Advertisement

ಮಗ ಮೃತಪಟ್ಟರೂ ಮತ್ತೂಬ್ಬರ ಬಾಳಿಗೆ ಬೆಳಕಾದ!

05:02 PM Jan 29, 2018 | |

ರಾಯಚೂರು: ಮನೆಗೆ ಆಸರೆಯಾಗಬೇಕಿದ್ದ ಮಗ ದುರಂತದಲ್ಲಿ ಸಾವಿಗೀಡಾದ ದುಃಖದಲ್ಲೂ ಕುಟುಂಬವೊಂದು
ನೇತ್ರದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದೆ. ಕುಟುಂಬ ಸದಸ್ಯರ ಈ ಸಮಯೋಚಿತ ನಿರ್ಧಾರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ. ತಾಲೂಕಿನ ಕುಕನೂರು ಗ್ರಾಮದ ಮಹೇಂದ್ರ (18) ರವಿವಾರ ಬೆಳಗ್ಗೆ ಅಪಘಾತದಲ್ಲಿ ಮೃತಪಟ್ಟಿದ್ದ.

Advertisement

ಸಮೀಪದ ಯರಮರಸ್‌ ಡಯಟ್‌ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಅಸುನೀಗಿದ್ದ. ಇಂಥ ಸಂಕಷ್ಟಮಯ ಸನ್ನಿವೇಶದಲ್ಲೂ ಹೆತ್ತವರು ಆತ್ಮಸ್ಥೈರ್ಯ ಕಳೆದುಕೊಳ್ಳದೆ, ಮಗನ ಕಣ್ಣುಗಳನ್ನು ದಾನ ಮಾಡುವ
ನಿರ್ಧಾರ ಕೈಗೊಂಡಿದ್ದಾರೆ. ಬಡತನದ ಹಿನ್ನೆಲೆಯಲ್ಲೂ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಮಹೇಂದ್ರ, ತಮ್ಮ
ಹೊಲದಲ್ಲಿ ಬೆಳೆದ ತರಕಾರಿಯನ್ನು ಬೆಳಗ್ಗೆ ಬೈಕ್‌ನಲ್ಲಿ ಮಾರುಕಟ್ಟೆಗೆ ತರುವಾಗ ದುರ್ಘ‌ಟನೆ ಸಂಭವಿಸಿದೆ.

ಡಿಕ್ಕಿ ಹೊಡೆದ ವಾಹನ ಸಮೇತ ಚಾಲಕ  ರಾರಿಯಾಗಿದ್ದಾನೆ. ಮಗನ ಸಾವಿನ ದುಃಖದ ಮಡುವಿನಲ್ಲೂ ಪಾಲಕರು ಧೃತಿಗೆಡದೆ ಇಂಥ ನಿರ್ಧಾರ ಕೈಗೊಂಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ದೇಹವನ್ನು ಶವಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಗನಂತೂ ಮನೆಗೆ ದಕ್ಕಲಿಲ್ಲ, ಕನಿಷ್ಠ ಪಕ್ಷ ಆತನ ಕಣ್ಣುಗಳಾದರೂ ಬೇರೆಯವರ ಬಾಳಿಗೆ ಬೆಳಕಾಗಲಿ ಎಂದು ಕುಟುಂಬ ಸದಸ್ಯರು ನೇತ್ರದಾನ ಮಾಡುವುದಾಗಿ ತಿಳಿಸಿದ್ದಾರೆ. ನಗರದ ರಿಮ್ಸ್‌ನ ಶವ ಪರೀಕ್ಷೆ ಕೇಂದ್ರಕ್ಕೆ ನವೋದಯ ವೈದ್ಯಕೀಯ ವಿಜ್ಞಾನ ಕೇಂದ್ರದ ವೈದ್ಯರು ಆಗಮಿಸಿ ನೇತ್ರಗಳನ್ನು ಸಂಗ್ರಹಿಸಿದ್ದಾರೆ.

