Advertisement

ದಾಖಲೆ ಇಲ್ಲದಿದ್ದರೂ ಪರಿಹಾರ

10:26 AM Oct 12, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ನೆರೆ ಹಾವಳಿಗೆ ತುತ್ತಾದ ಪ್ರತಿ ಮನೆಗೂ ಸರಕಾರ ಸೂಕ್ತ ಪರಿಹಾರ ನೀಡಲಿದೆ ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಪ್ರಕಟಿಸಿದ್ದಾರೆ.

Advertisement

ಗುರುವಾರ ಆರಂಭಗೊಂಡ ತ್ರಿದಿನಗಳ ಅಧಿ ವೇಶನ ಸಂಬಂಧ ವಿಧಾನ ಪರಿಷತ್ತಿನಲ್ಲಿ ನಿಯಮ 68ರ ಅಡಿ ನೆರೆ ಹಾವಳಿ ಕುರಿತು ಕೈಗೆತ್ತಿ ಕೊಂಡ ಚರ್ಚೆಯಲ್ಲಿ ಈ ವಿಚಾರ ತಿಳಿಸಿದ ಸಚಿವರು, ನೆರೆ ಹಾವಳಿಗೆ ಹಾನಿಗೊಳಗಾದ ಮನೆ ಅಧಿಕೃತವಾಗಿರಲಿ ಅಥವಾ ಅನಧಿಕೃತವಾಗಿರಲಿ ಹಾಗೂ ಸಂಬಂಧಿಸಿದ ದಾಖಲೆಗಳಿರಲಿ, ಇಲ್ಲ ದಿರಲಿ; ಬೀದಿಗೆ ಬಂದ ಕುಟುಂಬಕ್ಕೆ ಪರಿಹಾರ ನೀಡ ಲಾಗುವುದು ಎಂದರು. ಮನೆ ಶೇ. 25ಕ್ಕಿಂತ ಹೆಚ್ಚು ಹಾನಿಗೊಳಗಾಗಿದ್ದರೆ 5 ಲಕ್ಷ ರೂ. ಮತ್ತು ನೀರು ನುಗ್ಗಿದ್ದರೆ 10 ಸಾವಿರ ರೂ. ಪರಿಹಾರ ಒದಗಿಸಲಾಗುವುದು ಎಂದರು. ಅಷ್ಟೇ ಅಲ್ಲ, ಹಿಂದೆ ಇದ್ದ ಎ, ಬಿ ಮತ್ತು ಸಿ ಎಂಬ ವಿಂಗಡಣೆ ರೂಪದ ನೆರೆ ಪರಿಹಾರ ನಿಯಮವನ್ನೂ ಪರಿಷ್ಕರಣೆ ಮಾಡಲಾಗಿದೆ ಎಂದು ತಿಳಿಸಿದರು.

ಪರಿಹಾರ ಸಾಕಾಗದು
ಚರ್ಚೆ ವೇಳೆ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್‌ ಸದಸ್ಯ ಬಸವರಾಜ ಇಟಗಿ, ನೆರೆಗೆ ತುತ್ತಾದ ಮನೆಗಳ ಸಂತ್ರಸ್ತರಿಗೆ ಪರಿಹಾರ ಕಲ್ಪಿಸಲು ಮನೆ ನೋಂದಣಿ ಕಡ್ಡಾಯವಾಗಿದೆ. ಇದರಿಂದ ಬಹುತೇಕರು ಪರಿಹಾರ ವಂಚಿತರಾಗಲಿದ್ದಾರೆ. ಅಲ್ಲದೆ ಒಂದು ಮನೆಗೆ ಒಂದೇ ಪರಿಹಾರ ನೀಡಲಾಗುತ್ತಿದೆ. ಆದರೆ ಉತ್ತರ ಕರ್ನಾಟಕದ ಬಹುತೇಕ ಕಡೆ ಒಂದು ಮನೆಯಲ್ಲಿ ಹಲವು ಕುಟುಂಬಗಳು ನೆಲೆಸಿವೆ. ಹೀಗಾಗಿ ಸರಕಾರ ನೀಡುವ ಪರಿಹಾರ ಮೊತ್ತ ಯಾವುದಕ್ಕೂ ಸಾಲದು ಎಂದು ಗಮನಸೆಳೆದರು.

ಹಿಂದಿನ ನಿಯಮ
ಶೇ. 25ರಿಂದ 75ರ ವರೆಗೆ ಮನೆ ಜಖಂ: 1 ಲಕ್ಷ ರೂ.
ಶೇ. 75ಕ್ಕಿಂತ ಹೆಚ್ಚು ಹಾನಿ: 5 ಲಕ್ಷ ರೂ.
ಶೇ. 25ಕ್ಕಿಂತ ಕಡಿಮೆ ಹಾನಿ: 25 ಸಾವಿರ ರೂ.

ಪರಿಷ್ಕೃತ ನಿಯಮ
ಶೇ. 25ಕ್ಕಿಂತ ಹೆಚ್ಚು ಮನೆ ಹಾನಿ: 5 ಲಕ್ಷ ರೂ.
ಶೇ. 25ಕ್ಕಿಂತ ಕಡಿಮೆ ಹಾನಿ: 50 ಸಾವಿರ ರೂ.

Advertisement

ಅಧಿವೇಶನ ವಿಸ್ತರಣೆಗೆ ಒಪ್ಪದ ಸರಕಾರ
ರಾಜ್ಯದ ನೆರೆ ಪರಿಸ್ಥಿತಿ ಬಗ್ಗೆ ಚರ್ಚಿಸಲು ಕನಿಷ್ಠ 10 ದಿನ ಅಧಿವೇಶನ ನಡೆಸಬೇಕು ಎಂಬ ವಿಪಕ್ಷದ ಬೇಡಿಕೆಯನ್ನು ಸರಕಾರ ತಿರಸ್ಕರಿಸಿದೆ. ಸಂತಾಪ ಸೂಚಕ ನಿರ್ಣಯದ ಬಳಿಕ ಬರ, ನೆರೆ ಪರಿಹಾರ ಮತ್ತು ಪುನರ್ವಸತಿ ಕುರಿತು ನಿಲುವಳಿ ಸೂಚನೆ ಮಂಡನೆ ನಡೆಸುವ ಬೇಡಿಕೆಯನ್ನೂ ಸ್ಪೀಕರ್‌ ತಿರಸ್ಕರಿಸಿದ್ದು, ಗದ್ದಲಕ್ಕೆ ಕಾರಣವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next