Advertisement

ಹಾವಿನ ಹರಣ

06:00 AM May 18, 2018 | |

ಹೊಳೆಯ ಬದಿಯಲ್ಲಿ ಸೇರಿರುವ ಹೆಂಗಳೆಯರೆಲ್ಲ ಹೊಸ ಸುದ್ದಿಯೊಂದಕ್ಕೆ ಕಿವಿಯಾಗಬೇಕೆಂಬ ತಹತಹಿಕೆಯಲ್ಲಿರುವಾಗಲೇ ಕೆಂಪಿಯ ಕಣ್ಣಿಗೆ ದಡದಲ್ಲಿರುವ ಮುಡಿನ ಓಲೆಯ ನಿಬಿಡವಾದ ಹಿಂಡಿನ ಒಳಗೆ ಏನೋ ಸರಸರನೆ ಹರಿದುದು ಕಂಡಿತು. “”ಅಕಾ ಅಲ್ಕಾಣಿ, ದೊಡ್ಡದೊಂದು ಹಾವು!” ಎಂದು ಕಿರುಚಿದಳು. ಹೇಳಬೇಕಾದ ಕಥೆಯೆಲ್ಲ ಅಲ್ಲೇ ಆವಿಯಾಗಿ, ಎಲ್ಲರೂ ಕೆಂಪಿ ತೋರಿಸಿದ ಹಿಂಡಿನೆಡೆಗೆ ನೋಡತೊಡಗಿದರು. ಮಾಮೂಲಿ ಕೇರೆಯೋ, ಒಳ್ಳೆ ಹಾವೋ ಇರಬೇಕೆಂದು ದೃಷ್ಟಿ ಹಾಯಿಸಿದವರಿಗೆ ಕಂಡದ್ದು ಮಾತ್ರ ಅಡಿಕೆ ಮರದಷ್ಟು ಗಾತ್ರದ ಆರಡಿ ಉದ್ದದ ಹೆಬ್ಟಾವು! ಆ ಹಾವು ಹೊಳೆಯ ದಡದ ಹಿಂಡಿನಲ್ಲಿ ಹರಿದು ಕಣ್ಮರೆಯಾಗುವ ಮುನ್ನವೇ ಊರ ಗಂಡಸರನ್ನು ಕರೆದು, “”ಹಾವಿಗೊಂದು ಗತಿ ಕಾಣಿಸದಿದ್ದರೆ ನಮಗೆ ಉಳಿಗಾಲವಿಲ್ಲವೆಂದು” ಎಲ್ಲರೂ ಒಕ್ಕೊರಲಿನಿಂದ ತೀರ್ಮಾನಿಸಿ, ಅವಸರದಲ್ಲಿ ಕೈಗೆ ಸಿಕ್ಕಷ್ಟು ಸರಂಜಾಮುಗಳನ್ನು ಬುಟ್ಟಿಗೆ ತುಂಬಿಸಿಕೊಂಡು ಹೆದರುತ್ತಲೇ ಹೊಳೆಯ ದಂಡೆಯೇರಿದರು. ಅಷ್ಟರವರೆಗೂ ಮೌನವಾಗಿ ಅವರ ಮಾತುಗಳಿಗೆ ಕಿವಿಯಾದ ಹೊಳೆ ಮಾತ್ರ ಹೊಸದೊಂದು ಕಥೆ ಅರ್ಧದಲ್ಲೇ ಕೊನೆಯಾದ ಬೇಸರದಿಂದ ಮತ್ತೆ ಝುಳುಝುಳು ಸದ್ದಿನೊಂದಿಗೆ ಹರಿಯತೊಡಗಿತು.