ಕೆಲಸದ ಜತೆಗೆ ಓದು: ಚಿಕ್ಕ ಗ್ರಾಮವಾದ ಕುಕನೂರಿನ ಯುವಕ ಮಹೇಂದ್ರ ಕೆಲಸದ ಜತೆಗೆ ಯರಮರಸ್‌ನ ಆನಂದ
ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ. ತಂದೆ ಮಲ್ಲಿಕಾರ್ಜುನ ಗ್ರಾಮದಲ್ಲಿ ಚಿಕ್ಕ ಹೋಟೆಲ್‌ ನಡೆಸುತ್ತಿದ್ದರೆ, ತಾಯಿ ನರಸಮ್ಮ ಹೊಲ ಮನೆ ಕೆಲಸ ಮಾಡುತ್ತಿದ್ದರು. ತಾಯಿಗೆ ತರಕಾರಿ ಬೆಳೆಯಲು ನೆರವಾಗುತ್ತಿದ್ದ ಮಹೇಂದ್ರ, ಬೆಳಗಿನ ಜಾವ ಬೈಕ್‌ ನಲ್ಲಿ ಮಾರುಕಟ್ಟೆಗೆ ತರಕಾರಿ ಹಾಕಿ ಬರುತ್ತಿದ್ದ. ಆದರೆ, ಇಂದು ತರಕಾರಿ ಹಾಕಲು ತೆರಳವಾಗ ವಿಧಿ ಯಾಟಕ್ಕೆ ಬಲಿಯಾಗಿದ್ದಾನೆ.

Advertisement

ರಿಮ್ಸ್‌ ಶವ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ನವೋದಯ ವೈದ್ಯ ಸಿಬ್ಬಂದಿ, ಕುಟುಂಬ ಸದಸ್ಯರಿಂದ ನಿಯಮಾನುಸಾರ ನೇತ್ರದಾನಕ್ಕೆ ಒಪ್ಪಿಗೆ ಪಡೆದಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿದ ವೈದ್ಯ ಸಿಬ್ಬಂದಿ ಸಕಾಲಕ್ಕೆ ಮಾಹಿತಿ ನೀಡಿದ್ದರಿಂದ ನೇತ್ರಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಬೆಂಗಳೂರಿನ ನೇತ್ರ ಸಂಗ್ರಹಾಲಯಕ್ಕೆ ನೇತ್ರಗಳನ್ನು ಕಳುಹಿಸಲಾಗುವುದು ಎಂದರು. ಕಷ್ಟದಲ್ಲೂ ಇಂಥ ಔದಾರ್ಯ ಮೆರೆದ ಪಾಲಕರ ಆಕ್ರಂದನ ಮಾತ್ರ ಮುಗಿಲುಮುಟ್ಟಿತ್ತು. ಮಗನ ಸಾವಿನಲ್ಲೂ ಸಾರ್ಥಕತೆ ಕಂಡ ಕುಟುಂಬ ಸದಸ್ಯರು ಎಲ್ಲರಿಗೂ ಮಾದರಿ ಎನಿಸಿದ್ದಾರೆ.

ಮನೆಗೆ ಆಸರೆಯಾಗಬೇಕಿದ್ದ ಮಗನನ್ನು ಕಳೆದುಕೊಂಡಿದ್ದೇವೆ. ಅವನಂತೂ ಮರಳಿ ಬರುವುದಿಲ್ಲ. ಆದರೆ, ಅವನ ಕಣ್ಣುಗಳಾದರೂ ಬೇರೆಯವರ ಬಾಳಿಗೆ ಬೆಳಕು ನೀಡಲಿ ಎಂಬ ಕಾರಣಕ್ಕೆ ಇಂಥ ನಿರ್ಧಾರ ಕೈಗೊಂಡಿದ್ದೇವೆ. ನಾವೇ
ಸ್ವಇಚ್ಛೆಯಿಂದ ನೇತ್ರದಾನಕ್ಕೆ ಒಪ್ಪಿಗೆ ನೀಡಿದ್ದೇವೆ.
 ಶಿವರಾಜ್‌ ಕುಕನೂರು, ಮೃತನ ಸಹೋದರ

Advertisement

Udayavani is now on Telegram. Click here to join our channel and stay updated with the latest news.

Next