Advertisement

ಹಾಡು ಹಕ್ಕಿಯ ಗಾನಯಾನ

10:50 AM Oct 28, 2017 | |

ಹಿರಿಯಗಾಯಕಿ ಎಸ್‌. ಜಾನಕಿ ಅವರ ಕೊನೆ ಕಾರ್ಯಕ್ರಮ ಇವತ್ತು ಮೈಸೂರಲ್ಲಿ ನಡೆಯಲಿದೆ. ಮುಂದೆ ನಾನು ಹಾಡೋದಿಲ್ಲ ಅಂತ ಅವರು ಹೇಳಿಯಾಗಿದೆ. ಐದು ದಶಕಗಳಿಂದ ಹಾಡುತ್ತಲೇ ಗಾನಕೋಗಿಲೆಯ  ಒಡನಾಟದ ಬಗ್ಗೆ ಅವರ ಅಧ್ಯಾತ್ಮೀಯರು ಇಲ್ಲಿ ಮಾತನಾಡಿದ್ದಾರೆ. 

Advertisement

“ಯಾವುದೋ  ಜನ್ಮದ ಬಂಧ ಬಾಕಿ ಇತ್ತು ಅಂತ ಕಾಣುತ್ತೆ. ಅದು ಈ ಜನ್ಮದಲ್ಲಿ ಮುಂದುರಿಯುತ್ತಿದೆ ನೋಡು. ಆ ಜನ್ಮದ ಋಣ ಮುಗಿದಿಲ್ಲ. ಅದಕ್ಕೇ ನಮ್ಮಿಬ್ಬರ ಸಂಬಂಧದ ಕೊಂಡಿಯಾಗಿದೆ. ಇದು ಜನ್ಮ ಜನ್ಮದ ಋಣ ಹೇಮಾ…’ ಜಾನಕಿ ಅಮ್ಮಾ ಎಷ್ಟೋ ಸಲ ಹೀಗೆ ಹೇಳಿದ್ದು ಉಂಟು. ಆಕೆ ನನ್ನ ಪಾಲಿಗೆ ಅಮ್ಮನೇ. ನಾನು ಆಕೆಯ ಪಾಲಿಗೆ ಮಗಳೇ. ಇದು ಹೇಗಾಯ್ತು ಅನ್ನೋದಕ್ಕೆ ಒಂದು ಘಟನೆ ಹೇಳ್ತೀನಿ. ನನ್ನ ತಾಯಿ ನನ್ನ ಜೊತೆಯಲ್ಲೇ ಇರುತ್ತಿದ್ದರು.

ಜಾನಕಿ ಅಮ್ಮ ನಮ್ಮ ಮನೆಗೆ ಬಂದಾಗೆಲ್ಲಾ ಅವರನ್ನು ಮಾತನಾಡಿಸುತ್ತಿದ್ದರು. ನಿಧಾನಕ್ಕೆ ನನ್ನ ತಾಯಿಗೆ ಅನಾರೋಗ್ಯ ಕಾಡಲು ಶುರುವಾಯ್ತು. ದಿನೇ ದಿನೇ ಕುಗ್ಗಿ ಹೋಗುತ್ತಿದ್ದರು. ದಿನ ಎಣಿಕೆ ಶುರುವಾಗಿತ್ತು.  ಇದು ಜಾನಕಿ ಅವರಿಗೂಗೊತ್ತಾಗಿ ಒಂದು ದಿನದಿಢೀರಂತ ರಾತ್ರಿ 10.30ಕ್ಕೆ ಬಂದರು. ಅವತ್ತೇ ರಾತ್ರಿ 11.30ರ ಹೊತ್ತಿಗೆ ನನ್ನ ತಾಯಿ ಇಹಲೋಕ ತ್ಯಜಿಸಿದರು. ಆಗ ಅಮ್ಮ ಹೇಳಿದಳು- ಹೇಮ ನೋಡು ನಿನ್ನ ತಾಯಿಗೆ ಎಲ್ಲಾ ಗೊತ್ತಿತ್ತು ಅನಿಸುತ್ತೆ.

