Advertisement

ಮಣ್ಣು ಉಳಿಸಿ ಅಭಿಯಾನಕ್ಕೆ ಸಂಭ್ರಮದ ತೆರೆ

06:05 PM Jun 20, 2022 | Team Udayavani |

ಮೈಸೂರು: ಜಗತ್ತಿನಾದ್ಯಂತ 100 ದಿನ, ಅಂದಾಜು 27 ಸಾವಿರ ಕಿ.ಮೀ ಕ್ರಮಿಸಿದ ಈಶಾ ಫೌಂಡೇಶನ್‌ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ನೇತೃತ್ವದ “ಮಣ್ಣು ಉಳಿಸಿ’ ಅಭಿಯಾನ ಮೈಸೂರಿನಲ್ಲಿ ಭಾನುವಾರ ಸಂಪನ್ನಗೊಂಡಿತು.

Advertisement

ನಗರದ ಮಾನಸಗಂಗೋತ್ರಿಯ ಬಯಲುರಂಗಮಂದಿರದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿಯ ಸಮ್ಮುಖದಲ್ಲಿ “ಮಣ್ಣು ಉಳಿಸಿ’ ಅಭಿಯಾನ ಅದ್ಧೂರಿಯಾಗಿ ತೆರೆಕಂಡಿತು. 2022ರ ಮಾ.21ರಂದು ಸದ್ಗುರು ಜಗ್ಗಿ ವಾಸುದೇವ ಅವರು ಲಂಡನ್‌ನಲ್ಲಿ ಅಭಿಯಾನದ ಅಂಗವಾಗಿ ಬೈಕ್‌ನಲ್ಲಿ ಪ್ರವಾಸ ಆರಂಭಿಸಿದ್ದರು. 74 ರಾಷ್ಟ್ರಗಳು ಸಂಚರಿಸಿ ಮಣ್ಣು ಸಂರಕ್ಷಣೆ ಕುರಿತು ಅರಿವು ಮೂಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸದ್ಗುರು ಜಗ್ಗಿ ವಾಸುದೇವ್‌ ಅವರು, ಈ ಅಭಿಯಾನಕ್ಕೆ 74 ದೇಶಗಳ ಬೆಂಬಲ ಸಿಕ್ಕಿದೆ. ಅಷ್ಟೇ ಅಲ್ಲ, ಮಣ್ಣಿನ ಸಂರಕ್ಷಣೆ ಕುರಿತು ತಜ್ಞರು ಸಿದ್ಧರಪಡಿಸಿರುವ ವೈಜ್ಞಾನಿಕ ವರದಿಯನ್ನು ಅನುಷ್ಠಾನಗೊಳಿಸುವ ಭರವಸೆಯನ್ನು ನೀಡಿದ್ದಾರೆ. ಈ ವರದಿಯನ್ನು ಜಾರಿ ಮಾಡಲು ಗಂಭೀರ ಚಿಂತನೆ ಮಾಡಿವೆ. ಜತೆಗೆ, ಅದಕ್ಕಾಗಿ ತಜ್ಞರ ಸಮಿತಿ ರಚನೆ ಮಾಡುವುದಾಗಿ ಆಶ್ವಾಸನೆ ನೀಡಿವೆ ಎಂದು ತಿಳಿಸಿದರು.

ಮಣ್ಣು ಸಾಮಾನ್ಯ ಸಂಗತಿ. ಅದು ಜೀವನ ಪ್ರಶ್ನೆ. ಒಂದು ವರ್ಷದಲ್ಲಿ 20 ಸಾವಿರ ವಿವಿಧ ಜೀವಚರಗಳು, ಜೀವ ಪ್ರಭೇದಗಳು ನಶಿಸುತ್ತಿವೆ. ಮುಂದಿನ 20-25 ವರ್ಷದಲ್ಲಿ ಜೀವಸಂಕುಲ ನಶ್ವರವಾಗುವ ಆತಂಕ ಎದುರಾಗಿದೆ. ಅದಕ್ಕಾಗಿ ಮಣ್ಣಿನ ಸಂರಕ್ಷಣೆಗಾಗಿ ನಾವು ಅಭಿಯಾನ ನಡೆಸಬೇಕಾಯಿತು. ವಿವಿಧ ದೇಶಗಳಿಗೆ ಸಂಚರಿಸಿ ಅಲ್ಲಿಯ ಕೃಷಿ ಸಚಿವರು, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಭೇಟಿ ಮಾಡಿ ಮನವರಿಕೆ ಮಾಡಿಕೊಡಲಾಗಿದೆ. ಈ ಕುರಿತು
ಸಕಾರಾತ್ಮಕ ಸ್ಪಂದನೆಯೂ ದೊರೆತಿದೆ ಎಂದರು.

ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಭೂಮಿ, ಪ್ರಕೃತಿಯನ್ನು ದೇವರಂತೆ ಪೂಜಿಸುವ ಸಂಸ್ಕೃತಿ ಈ ಜಗತ್ತಿನಲ್ಲಿ ಇದ್ದರೆ ಅದು ಭಾರತೀಯ ಸಂಸ್ಕೃತಿ. ಒಬ್ಬ ರೈತ ಭೂಮಿಯನ್ನು ಉಳುಮೆ ಮಾಡುವ ಮೊದಲು ಭೂಮಿಗೆ ಪೂಜೆ ಮಾಡುತ್ತಾನೆ. ಬಿತ್ತನೆ ಮಾಡುವ ಮುನ್ನ, ಫ‌ಸಲು ತೆಗೆಯುವ ಮುನ್ನವೂ ಪೂಜಿಸುವುದು ನಮ್ಮ ಸಂಸ್ಕೃತಿ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

Advertisement

ಭೂಮಿ ಈಗಿರುವಷ್ಟೇ ಇರುತ್ತದೆ. ಅದನ್ನು ವಿಸ್ತರಣೆ ಮಾಡಲು ಸಾಧ್ಯವಿಲ್ಲ. ಈ ಅಂಶವನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಭೂಮಿಗೆ ಬೇಡವಾದದ್ದನ್ನು ಸೇರಿಸದೇ ಇದ್ದರೆ ಅದು ಸ್ವತ್ಛವಾಗಿರುತ್ತದೆ. ಒಂದು ಎರೆಹುಳು ಮಾಡುವ ಕೆಲಸವನ್ನು ಮನುಷ್ಯ ತನ್ನ ಇಡೀ ಜೀವನದಲ್ಲಿ ಮಾಡಲಾರ. ಹಾಗಾಗಿ ಭೂ ಸವಕಳಿ, ಭೂಮಿಗೆ ರಾಸಾಯನಿಕ ಸೇರುವುದನ್ನು ತಪ್ಪಿಸಿ ಭೂಮಿಯನ್ನು ರಕ್ಷಿಸಿ ಎಂದು ಕರೆ ನೀಡಿದರು.

ಸದ್ಗುರು ಜಗ್ಗಿ ವಾಸುದೇವ್‌ ಅವರು ಪ್ರಕೃತಿ ಮತ್ತು ಭೂಮಿಯ ಬಗ್ಗೆ ಇಟ್ಟಿರುವ ಅಪಾರ ಪ್ರೇಮವೇ ಈ ಎಲ್ಲಾ ಕಾರ್ಯಕ್ರಮಗಳಿಗೆ ಪ್ರೇರಣೆ. 64ನೇ ವಯಸ್ಸಿನಲ್ಲೂ ಮೋಟರ್‌ ಸೈಕಲ್‌ ಏರಿ 27 ರಾಷ್ಟ್ರಗಳನ್ನು ಸುತ್ತಿ ಭೂಮಿ ಉಳಿಸುವಂತೆ ಜಾಗೃತಿ ಮೂಡಿಸಿದ್ದಾರೆ. ಇದಕ್ಕೂ ಮೊದಲು ರಿವರ್‌ ಫಾರ್‌ ರ್ಯಾಲಿ, ಕಾವೇರಿ ಕಾಲಿಂಗ್‌ ಎಂಬ ರ್ಯಾಲಿ ಮಾಡಿದ್ದರು. ಈಗ ಮಣ್ಣು ಉಳಿಸಿ ಎಂದು ಜಗತ್ತಿನಾದ್ಯಂತ ಸಂಚಾರ ಮಾಡಿ ಜಾಗೃತಿ ಮೂಡಿಸಿದ್ದಾರೆ. ಮುಂದಿನ ರ್ಯಾಲಿ
ಮಾನವೀತೆಗಾಗಿ ಆದರೆ ಒಳ್ಳೆಯದು ಎಂದು ಶುಭ ಹಾರೈಸಿದರು.

ಪ್ರಕೃತಿ ಮತ್ತು ಭೂಮಿಯ ರಕ್ಷಣೆ ಸಂಬಂಧ ನೃತ್ಯ ರೂಪಕವನ್ನು ಕಲಾವಿದರು ಪ್ರದರ್ಶಿಸಿದರು. ಈ ಸಂದರ್ಭ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿ ಭೂಮಿಯನ್ನು ಉಳಿಸುವ ಬಗ್ಗೆ ಪ್ರತಿಜ್ಞೆ ಮಾಡಿದರು. ವೇದಿಕೆಯಲ್ಲಿ ಸಂಸದ ಪ್ರತಾಪ್‌ ಸಿಂಹ ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next