Advertisement

ಬುಟ್ಟಿ ಹೊತ್ತು ನಿಂತ ಹೆಂಗಸರೆಲ್ಲ ಇದ್ದಷ್ಟು ಜೋರಾಗಿ “ಕೂ…ಹೂ…’ ಎಂದು ದನಿಯೇರಿಸಿ ಕೂಗು ಹಾಕಿದ್ದು ಅಲ್ಲೇ ದೂರದ ಗದ್ದೆಯಲ್ಲಿ ಬದುಕಟ್ಟುತ್ತಿದ್ದ ಗಂಡಸರ ಕಿವಿಗೆ ತಲುಪಿತು. ಹೆಂಗಸರೊಂದಿಗೆ ಕುಸು ಕುಸು ಮಾಡುತ್ತ ಬಂದ ಯಾವುದೋ ಮಗು ಹೊಳೆಯಲ್ಲಿ ತೇಲಿ ಹೋಗಿರಬಹುದೆಂಬ ಗಾಬರಿಯಲ್ಲವರು ಗದ್ದೆಯ ಬದುವಿನ ಮೇಲೆ ಎದ್ದೆನೊ ಬಿದ್ದೆನೋ ಎಂಬಷ್ಟು ಲಗುಬಗೆಯಿಂದ ಓಡೋಡಿ ಬಂದರು. ಹಾವಿನ ಸುದ್ದಿ ಕೇಳಿದ್ದೇ ಹೆಂಗಸರ ಮಾತನ್ನು ಪೂರ್ತಿಯಾಗಿ ನಂಬಬಾರದೆಂಬ ಅವರ ಗಂಡಸ್ತಿಕೆ ಎಚ್ಚರಗೊಂಡು ಹಾವಿನ ದಪ್ಪ, ಉದ್ದ, ಹೋದ ದಿಕ್ಕು ಇವುಗಳೆಲ್ಲದರ ಬಗ್ಗೆ ವಿವರವಾಗಿ ವಿಚಾರಿಸತೊಡಗಿದರು. “”ಕೊಂದು ತಿಂದವನ ಹತ್ತಿರ ಕಂಡದ್ದೇ ಸುಳ್ಳು ಅನ್ನೋ ಥರಾ ಕೇಳ್ತೀರಲ್ಲೋ ತಮ್ಮಗಳೀರಾ” ಅಂತ ಅಮ್ಮೆಣ್ಣು ಅಬ್ಬರಿಸದಿದ್ದರೆ ಅವರು ತಮ್ಮ ಹೆಂಗಸರ ಮಾತನ್ನು ಉಡಾಫೆ ಮಾಡಿ ಅಲ್ಲಿಂದ ಕಾಲ್ಕಿàಳುತ್ತಿದ್ದರು. ಮುಂದುವರೆದ ಅಮ್ಮೆಣ್ಣು “”ನೋಡುವ, ಗಂಡಸರೆಲ್ಲಾ ಸೇರಿ ಒಂದು ಧೈರ್ಯ ಮಾಡಿ ಕಾಂಬ. ಮಕ್ಕಳು ಮರಿಗಳು ತಿರುಗಾಡೋ ದಾರಿ. ಹಾವು ಏನು ಸಣ್ಣಸಾಮಾನ್ಯದ್ದಲ್ಲ. ಮಕ್ಕಳು ಮರೀನ ಇಡಿಯಾಗಿ ನುಂಗುವಂಥಾದ್ದು” ಎಂದು ಹಾವಿನ ಸಂಹಾರದ ಕೆಲಸವನ್ನು ಗಂಡುಕುಲಕ್ಕೆ ವಹಿಸಿಬಿಟ್ಟಳು.

ಹೆಬ್ಟಾವೆಂದರೆ ಗಂಡಸರಿಗೂ ಭಯವಿಲ್ಲವೆಂದೇನಲ್ಲ. ಆದರೆ, ಈಗವರ ಗಂಡಸ್ತಿಕೆಯ ಪ್ರಸ್ತಾಪವಾದ್ದರಿಂದ ಅದನ್ನು ತೋರಿಸದೇ ಬೇರೆ ಉಪಾಯವಿರಲಿಲ್ಲ. ಹಾಗಾಗಿ ಅಲ್ಲಿಯೇ ಕುಳಿತು ಹಾವಿನ ಸಂಹಾರಕ್ಕೊಂದು ಸ್ಕೆಚ್‌ ಹಾಕುತ್ತ, ಯಾವುದಕ್ಕೂ ಇರಲಿ ಎಂದು ಊರಿನ ಮಹಾನ್‌ ಧೈರ್ಯಸ್ಥ ರಾಮನಿಗೊಂದು ಕರೆಕಳಿಸಿದರು. ಸದಾ ಸೆರೆಯ ಅಮಲಿನಲ್ಲಿರುವುದೇ ಅವನ ಧೈರ್ಯದ ಗುಟ್ಟೆಂದು ತಿಳಿದಿತ್ತಾದರೂ, ಮುಡಿRನ ಹಿಂಡು ಸವರಿ ಹಾವಿನ ಜಾಡು ಕಂಡುಹಿಡಿಯಲು ಅಂಥದೊಂದು ಹುಂಬು ಧೈರ್ಯವುಳ್ಳ ವ್ಯಕ್ತಿಯ ಆವಶ್ಯಕತೆಯಿತ್ತು. 

