅವರು ಹೇಳಿದರು. ಡಾ| ಅಜೀಮ್‌ ಪಾಶಾ, ಪ್ರಾಧ್ಯಾಪಕ ಡಾ| ರಾಜೀವ ಜೋಶಿ, ಜಿಲ್ಲಾ ಬಸವ ಸಮಿತಿ ಅಧ್ಯಕ್ಷೆ ಡಾ| ವಿಲಾಸವತಿ ಖೂಬಾ, ಎಸ್‌.ಎಸ್‌. ಪಾಟೀಲ ಕಡಗಂಚಿ, ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ ಪ್ರಾಧ್ಯಾಪಕ ವೀರಣ್ಣ ದಂಡೆ ಆತಿಥಿಗಳಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next