Advertisement

ತಾಯಿಗಾಗಿ ದೇವಸ್ಥಾನ ಕಟ್ಟಿದ ಮಗ

01:02 PM Jan 21, 2020 | Suhan S |

ಮುದ್ದೇಬಿಹಾಳ: ಹೆತ್ತು ಹೊತ್ತು ಸಾಕಿ ಸಲುಹಿದ ತಾಯಿಯನ್ನೇ ಬೀದಿ ಪಾಲು ಮಾಡುವ ಮಕ್ಕಳು ಹೆಚ್ಚಾಗಿರುವ ಈ ದಿನಗಳಲ್ಲಿ ಮಗನೊಬ್ಬ ತಾಯಿ ಋಣ ತೀರಿಸಲು ಆಕೆಗಾಗಿ ದೇವಸ್ಥಾನವನ್ನು ಕಟ್ಟಿಸಿ ಅದರಲ್ಲಿ ಅವಳ ಮೂರ್ತಿ ಪ್ರತಿಷ್ಠಾಪಿಸಿ ತಾಯಿ ನೆನಪನ್ನು ಶಾಶ್ವತವಾಗಿಸಿದ ವಿಶೇಷತೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಸುಕ್ಷೇತ್ರ ತಂಗಡಗಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

Advertisement

ಶಿವಪ್ಪ ರಾಮಪ್ಪ ಚಲವಾದಿ ಎನ್ನುವ ಮಗನೇ ತನ್ನ ತಾಯಿ ದಿ| ಹನುಮವ್ವ ತಾಯಿಗೆ ದೇವಸ್ಥಾನ ಕಟ್ಟಿಸಿ ಮಾತೃ ದೇವೋಭವ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ. ದೇವಸ್ಥಾನವನ್ನು ಆಕರ್ಷಕವಾಗಿ ಕುಸುರಿ ಕಲ್ಲಿನಿಂದ ಕಟ್ಟಲಾಗಿದ್ದು ಒಳಗೆ ಕಪ್ಪು ಶಿಲೆಯಲ್ಲಿ ನಿರ್ಮಿತ ಹನುಮವ್ವ ತಾಯಿಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಈ ಮೂರ್ತಿಯನ್ನು ಬಾಗಲಕೋಟೆಯ ಶಿಲ್ಪಿ ಮಾನಪ್ಪ ಬಡಿಗೇರ ನಿರ್ಮಿಸಿದ್ದಾರೆ.

ತಂಗಡಗಿ ಸುಕ್ಷೇತ್ರ: ತಂಗಡಗಿಯಲ್ಲಿ ಬಸವಣ್ಣನ ಪತ್ನಿ ನೀಲಾಂಬಿಕೆ, ಬಸವಣ್ಣನ ಆಪ್ತ ಸಹಾಯಕ ಹಡಪದ ಅಪ್ಪಣ್ಣ ಐಕ್ಯಗೊಂಡ ಹಿನ್ನೆಲೆ ಇರ್ವರಿಗೂ ಇಲ್ಲಿ ದೇವಸ್ಥಾನ ಕಟ್ಟಲಾಗಿದೆ. ಇದಲ್ಲದೆ ಪಕ್ಕದಲ್ಲೆ ಅಮರಗೋಳ ಗ್ರಾಮ ಇದ್ದು ಇಲ್ಲಿ ಬಸವಣ್ಣನ ಅನುಯಾಯಿಗಳಾಗಿರುವ 770 ಅಮರಗಣಂಗಳು ಐಕ್ಯರಾಗಿದ್ದಾರೆ ಎನ್ನುವ ಪ್ರತೀತಿ ಇದೆ. ಇಂಥ ಪುಣ್ಯಕ್ಷೇತ್ರದಲ್ಲಿ ಮಗನೊಬ್ಬ ತಾಯಿಗೆ ದೇವಸ್ಥಾನ ನಿರ್ಮಿಸಿರುವುದು ಆ ನೆಲದ ಇತಿಹಾಸಕ್ಕೆ ಕಿರೀಟ ಇಟ್ಟಂತಾಗಿದೆ ಎನ್ನುವ ಮಾತು ಪ್ರಜ್ಞಾವಂತರಿಂದ ಕೇಳಿಬರುತ್ತಿದೆ.

