Advertisement

ಹೊಟ್ಟೆ ಹುಣ್ಣಾಗುವಷ್ಟು ನಗಿಸಿತ್ತು ಆ ಗೊರಕೆ

07:20 AM Oct 17, 2017 | |

ಲೋಕ ಸುತ್ತೋದ್ರಲ್ಲಿ ಹುಡುಗೀರದ್ದು ಎತ್ತಿದ ಕೈ. ಒಂದ್ಸಲ, ಹೀಗೇ ನಮ್‌ ಫ್ರೆಂಡ್ಸ್‌ ಗ್ಯಾಂಗ್‌ ಜೊತೆ ಸಿನಿಮಾಗೆ ಹೋಗಿದ್ವಿ. ಹೌದು ರೀ, ಕನ್ನಡ ಸಿನಿಮಾಗೇ ಹೋಗಿದ್ವಿ. ಯೋಗರಾಜ್‌ ಭಟ್‌, ಗಣೇಶ್‌ ಕಾಂಬಿನೇಷನ್‌ನ ಮುಗುಳುನಗೆ ಫಿಲಂ ನೋಡೋಕೆ ಸೆಕೆಂಡ್‌ ಕ್ಲಾಸ್‌ ಟಿಕೆಟ್‌ ತಗೊಂಡಿದ್ವಿ. ಸಿನಿಮಾ ಪ್ರಾರಂಭವಾಗಲು ಇನ್ನೂ ಬೇಕಾದಷ್ಟು ಟೈಮ್‌ ಇತ್ತು. ಸಿನಿಮಾನ ಹಾಗೇ ನೋಡೋಕೆ ಆಗುತ್ತಾ. ಮೊದ್ಲೆ ಹೆಣ್ಮಕ್ಳು, ಥಿಯೇಟರ್‌ ಒಳಗಡೆ ತಿಂಡಿ ತಗೊಂಡ್ರೆ ದುಡ್ಡು ಜಾಸ್ತಿ ಕೊಡಬೇಕು ಅಂತ ಹೊರಗಿನಿಂದಾನೆ ಕುರುಕಲು ತಿಂಡಿ ತಗೊಂಡು ಹೋಗಿದ್ವಿ.

Advertisement

ಸೀಟ್‌ ನಂಬರ್‌ ಪ್ರಕಾರ ಕೂತ್ಕೊಂಡು, ಹುಡುಗರ ದಂಡೇ ತಿರುಗಿ ನೋಡುವಷ್ಟು ಪೋಸ್‌ ಕೊಟ್ಟು ಸೆಲ್ಫಿ ತೆಗೆದಿದ್ದೇ ತೆಗೆದಿದ್ದು. ಸಿನಿಮಾ ಪ್ರಾರಂಭಕ್ಕೂ ಮೊದಲು ಒಂದಷ್ಟು ಆ್ಯಡ್‌ಗಳನ್ನ ಅನುಕರಣೆ ಮಾಡುತ್ತಾ, ಕ್ವಾಟ್ಲೆ ಮಾಡಿ ಗೊಳ್‌ ಅಂತ ನಗ್ತಿದ್ವಿ. ಸಿನಿಮಾ ಶುರುವಾಯ್ತು. ಸ್ವಲ್ಪ ಹೊತ್ತಿಗೆ ಎಲ್ಲೋ ಗೊರಕೆಯ ಶಬ್ದ ಕಿವಿಗೆ ಬಿತ್ತು. ಸಿನಿಮಾ ಇಂಟ್ರೆಸ್ಟಿಂಗ್‌ ಇದ್ದಿದ್ದರಿಂದ ಕಣ್ಣು, ಕಿವಿ ಎಲ್ಲಾ ಸ್ಕ್ರೀನ್‌ ಮೇಲೇ ಇತ್ತು. ಅಷ್ಟರಲ್ಲಿ ಇಂಟರ್‌ವೆಲ್‌ ಬಂತು. ತಂದಿದ್ದ ತಿಂಡಿಗಳೆಲ್ಲವನ್ನು ತಿಂದು ಮತ್ತೆ ಚಾರ್ಜ್‌ ಆದೆವು. ಕೊನೆಯ 20 ನಿಮಿಷದಲ್ಲಿ ಸಿನಿಮಾ ಗುಂಗಿನಲ್ಲಿದ್ದ ನನಗೆ ಮತ್ತೆ ಆ ಗೊರಕೆ ತೊಂದರೆ ಕೊಡತೊಡಗಿತು. ಅಂಕಲ್‌ ಒಬ್ಬರು ಹಾಯಾಗಿ ಗೊರಕೆ ಹೊಡೆಯುತ್ತಿದ್ದುದನ್ನು ನೋಡಿ ನಗು ಉಕ್ಕಿ ಬಂತು. ಎಲ್ಲರೂ ಸ್ಕ್ರೀನ್‌ ಮೇಲೆ ನಾಯಕ ಗಣೇಶ್‌ನನ್ನು ನೋಡಿ ಅಳುತ್ತಿದ್ದರೆ, ನಾನು ಮಾತ್ರ ಗೊರಕೆ ಸದ್ದು ಕೇಳಿ ಬಿದ್ದು ಬಿದ್ದು ನಗುತ್ತಿದ್ದೆ. ನನ್ನ ಗೆಳತಿ, “ನಗಬೇಡ್ವೇ, ಎಲ್ಲಾ ನಿನ್ನನ್ನೇ ನೋಡ್ತಾ ಇದ್ದಾರೆ’ ಅಂತ ತಿವಿದಳು. ಆದರೆ, ನನಗೆ ಈ ನಡುವೆ, ನಗು ತಡೆಯಲಾಗುತ್ತಿರಲಿಲ್ಲ. ಆದರೂ ಹೇಗೋ ಕಂಟ್ರೋಲ್‌ ಮಾಡಿಕೊಂಡೆ.

