Advertisement

ಆಸ್ತಿಗಾಗಿ ತಂದೆಯ ಎರಡೂ ಕಣ್ಣುಗಳನ್ನು ತೆಗೆದ ಪುತ್ರ

12:33 PM Aug 29, 2018 | |

ಬೆಂಗಳೂರು: ಆಸ್ತಿ ಸರಿಯಾಗಿ ಹಂಚಿಕೆ ಮಾಡಿಲ್ಲ ಎಂಬ ಕಾರಣಕ್ಕೆ ಪುತ್ರನೊಬ್ಬ ತಂದೆಯ ಎರಡು ಕಣ್ಣುಗಳನ್ನು ಕಿತ್ತುಹಾಕಿರುವ ಅಮಾನವೀಯ ಘಟನೆ ಜೆ.ಪಿ.ನಗರದ ಶಾಕಾಂಬರಿನಗರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

Advertisement

ಮಗನ ಕುಕೃತ್ಯದಿಂದ ಸರ್ಕಾರಿ ನಿವೃತ್ತ ನೌಕರ ಪರಮೇಶ್‌ (65) ತಮ್ಮ ಎರಡು ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಈ ಸಂಬಂಧ ಇವರ ಮೂರನೇ ಮಗ ಅಭಿಷೇಕ್‌ ಚೇತನ್‌(32)ನನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ. 

ಆರೋಪಿಗೆ ಈ ಮೊದಲೇ ಆಸ್ತಿ ಹಂಚಿಕೆ ಮಾಡಲಾಗಿತ್ತು. ಆದರೂ ಇನ್ನಷ್ಟು ಆಸ್ತಿ ಕೊಡುವಂತೆ ತಂದೆ ಬಳಿ ಪದೇ ಪದೇ ತಗಾದೆ  ತೆಗೆಯುತ್ತಿದ್ದ.  ಇದೇ ವಿಚಾರದಲ್ಲಿ ಜಗಳ ಉಂಟಾಗಿ ತಂದೆಯ ಕಣ್ಣು ಕೀಳುವ ಹೀನ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದರು.

ರಾಜ್ಯ ಸರ್ಕಾರದ ಭಾಷಾಂತರ ಇಲಾಖೆಯ ನಿವೃತ್ತ ನೌಕರ ಪರಮೇಶ್‌ ದಂಪತಿಗೆ ಒಂದು ಹೆಣ್ಣು, ಎರಡು ಗಂಡು ಮಕ್ಕಳಿದ್ದು, ಶಾಕಾಂಬರಿನಗರದಲ್ಲಿ ವಾಸವಾಗಿದ್ದಾರೆ. ಮೊದಲ ಮಗಳಿಗೆ ಈಗಾಗಲೇ ಮದುವೆಯಾಗಿದ್ದು, ದಂಪತಿ ನಗರದಲ್ಲೇ ವಾಸವಾಗಿದ್ದಾರೆ.

ಎರಡನೇ ಪುತ್ರ ಪ್ರೇಮ ವಿವಾಹವಾಗಿದ್ದು, ಪತ್ನಿಯೊಂದಿಗೆ ಬೇರೆಡೆ ನೆಲೆಸಿದ್ದಾರೆ. ಮೂರನೇ ಮಗ ಆರೋಪಿ ಅಭಿಷೇಕ್‌ ಪೋಷಕರ ಜತೆ ಆಸ್ತಿ ವಿಚಾರವಾಗಿ ಜಗಳ ಮಾಡಿಕೊಂಡು ತಂದೆಯ ಸ್ವಂತ ಕಟ್ಟಡದಲ್ಲೇ ನೆಲಮಹಡಿಯಲ್ಲಿ ಬಾಡಿಗೆಗೆ ವಾಸವಿದ್ದು, ಅಗರಬತ್ತಿ ಸಗಟು ವ್ಯಾಪಾರ ನಡೆಸುತ್ತಿದ್ದ. ಪರಮೇಶ್‌ ತಮ್ಮ ಆಸ್ತಿಯನ್ನು ಮಕ್ಕಳಿಗೆ ಸಮಾನವಾಗಿ ಹಂಚಿದ್ದರು.

Advertisement

ತಿಂಗಳ ಕಾರ್ಯ ಮುನ್ನ ದಿನ ಗಲಾಟೆ: ಪರಮೇಶ್‌ ಪತ್ನಿಯ ತಿಂಗಳ ತಿಥಿ ಕಾರ್ಯ ಬುಧವಾರ (ಆ.29ರಂದು) ಏರ್ಪಡಿಸಲಾಗಿತ್ತು. ಹೀಗಾಗಿ ಪುತ್ರಿಯ ಮಗಳನ್ನು ಇಲ್ಲಿಯೇ ಬಿಟ್ಟು ಹೋಗಿದ್ದರು. ಮಂಗಳವಾರ ಬೆಳಗ್ಗೆ ಪರಮೇಶ್‌ ವಾಸವಾಗಿರುವ ಮೊದಲ ಮಹಡಿಯ ಮನೆಗೆ ಹೋದ ಆರೋಪಿ ಕಾರ್ಯಕ್ಕೆ ಏನೇಲ್ಲ ಅಡುಗೆ ಮಾಡಿಸಲು ತೀರ್ಮಾನಿಸಿದ್ದೀರಿ ಎಂದಿದ್ದಾನೆ.