ನನ್ನ ಕರೆಸಿಕೊಂಡು, ನಿನ್ನ ಜವಾಬ್ದಾರಿಯನ್ನು ನನಗೆ ವಹಿಸಿ,  ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ.  ಇನ್ನು ಮುಂದೆ ನಾನೇ ನಿನಗೆ ತಾಯಿ’ ಅಂತ ಸಮಾಧಾನ ಮಾಡಿದರು. ಇಷ್ಟೇ ಅಲ್ಲ, ಐದಾರು ದಿನಗಳು ನನ್ನ ಜೊತೆಯಲ್ಲೇ ಇದ್ದು ಧೈರ್ಯ ತುಂಬಿದರು.  ತಾಯಿ ಕಳೆದುಕೊಂಡಾಗ ಆಗುವ ನೋವಿದೆಯಲ್ಲ ಅದು ಅನುಭವಿಸಿದವರಿಗೇ ಗೊತ್ತು. ಅಂತ ಹೊತ್ತಲ್ಲಿ ಜಾನಕಿ ಅಮ್ಮ ನನ್ನ ಬೆನ್ನಿಗೆ ನಿಂತರು. ಈಗಲೂ ಅವರು, ತಾಯಿಯಿಲ್ಲ ಅನ್ನುವ ಕೊರತೆಯನ್ನು ನೀಗಿಸುತ್ತಿದ್ದಾರೆ. 

ನನಗೆ ಅರಿಶಿಣ ಕುಂಕುಮ ಕೊಟ್ಟು ತವರಿನ ಭಾಗ್ಯವನ್ನು ಕರುಣಿಸಿದ್ದಾರೆ. ಆವತ್ತು ತಮ್ಮ ಜಿ.ವಿ. ಅತ್ರಿಯ ಜೊತೆ ಐದು ಜನರನ್ನು ಕಳೆದು ಕೊಂಡೆ. ಅಲ್ಲಿ ಕೊಚ್ಚಿ ಹೋದ ಪ್ರೀತಿ, ಸಂಬಂಧಗಳ ಅನುಬಂಧ ಜಾನಕಿಯಮ್ಮನ ರೂಪದಲ್ಲಿ ಈಗ ಸಿಗುತ್ತಿದೆ. ಒಂದು ಸತ್ಯ ಗೊತ್ತಾಗಿದೆ; ಅದೇನೆಂದರೆ, ಆ ದೇವರಿಗೆ ಎಷ್ಟೇ ಪೂಜೆ, ಪುನಸ್ಕಾರಗಳನ್ನು ಮಾಡಿದರೂ, ಆತ ನನ್ನೆದುರು ಬರುವುದಿಲ್ಲ. ಬದಲಾಗಿ ಜಾನಕಿ ಅಮ್ಮನ ರೂಪದಲ್ಲಿ ನನಗೆ ಸಾಕ್ಷಾತ್ಕರಿಸಿದ್ದಾನೆ. 

Advertisement

ಜಾನಕಿಯಮ್ಮ ಸಿಕ್ಕಿದ್ದು ಹೇಗೆ?
“ಸಂಗೀತ ಗಂಗಾ’ ಸಂಸ್ಥೆಯು ನೀಡುವ ಪ್ರಶಸ್ತಿಯನ್ನು ಅಮ್ಮನಿಗೆ ಕೊಟ್ಟೆವು. ಆ ನಂತರ ಅಮ್ಮ ಆಗಾಗ ಫೋನು ಮಾಡುತ್ತಿದ್ದರು, ನಾನೂ ಅವರಿಗೆ ಫೋನು ಮಾಡುತ್ತಿದ್ದೆ. ಹೀಗೆ ನಮ್ಮಿಬ್ಬರ ಬಾಂಧವ್ಯ ಗಟ್ಟಿಯಾಯ್ತು. ನಾನು ಹಾಡಿದಾಗ ತಪ್ಪಿದ್ದರೆ ಹಾಡನ್ನು ತಿಧ್ದೋದು ತೀಡೋದು ಮಾಡ್ತಾರೆ. ಅತ್ರಿ ಕುವೆಂಪು ಅವರ “ಹೋಗುವೆ ನಾ, ಹೋಗುವೆ ನಾ  ‘ ಗೀತೆಗೆ ಕಂಪೋಸ್‌ ಮಾಡಿದ್ದ. ಅದು ಇಷ್ಟ ಅವರಿಗೆ. ಅತ್ರಿಯೇ  ಹಾಡಿರುವ  ವಿಜಯಸಾಸನೂರು ಅವರ “ಏಕಾಂಗಿ ನಾನು’ ಹಾಡೆಂದರೆ ಪಂಚಪ್ರಾಣ.