ಮುಂದಿನ ಸಾಲಿನಲ್ಲಿದ್ದ ಮೂವರು ಹುಡುಗರಿಗೂ ಗೊರಕೆಯ ಶಬ್ದ ಕೇಳಿಸಿತು. ಅವರಲ್ಲೊಬ್ಬ, “ಇದ್ಯಾರೋ ಗೊರೆಕೆ ಹೋಡಿತಾವ್ರೆ ಕಣ್ರೀ’ ಎಂದ. ಗೊರಕೆ ವ್ಯಕ್ತಿ ಅವರ ಬಲಭಾಗದ ಎರಡನೇ ಸೀಟಿನಲ್ಲಿ ಕುಳಿತಿದ್ದ, ಅಲ್ಲಲ್ಲ, ಮಲಗಿದ್ದ. ನಾನು ಮತ್ತು ನನ್ನ ಗೆಳತಿ ಮಾತ್ರ ಕೊನೇವರೆಗೂ ನಗು ನಿಲ್ಲಿಸಲಿಲ್ಲ. ಚಿತ್ರ ವಿಚಿತ್ರವಾಗಿ ಕೇಳಿಸುತ್ತಿದ್ದ ಆ ಗೊರಕೆ ಸದ್ದು ಕೇಳ್ಳೋಕೆ ಒಂಥರಾ ಮಜ ಕೊಟ್ಟಿತ್ತು. 

ಸಿನಿಮಾ ಮುಗಿದು ಲೈಟ್ಸ್‌ಗಳೆಲ್ಲಾ ಆನ್‌ ಆಯ್ತು. ಆದರೂ ಆ ಮನುಷ್ಯ ಗೊರಕೆ ಹೊಡೆಯುತ್ತಲೇ ಇದ್ದ. “ಮನೇಲಿ ಹೆಂಡತಿ ಕಾಟ ಅಂತ ಇಲ್ಲಿ ಬಂದು ಮಲಗಿದಾನೆ ಪಾಪ’ ಅಂತ ಯಾರೋ ಜೋಕ್‌ ಮಾಡಿದರು. ಕೊನೆಗೆ ಒಬ್ಬ ಹುಡುಗ ಅವರನ್ನು ತಿವಿದು, “ಸಾರ್‌, ಸಿನಿಮಾ ಮುಗೀತು. ಮನೆಗೆ ಹೋಗಿ ಮಲ್ಕೊಳ್ಳಿ ಸಾರ್‌’ ಅಂದಾಗ ಆ ವ್ಯಕ್ತಿ ನಾಚಿಕೆಯಿಂದ ಎದ್ದು ಕುಳಿತರು. ಸಿನಿಮಾಗೆ ಹೋಗುವಾಗ, ನನ್ನ ಫ್ರೆಂಡ್‌ ಚೈತ್ರಾ “ಮೊದಲಿಂದ ಫ‌ುಲ್‌ ಎಂಟರ್‌ಟೇನ್‌ಮೆಂಟ್‌ ಇದೆ. ಆದ್ರೆ ಕೊನೆಯಲ್ಲಿ ತುಂಬಾ ಅಳು ಬರುತ್ತೆ ಕಣೇ’ ಅಂದಿದ್ದು ನೆನಪಾಗಿ ಮತ್ತಷ್ಟು ನಕ್ಕೆವು. ಅನಾಮಿಕ ವ್ಯಕ್ತಿಯ ಲಯಭರಿತ ಗೊರಕೆ ಸದ್ದು ನನಗೆ ಅದೆಷ್ಟರ ಮಟ್ಟಿಗೆ ಕಿರಿಕಿರಿ ಉಂಟುಮಾಡಿತ್ತು ಅಂದರೆ, ಸಿನಿಮಾದ ಕೊನೆಯ 20 ನಿಮಿಷ ಏನಾಯ್ತು ಅಂತ ಗೊತ್ತೇ ಆಗಲಿಲ್ಲ. 

ಕಾವ್ಯ ನಾಯಕ್‌ ಕೆ., ಮೈಸೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next