ತನಗೆ ಸಿಕ್ಕಿದ ಅಚಾನಕ್‌ ಸಾಹಸ ಕಾರ್ಯಕ್ಕೆ ತೀರ ಖುಶಿಗೊಂಡ ರಾಮ ಬಂದವನೇ ಹಾವು ಸಂಹಾರದ ಉಸ್ತುವಾರಿಯನ್ನು ವಹಿಸಿಕೊಂಡೇಬಿಟ್ಟ. ಕೆಲವರನ್ನು ಹಿಂಡು ಸವರುವ ಕೆಲಸಕ್ಕೂ, ಇನ್ನೂ ಕೆಲವರನ್ನು ಹಾವು ಹೊಡೆಯಲೆಂದು ಅಡಿಕೆ ದಬ್ಬೆಯನ್ನು ತಯಾರುಮಾಡುವುದಕ್ಕೂ ನೇಮಿಸಿದನಲ್ಲದೇ ಹೆಬ್ಟಾವಾದ್ದರಿಂದ ಸರಕ್ಕನೆ ಆಕ್ರಮಣ ಮಾಡದೆಂಬ ಧೈರ್ಯವನ್ನೂ ಅವರೆಲ್ಲರಲ್ಲಿ ತುಂಬಿದ. ಯಾವುದಕ್ಕೂ ಇರಲಿ ಎಂದು ಹತ್ತಿರದ ಮನೆಯಿಂದ ಒಂದಿಷ್ಟು ಒಣಹುಲ್ಲು ಮತ್ತು ಬೆಂಕಿಪೆಟ್ಟಿಗೆಯನ್ನೂ ತರಿಸಿಟ್ಟುಕೊಂಡ. ಆಗಲೇ ಊರಿಗೆಲ್ಲ ಸುದ್ದಿ ಹರಡಿ ಸುತ್ತ ಬೆಳೆದ ಹಸಿರು ಪೈರನ್ನೂ ಲೆಕ್ಕಿಸದೇ ಜನಜಂಗುಳಿ ಸೇರಿ, ಹಸಿರೆಲ್ಲ ಕೆಂಪಾಗುತ್ತಿದ್ದರೆ,  ಬದಿಗೆ ಸರಿಯಿರೋ ಎಂದು ಬೇಡುತ್ತಿದ್ದ ಹೊಲದೊಡೆಯ ಮಂಜುವಿನ ಧ್ವನಿ ಗದ್ದಲದಲ್ಲಿ ಯಾರ ಕಿವಿಗೂ ಬೀಳದೇ ಕರಗಿಹೋಗುತ್ತಿತ್ತು. ಅಂತೂ ಇಂತೂ ಹರಸಾಹಸದ ನಂತರ ಹಾವು ಹಿಂಡಿನಿಂದ ಹೊರಬಂದು ಗದ್ದೆಯ ಮೇಲೆ ಬಿದ್ದು ಹೊರಳಾಡತೊಡಗಿತು. ಊರ ಯುವಕರಿಗೆಲ್ಲಾ ಆಗ ಹೊಸದೊಂದು ಆವೇಶ ಮೈತುಂಬಿ ಬಂದು ಮೊದಲೇ ತಯಾರಿಸಿಟ್ಟ ಅಡಿಗೆ ದಬ್ಬೆಯಿಂದ ಮನಬಂದಂತೆ ಬಾರಿಸಿದರಾದರೂ ಎಲ್ಲ ಹೊಡೆತಗಳೂ ಗೋಡೆಗೆ ಹೊಡೆದ ರಬ್ಬರ್‌ ಚೆಂಡಿನಂತೆ “ಡಬ್‌’ ಎಂದು ಶಬ್ದ ಮಾಡುತ್ತಾ ಹಿಮ್ಮರಳುತ್ತಿದ್ದವು. ಅಂಥದೊಂದು ಭೀಕರವಾದ ದೃಶ್ಯವನ್ನು ನೋಡಲಾಗದೇ ಹೆಂಗಸರೆಲ್ಲಾ ತಮ್ಮ ಮಕ್ಕಳನ್ನು ಬಾರೆವೆಂದು ಚೆಂಡಿ ಹಿಡಿದಿದ್ದರೂ ಕೇಳದೇ ಕುಂಡೆಗೆರಡು ಬಿಟ್ಟು ಎಳಕೊಂಡು ಮನೆಯತ್ತ ಹೊರಟರು.

