Advertisement
ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮತ್ತು ಕೃಷಿ ಸಚಿವ ಕೃಷ್ಣ ಬೈರೇಗೌಡ ಅವರು, ಗುರುವಾರ ದೆಹಲಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ಉಸ್ತುವಾರಿಯಾಗಿರುವ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಅವರನ್ನುಭೇಟಿ ಮಾಡಿ ಕೂಡಲೇ ಹಿಂಗಾರು ಬೆಳೆ ನಷ್ಟ ಪರಿಹಾರ ವಿತರಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ರಾಜನಾಥ ಸಿಂಗ್ ಅವರು ಹಿಂಗಾರು ಬೆಳೆ ನಷ್ಟಕ್ಕೆ 795 ಕೋಟಿ ರೂ. ಬಿಡುಗಡೆ ಮಾಡಲು ಒಪ್ಪಿದ್ದಾರೆ.
ಕೇಂದ್ರ ಸರ್ಕಾರದಿಂದ ಸುಮಾರು 1,200 ಕೋಟಿ ರೂ. ಪರಿಹಾರ ಸಿಗುವ ನಿರೀಕ್ಷೆಯಿತ್ತು. ಆದರೆ 795 ಕೋಟಿ ರೂ. ಮಾತ್ರ ನೀಡಲು ಒಪ್ಪಿರು ವುದರಿಂದ ನಿರಾಸೆಯಾಗಿದೆ ಎಂದರು. ಮುಂಗಾರು ಬೆಳೆನಷ್ಟಕ್ಕೆ ಪ್ರಸ್ತಾವ ಸಲ್ಲಿಸಿದಾಗಲೂ ಕೋರಿದ್ದ ಮೊತ್ತಕ್ಕಿಂತ ಕಡಿಮೆ ಪರಿಹಾರವನ್ನು ಕೇಂದ್ರ ಸರ್ಕಾರ ಮಂಜೂರು ಮಾಡಿತ್ತು. ಆ ಸಂದರ್ಭದಲ್ಲಿ ಹಿಂಗಾರು ಬೆಳೆ ನಷ್ಟಕ್ಕೆ ಹೆಚ್ಚಿನ ಪರಿಹಾರ ನೀಡುವ ಭರವಸೆ ನೀಡಿತ್ತು. ಆದರೆ ಆ ಭರವಸೆಯ ಮಾತನ್ನು ಮರೆತಂತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಹಿಂಗಾರು ಹಂಗಾಮಿನ ಬೆಳೆ ನಷ್ಟಕ್ಕೆ 795 ಕೋಟಿ ರೂ. ಪರಿಹಾರ ಮಂಜೂರು ಮಾಡಿದ್ದು,
ಅದು ಯಾವಾಗ ಬಿಡುಗಡೆಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ಕಳೆದ ಜನವರಿ 4ರಂದು ಕೇಂದ್ರ ಸರ್ಕಾರ ಮುಂಗಾರು ಹಂಗಾಮಿನ ಬೆಳೆ ನಷ್ಟ ಪರಿಹಾರ ಘೋಷಿಸಿತ್ತು. ಆದರೆ ಹಣ ಬಿಡುಗಡೆಯಾಗಿದ್ದು, ಮಾರ್ಚ್ 28ರಂದು. ಇದೀಗ ತ್ವರಿತವಾಗಿ ಹಣ ಬಿಡುಗಡೆ ಮಾಡುವಂತೆಯೂ ಮನವಿ ಮಾಡಲಾಗಿದೆ. ಹಿಂಗಾರು ಬೆಳೆ ನಷ್ಟ ಪರಿಹಾರ ನಿರೀಕ್ಷಿತ ಪ್ರಮಾಣದಲ್ಲಿ ಸಿಗದ ಕಾರಣ ರೈತರಿಗೆ ಪೂರ್ಣ ಪ್ರಮಾಣದಲ್ಲಿ ಪರಿಹಾರ ನೀಡಲು ಸಾಧ್ಯವಾಗದು ಎಂದು ಹೇಳಿದರು. ರಾಜ್ಯದಲ್ಲಿ ಭೀಕರ ಬರ ತಲೆದೋರಿದ್ದ ಹಿನ್ನೆಲೆಯಲ್ಲಿ ಹಿಂಗಾರು ಹಂಗಾಮಿನ ಬೆಳೆ ನಷ್ಟ ಸುಮಾರು 7097 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಬಳಿಕ ಎನ್ ಡಿಆರ್‌ಎಫ್ ನಿಯಮಾವಳಿಯಂತೆ 3,310 ಕೋಟಿ ರೂ. ಪರಿಹಾರಕ್ಕೆ ರಾಜ್ಯ ಸರ್ಕಾರ ತಿಂಗಳ ಹಿಂದೆ ಪ್ರಸ್ತಾವ
ಸಲ್ಲಿಸಿತ್ತು. ಆದರೆ ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಇಬ್ಬರು ಸಚಿವರು,
ಅಧಿಕಾರಿಗಳೊಂದಿಗೆ ದೆಹಲಿಗೆ ತೆರಳಿ ಗುರುವಾರ ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.
ಈ ಹಿಂದೆ ಮುಂಗಾರು ಹಂಗಾಮಿನಲ್ಲೂ 17,193 ಕೋಟಿ ರೂ. ಬೆಳೆ ನಷ್ಟ ಉಂಟಾಗಿತ್ತು. ಆದರೆ ಎನ್ ಡಿಆರ್‌ಎಫ್ ನಿಯಮಾವಳಿಯಂತೆ 7,402 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆದರೆ ಕೇಂದ್ರ ಸರ್ಕಾರವು
1782 ಕೋಟಿ ರೂ. ಪರಿಹಾರ ಮಂಜೂರು ಮಾಡಿತ್ತು.