ಎಚ್.ಡಿ.ಕೋಟೆ: ರಾಷ್ಟ್ರಕವಿ ಕುವೆಂಪು ಅವರು ತಮ್ಮ ಕಾವ್ಯಗಳ ಮೂಲಕ ಕೊಟ್ಟ ಸಂದೇಶಗಳನ್ನು ಪ್ರತಿಯೊಬ್ಬರೂ ಪಾಲಿಸಿದರೆ ದೇಶದಲ್ಲಿರುವ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಶಿಕ್ಷಣ ಸಂಯೋಜಕ ಕಿರಣ್ ತಿಳಿಸಿದರು.
ಪಟ್ಟಣದ ಮಿನಿ ವಿಧಾನಸೌದದಲ್ಲಿ ರಾಷ್ಟ್ರೀಯ ಹಬ್ಬಗಳ ಅಚರಣಾ ಸಮಿತಿ ವತಿಯಿಂದ ಶನಿವಾರ ನಡೆದ ಕುವೆಂಪು 114ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮನುಷ್ಯ ಹುಟ್ಟುವಾಗ ವಿಶ್ವಮಾನವ ನಾಗಿರುತ್ತಾನೆ. ಬಳಿಕ ಜಾತಿ, ಧರ್ಮ, ಮೌಡ್ಯ ಸಂಕೋಲೆಯಲ್ಲಿ ಸಿಲುಕುತ್ತಾನೆ.
ಇದು ವ್ಯಕ್ತಿ ಹಾಗೂ ಸಮಾಜದ ಅಭಿವೃದ್ಧಿಗೆ ಅಡ್ಡಗೋಡೆಗಳಾಗಿವೆ. ಮನುಷ್ಯನ ಜೀವನ ಹಾಳು ಮಾಡುವ ಮೌಡ್ಯಗಳಿಂದ ಪ್ರತಿಯೊಬ್ಬರೂ ಹೊರಬಂದು ವೈಜ್ಞಾನಿಕ ಚಿಂತನೆ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಆರ್.ಮಂಜುನಾಥ್ ಮಾತನಾಡಿ, ಕುವೆಂಪು ಅವರು ತಮ್ಮ ಸಾಹಿತ್ಯವನ್ನು ಆಂಗ್ಲ ಭಾಷೆಯಲ್ಲಿ ಬರೆದಿದ್ದರೆ ಟಾಲ್ಸ್ ಟಾಯ್ ಮತ್ತು ಶೇಕ್ಸ್‌ಫಿಯರ್ ಅವರಿಗೆ ಸಿಕ್ಕ ನೊಬಲ್ ಪ್ರಶಸ್ತಿ ಇವರಿಗೂ ಸಿಗುತ್ತಿತ್ತು. ಅವರ ಬರಹಗಳಲ್ಲಿ, ಸಾಹಿತ್ಯದಲ್ಲಿ ವೈಚಾರಿಕತೆ ಅಂಶ ಎದ್ದು ಕಾಣುತ್ತದೆ.
ಅವರ ತತ್ವ ಆದರ್ಶಗಳನ್ನು ಯುವಜನತೆ ಅಳವಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಎಂ.ಮಧುಕುಮಾರ್, ನಂಜಪ್ಪ, ಪ್ರೇಮ್‌ಕುಮಾರ್, ಒಕ್ಕಲಿಗರ ಸಂಘದ ಅಧ್ಯಕ್ಷ ನರಸಿಂಹೇಗೌಡ, ಮಾಜಿ ಸೆನೆಟ್ ಸದಸ್ಯ ಕೃಷ್ಣೇಗೌಡ, ನಂಜಪ್ಪ,
ಆದಿ ಕರ್ನಾಟಕ ಮಹಾಸಭಾ ಅಧ್ಯಕ್ಷ ಮುದ್ದು ಮಲ್ಲಯ್ಯ, ಕೃಷಿಕರ ಸಂಘದ ಉಪಾಧ್ಯಕ್ಷ ನಾಗರಾಜು, ಸಿಪಿಎಂ ಶಿವಣ್ಣ, ದಸಂಸ ಜಿಲ್ಲಾ ಸಂಚಾಲಕ ಇಟ್ನಾ ರಾಜಣ್ಣ, ದಸಂಸ ಸಂಚಾಲಕ ಆನಗಟ್ಟಿ ದೇವರಾಜ್, ಅಕ್ಷರದಾಸೋಹದ ಉಪ ನಿರ್ದೇಶಕ ಸಿದ್ದರಾಜು, ಸಮಾಜ ಕಲ್ಯಾಣಾಧಿಕಾರಿ ಗೋಪಾಲಕೃಷ್ಣಮೂರ್ತಿ ಇತರರು ಉಪಸ್ಥಿತರಿದ್ದರು.