ತಾಯಿಗೇಕೆ ದೇವಸ್ಥಾನ?: 1980ರಲ್ಲಿ ಶಿವಪ್ಪರ ತಂದೆ ರಾಮಪ್ಪ ತೀರಿಕೊಂಡಾಗ 5 ಗಂಡು, 3 ಹೆಣ್ಣು ಸೇರಿ 8 ಮಕ್ಕಳ ಸಂಸಾರದ ನೊಗ ಎಳೆಯುವ ಜವಾಬ್ದಾರಿ ಶಿವಪ್ಪರ ತಾಯಿ ಹನುಮವ್ವಳ ಮೇಲೆ ಬಿತ್ತು. ಆಕೆ ಎದೆಗುಂದದೆ ಕೂಲಿ ಮಾಡಿ ಕಡು ಸಂಕಷ್ಟದಲ್ಲೂ ಮಕ್ಕಳನ್ನು ಸಾಕಿ ಸಲುಹಿದ್ದಳು. ಈ ಮಧ್ಯೆ 3 ಗಂಡು ಮಕ್ಕಳು ತೀರಿ ಹೋದರು. ಕಿರಿಯ ಮಗ ಶಿವಪ್ಪ ಕಿತ್ತು ತಿನ್ನುವ ಬಡತನದಲ್ಲೂ ವಿದ್ಯಾಭ್ಯಾಸ ಕಲಿತು ಎಂಜಿನಿಯರಿಂಗ್‌ ಡಿಪ್ಲೋಮಾ ಓದಿ 1994ರಲ್ಲಿ ಯಾದಗಿರಿ ಜಿಲ್ಲೆ ಭೀಮರಾಯನಗುಡಿಯಲ್ಲಿರುವ ಯುಕೆಪಿಯಲ್ಲಿ ಕಿರಿಯ ಎಂಜಿನಿಯರ್‌ ಆಗಿ ಕೆಲಸಕ್ಕೆ ಸೇರಿಕೊಂಡರು. 7-1-2015ರಂದು ತನ್ನ 101ನೇ ವಯಸ್ಸಿನಲ್ಲಿ ಹನುಮವ್ವ ತೀರಿ ಹೋದಳು. ಅಂದಿನಿಂದಲೇ ತಾಯಿಗೆ ದೇವಸ್ಥಾನ ಕಟ್ಟುವ ಸಂಕಲ್ಪ ಮಾಡಿದ ಶಿವಪ್ಪ ಸಂಬಳದಲ್ಲಿ ಇಂತಿಷ್ಟು ಎಂದು ಹಣ ಎತ್ತಿಟ್ಟು ಇದೀಗ ಅಂದಾಜು 10 ಲಕ್ಷ ರೂ. ವೆಚ್ಚದಲ್ಲಿ ತಾಯಿಗೆ ದೇವಸ್ಥಾನ ನಿರ್ಮಿಸಿ ಸಮಾಜ ಮೆಚ್ಚುವ ಮಾದರಿ ಕೆಲಸ ಮಾಡಿ ಭೇಷ್‌ ಎನ್ನಿಸಿಕೊಂಡಿದ್ದಾರೆ.