ಎಷ್ಟೋ ಸಲ, ಹೇಮಾ, ಅದನ್ನು ಹಾಕು ಕೇಳ್ಳೋಣ ಅಂತ ಕೇಳಿ ಕಣ್ಣಲ್ಲಿ ನೀರು ಹಾಕಿಕೊಂಡದ್ದು ಉಂಟು. ಎಷ್ಟೋ ಸಲ ನಾನು ಹಾಡುವಾಗ ತಿದ್ದುಪಡಿಗಳನ್ನು ಮಾಡಿದ್ದೂ, ಚೆನ್ನಾಗಿದ್ದರೆ ಚೆನ್ನಾಗಿ ಹಾಡ್ತೀಯಾ ನೀನು ಅಂತ ಹೊಗಳಿದ್ದು ಉಂಟು.   ಜಾನಕಿ ಅಮ್ಮ ಬಹಳ ಸರಳ. ನಾನೊಬ್ಬ ದೊಡ್ಡ ಗಾಯಕಿ ಅನ್ನೋ ಹಮ್ಮುಬಿಮ್ಮು ಅವರಿಗೆ ಎಳ್ಳಷ್ಟೂ ಇಲ್ಲ. ಯಾರೇ ಹಾಡಿದರೂ ತಾಳ್ಮೆಯಿಂದ ಕೇಳ್ತಾರೆ. ಇನ್ನೊಂದು ಹಾಡು ಹಾಡಮ್ಮ,  ಕೇಳಿಸಿಕೊಳ್ತೀನಿ ಅಂತ ಕೇಳ್ಳೋದು ನೋಡಿದರೆ ಅಂಥ ಆಶ್ಚರ್ಯವಾಗುತ್ತೆ. 

ಕೈತುತ್ತು ಇಡ್ತಾರೆ 
ಎಷ್ಟೇ ಜನ ಇರಲಿ, ಎಲ್ಲೇ ಇರಲಿ. ಊಟ ಮಾಡೋಕೆ ಮೊದಲು, ನನಗೆ ತುತ್ತು ತಿನ್ನಿಸಿಯೇ ಆಕೆ ತಿನ್ನೋದು!   ಒಂದು ಸಲ ಅಥಣಿಗೆ ಹೋಗಿದ್ವಿ. ಅಮ್ಮನಿಗೆ ಮೋಟಗಿ ಮಠದಲ್ಲಿ ಸನ್ಮಾನ ಇತ್ತು. ಅಮ್ಮನಿಗೆ ಬಹಳ ಸಿಂಪಲ್‌ ಫ‌ುಡ್‌. ಮಸಾಲೆ ಇಲ್ಲದ ಆಹಾರ ಬೇಕು. ಅದಕ್ಕಾಗಿ ನಾನೇ ಅಡುಗೆ ಮನೆಯಲ್ಲಿ ಸೇರಿಕೊಂಡು ರೆಡಿ ಮಾಡಿಸುತ್ತಿದ್ದೆ. ಎಲ್ಲರೂ ಊಟಕ್ಕೆ ಕುಳಿತಿದ್ದಾರೆ. ಅಮ್ಮ ಮಾತ್ರ ಊಟ ಮಾಡುತ್ತಿಲ್ಲ. ಬದಲಾಗಿ ನನ್ನನ್ನು ಹುಡುಕುತ್ತಿದ್ದಾರೆ.