ಇದಕ್ಕೆ ಅಸಮಾಧಾನದಿಂದಲೇ ಉತ್ತರಿಸಿದ ಪರಮೇಶ್‌, ಅವೆಲ್ಲ ನಿನಗೆ ಯಾಕಪ್ಪ. ಮನೆ ಬೇಕೆಂದು ನೋಟಿಸ್‌ ಕೊಟ್ಟಿರುವೆ. ನಮ್ಮ ಮನೆ ವಿಚಾರ ನಿನಗೆ ಯಾಕೆ ಬೇಕೆಂದು ಪ್ರಶ್ನಿಸಿದ್ದು, ತಂದೆ ಮಗನ ನಡುವೆ ಏರುಧ್ವನಿಯಲ್ಲಿ ವಾಗ್ವಾದ ನಡೆದಿದೆ.

ಬೆರಳುಗಳಿಂದ ಕಣ್ಣು ತೆಗೆದ ಕಿರಾತಕ: ಗಲಾಟೆಯಿಂದ ಅಳಲು ಪ್ರಾರಂಭಿಸಿದ ಮೊಮ್ಮಗಳನ್ನು ಸಮಾಧಾನ ಪಡಿಸಲು ಪರಮೇಶ್‌ ಕೊಠಡಿಗೆ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಆರೋಪಿ ಪರಮೇಶ್‌ ಬೆನ್ನಿಗೆ ಬಲವಾಗಿ ನಾಲ್ಕೈದು ಬಾರಿ ಹೊಡೆದಿದ್ದಾನೆ.

ಅಲ್ಲದೆ, ತನ್ನ ಬೆರಳುಗಳಿಂದ ಪರಮೇಶ್‌ರ ಎರಡು ಕಣ್ಣುಗಳ ಗುಡ್ಡೆಗಳನ್ನು ಒಮ್ಮೆಲೆ ಕಿತ್ತು ಹಾಕಿದ್ದು, ನೆಲದ ಮೇಲೆ ಕಣ್ಣಿನ ಗುಡ್ಡೆಗಳು ಬಿದ್ದಿದ್ದವು. ಪರಿಣಾಮ ಪರಮೇಶ್‌ ಕಣ್ಣುಗಳಲ್ಲಿ ತೀವ್ರರಕ್ತಸ್ರಾವವಾಗಿ ರಕ್ಷಣೆಗೆ ಜೋರಾಗಿ ಕೂಗಿಕೊಂಡಿದ್ದಾರೆ. ಮನೆ ಬಳಿ ಜನ ಜಮಾವಣೆಗೊಂಡಿದ್ದು, ಆತಂಕಗೊಂಡ ಆರೋಪಿ ಪರಾರಿಯಾಗಿದ್ದಾನೆ. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿಯನ್ನು ಬಂದಿಸಿದ್ದಾರೆ.

ಪರಮೇಶ್‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎರಡು ಕಣ್ಣುಗಳು ಸಂಪೂರ್ಣ ಹಾನಿಗೊಳಗಾಗಿವೆ ಎಂದು ವೈದ್ಯರು ಹೇಳಿರುವುದಾಗಿ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಭಿಷೇಕ್‌ ವಿರುದ್ಧ ದೂರು ದಾಖಲಾಗಿದ್ದು, ಆರೋಪಿ ಮಾದಕ ವ್ಯಸನಿ ಎಂದು ಹೇಳಲಾಗಿದೆ.

ಅಣ್ಣನಿಗೆ ಯಾಕೆ ಆಸ್ತಿ?: ಈ ಮಧ್ಯೆ ತಿಂಗಳ ಹಿಂದೆ ಪರಮೇಶ್‌ರ ಪತ್ನಿ ನಿಧನರಾಗಿದ್ದು , ಎರಡನೇ ಪುತ್ರ ತಾಯಿಯ ಅಂತ್ಯಸಂಸ್ಕಾರ ನೆರವೇರಿಸಿದ್ದ. ನಂತರ ಪರಮೇಶ್‌ ಅವರು ಎರಡನೇ ಪುತ್ರನಿಗೆ ಇನ್ಮುಂದೆ ಬೇರೆಡೆ ವಾಸ ಮಾಡುವುದು ಬೇಡ. ತನ್ನೊಂದಿಗೆ ಇರುವಂತೆ ಕೇಳಿಕೊಂಡಿದ್ದರು.

ಇದಕ್ಕೆ ಪುತ್ರ ಹಾಗೂ ಸೊಸೆ ಒಪ್ಪಿದ್ದರು. ಇದರಿಂದ ಕೋಪಗೊಂಡ ಅಭಿಷೇಕ್‌ ತಂದೆ ಜತೆ ಜಗಳ ತೆಗೆದು ಮನೆ ನನ್ನ ಹೆಸರಿಗೆ ಬರೆಯಬೇಕೆಂದು ಒತ್ತಾಯಿಸಿದ್ದ. ಅಲ್ಲದೆ, ವಕೀಲರ ಮೂಲಕ ಮನೆಯನ್ನು ತನ್ನ ಹೆಸರಿಗೆ ಬರೆದುಕೊಂಡುವಂತೆ ತಂದೆಗೆ ನೋಟಿಸ್‌ ಕೊಡಿಸಿದ್ದ. ಹೀಗಾಗಿ ಪಿತಸುತರ ಬಾಂಧವ್ಯ ಹದಗಟ್ಟಿತ್ತೆಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next