ಉದ್ಘಾಟನೆ-ತುಲಾಭಾರ: ಜ. 7ರಂದು ದೇವಸ್ಥಾನ ಉದ್ಘಾಟನೆ ನಡೆಯಿತು. ಈ ವೇಳೆ ಅಂಕಲಿಮಠದ ಬ್ರಹ್ಮಶ್ರೀ ವೀರಭದ್ರ ಮಹಾಸ್ವಾಮಿಗಳಿಗೆ, ಮಾತೋಶ್ರೀ ಪುಷ್ಪಲತಾ ಅಮ್ಮನವರಿಗೆ ನಾಣ್ಯದ ತುಲಾಭಾರ ನಡೆಸಿಕೊಡಲಾಯಿತು. ನಾಡಿನ ವಿವಿಧ ಶರಣರು ಪಾಲ್ಗೊಂಡಿದ್ದರು. ನಿವೃತ್ತ ದೈಹಿಕ ಶಿಕ್ಷಣಾ ಧಿಕಾರಿ ಎಸ್‌.ಬಿ. ಚಲವಾದಿ ಅವರು ಶಿವಪ್ಪರ ತಾಯಿ ಪ್ರೇಮದ ಕುರಿತು ಮಾತನಾಡಿದರು. ತುರುವಿಹಾಳ ಪುರವರ ಹಿರೇಮಠದ ಅಮರಗುಂಡ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಡಿ. ಗಾಂಜಿ, ದೈಹಿಕ ಶಿಕ್ಷಣ ಪರಿವೀಕ್ಷಕ ಎಚ್‌.ಎಲ್‌. ಕರಡ್ಡಿ, ಬಿಆರ್‌ಸಿ ಟಿ.ಡಿ. ಲಮಾಣಿ, ಸ್ಥಳೀಯರಾದ ಚನಬಸು ಕರಿಭಂಟನಾಳ, ರಮೇಶ ಲಿಂಗದಳ್ಳಿ, ಬಸವರಾಜ ರೂಢಗಿ, ಮಧುಸ್ವಾಮಿ, ಭೀಮಶಿ ಶಾಂತಪ್ಪನವರ, ಸಂಗಣ್ಣ ದೇವರಮನಿ, ವಿಜಯ ಚಲವಾದಿ, ಶಿವಪ್ಪರ ಸಹೋದರ ಬಸಪ್ಪ, ಶಿವಪ್ಪರ ಪತ್ನಿ ಶಕುಂತಲಾ ಸೇರಿದಂತೆ ಹಲವರು ಪಾಲ್ಗೊಂಡು ಶುಭ ಕೋರಿದರು.

Advertisement

ಏಳು ಜನ್ಮ ಎತ್ತಿದರೂ ತಾಯಿ ಋಣ ತೀರಿಸುವುದು ಸಾಧ್ಯವಿಲ್ಲ. ತಾಯಿ ನನಗೆ ದೇವರ ಸಮಾನ. ಹೀಗಾಗಿ ಆಕೆ ನೆನಪು ಶಾಶ್ವತವಾಗಿಸಲು ನಾನು ದುಡಿದು ಸಂಪಾದಿಸಿದ ಅರ್ಧ ಎಕರೆ ಜಮೀನಿನಲ್ಲಿ ಆಕೆಗಾಗಿ ದೇವಸ್ಥಾನ ಕಟ್ಟಿಸಿದ್ದೇನೆ. ನಾನು ಸಮಾಜಕ್ಕೆ ಕೊಡುವ ಸಂದೇಶ ಇಷ್ಟೇ. ತಾಯಿಯನ್ನು ಗೌರವಿಸಿ, ಆಕೆಯನ್ನು ನೆಮ್ಮದಿಯಿಂದ ಕಾಪಾಡಿ, ಆಕೆ ಋಣ ತೀರಿಸಲು ಪ್ರಯತ್ನಿಸಿ. -ಶಿವಪ್ಪ ರಾಮಣ್ಣ ಚಲವಾದಿ, ಜೆಇ, ಯುಕೆಪಿ, ಭೀಮರಾಯನಗುಡಿ

 

-ಡಿ.ಬಿ. ವಡವಡಗಿ

Advertisement

Udayavani is now on Telegram. Click here to join our channel and stay updated with the latest news.

Next