ಅಲ್ಲಿದ್ದವರಿಗೆ ” ಜಾನಕಿ ಅವರು ಏಕೆ ಹೀಗೆ ಚಡಪಡಿಸುತ್ತಿದ್ದಾರೆ’ ಅಂತ ತಿಳಿಯಲಿಲ್ಲ. ಅಮೇಲೆ ಯಾರೋ ಒಬ್ಬರು ಬಂದು “ನಿಮ್ಮನ್ನು ಕರೀತಾ ಇದ್ದಾರೆ ನೋಡಿ ‘ ಅಂದರು. ಹೋದರೆ ಅನ್ನವನ್ನು ಕಲೆಸಿ ತುತ್ತನ್ನು ತಿನ್ನಿಸಿ ಆಮೇಲೆ ಊಟ ಶುರುಮಾಡಿದರು. ಅಲ್ಲಿದ್ದವರಿಗೆಲ್ಲಾ ಆಶ್ಚರ್ಯ. ಈಗಲೂ ಮನೆಗೆ ಬಂದರೆ, ಅವರ ಜೊತೆ ಎಲ್ಲೇ ಇದ್ದರೂ ಹೀಗೆ ಮಾಡ್ತಾರೆ.  ಅಮ್ಮ ಹೀಗೆ ಪುಟ್ಟ ಮಗುವಿನ ರೀತಿ. ಅವರಿಗೆ ನಾನು ಮಾಡೋ ತಿಳಿ ಸಾರು ಬಹಳ ಇಷ್ಟ.

ಹೀರೆಕಾಯಿ ತೊವ್ವೆ ಅಂದರೆ ಪ್ರೀತಿ. ದೋಸೆ ಮಾಡಿದಾಗಲಂತೂ  ಮನೇಲಿ ಎಲ್ಲರಿಗೂ ಮಾಡಿಕೊಡ್ತೀಯಾ, ನಾನು ನಿನಗೆ ಮಾಡಿಕೊಡ್ತೀನಿ ಅಂತ ನನಗೆ ದೋಸೆ ಹೊಯ್ದು ಕೊಡ್ತಾರೆ. ಅವರ ಮನೆಗೆ ಹೋದರೆ ಸಾಕು, ನಿಮ್ಮ ಮನೆಗೆ ಬಂದಾಗ ನೀನು ಅಡುಗೆ ಮಾಡ್ತೀಯ. ನಮ್ಮ ಮನೆಗೆ ಬಂದಾಗ ನಾನೇ ಮಾಡ್ತೀನಿ ಅಂತ ಅಡುಗೆ ಮಾಡಿ ಬಡಿಸುತ್ತಾರೆ. ಅವರು ಚಟ್ನಿ, ಪಲ್ಯಗಳನ್ನು ಚನ್ನಾಗಿ ಮಾಡ್ತಾರೆ.  ಮಾವಿನಕಾಯಿ ತೊವ್ವೆ ಮಾಡ್ತಾರೆ. ಅದನ್ನು ನೆನಪಿಸಿಕೊಂಡರೆ ಬಾಯಲ್ಲಿ ನೀರು ಬರುತ್ತೆ.  

ಏನೇ ಬೇಜಾರು, ನೋವು ಆದಾಗ ತಕ್ಷಣ ಅಮ್ಮನಿಗೆ ಫೋನು ಮಾಡ್ತೇನೆ.  “ಅಲ್ಲ ಕಣೇ, ಜೀವನದಲ್ಲಿ ಎಲ್ಲವನ್ನೂ  ಎದುರಿಸಿರೋ ಗಟ್ಟಿಗಿತ್ತಿ ನೀನು. ಏನು ಆಗೋಲ್ಲ. ಎಲ್ಲಿ ಸರಿಹೋಗುತ್ತೆ’ ಅಂತ ಥೇಟ್‌ ನಮ್ಮಮ್ಮನ ರೀತಿ ಸಾಂತ್ವನ ಮಾಡ್ತಾರೆ. ಹೀಗೆ ಜಾನಕಮ್ಮ ನನ್ನ ಪಾಲಿನ ದೈವವೂ ಹೌದು, ದೇವರ ಕಳುಹಿಸಿದ ತಾಯಿಯೂ ಹೌದು. ಇದಕ್ಕಿಂತ ಭಾಗ್ಯ ಇನ್ನೇನು ಬೇಕು ಹೇಳಿ?

* ಹೇಮಾ ಪ್ರಸಾದ್‌, ಗಾಯಕಿ, ಜಿ.ವಿ ಅತ್ರಿಯವರ ಅಕ್ಕ

Advertisement

Udayavani is now on Telegram. Click here to join our channel and stay updated with the latest news.

Next