ಇತ್ತ ಗಂಡಸರೆಲ್ಲ ಹಾವಿನ ಹರಣಗೈದು, ಅದರ ಶವಕ್ಕೆ ಬೆಂಕಿಯಿಟ್ಟು, ತಾವು ಪಟ್ಟ ಪರಿಶ್ರಮವನ್ನು ಬಗೆಬಗೆಯಾಗಿ ಬಣ್ಣಿಸುತ್ತಾ ಮನೆಸೇರಿದರು. ಮನೆಗೆ ಬರುವ ದಾರಿಯಲ್ಲೇ ವಿಜಯೋತ್ಸವದ ಅಂಗವಾಗಿ ಬುರುಡೆಗಟ್ಟಲೇ ಸರಾಯಿಯನ್ನು ಹೊಟ್ಟೆಗಿಳಿಸಿದ್ದನ್ನು ಅವರ ನಡಿಗೆಯೇ ಹೇಳುತ್ತಿತ್ತು. ಹೆಂಡತಿಯರು ನೀಡಿದ ಊಟವನ್ನು ತಿಂದ ಶಾಸ್ತ್ರ ಮಾಡಿ ಮಲಗಿದವರಿಗೆ ಆಚೆಯಧ್ದೋ ಎಂಬ ಗಾಢ ನಿದ್ರೆ. ಹೊಲದಂಚಿನಲ್ಲಿ ಕಟ್ಟಿದ್ದ ಎತ್ತನ್ನೂ ಬಿಡಿಸದೇ ಹಾಗೇ ಓಡಿಬಂದ ಗಂಡಸರ ನಿರ್ಲಕ್ಷ್ಯದ ನಡೆಗೆ ಹಿಡಿಶಾಪ ಹಾಕುತ್ತ ಹೆಂಗಸರು ಉಂಡು ಕೈತೊಳೆದವರೇ ತಮ್ಮ ತಮ್ಮ ಜಾನುವಾರುಗಳನ್ನು ಹುಡುಕಿಕೊಂಡು ಹೊಲದತ್ತ ನಡೆದರು. ಹಾವಿಗೆ ಬೆಂಕಿಯಿಟ್ಟ ಜಾಗದಲ್ಲೀಗ ಬೂದಿಯ ರಾಶಿಯೊಂದಿಗೆ ಹಾವಿನ ಬೆನ್ನೆಲುಬಿನ ಅವಶೇಷಗಳು ಮಾತ್ರ ಕಾಣುತ್ತಿದ್ದವು. “”ಹಾವಿನ ಎಲುಬು ಭಾರೀ ವಿಷ ಅಂತಾರಪ್ಪ. ಕಾಲೀಗೇನಾರ ತಾಗಿದ್ರೆ ಕಾಲೇ ಕೊಳಿತದೆ ಕಾಣು. ಅದಕ್ಕೇ ನಾಳೀಕೆ ಬೆಂಕಿ ತಣ್ಣಗಾದ ಕೂಡಲೇ ಗೆರಸಿ ತಂದು ಎಲ್ಲ ಮೂಳೇನೂ ಎತ್ತಿ ಹಾಕಬೇಕು” ಎಂದು ಅಮ್ಮೆಣ್ಣು ಎಲ್ಲ ಹೆಂಗಸರನ್ನು ಎಚ್ಚರಿಸಿದಳು. ಜೊತೆಯಲ್ಲೇ ಓಡಿಬಂದ ಹೈಕಳಿಗೆ ಯಾವುದೇ ಕಾರಣಕ್ಕೂ ಬೆಂಕಿಗೆ ಕಾಲು ಹಾಕಬೇಡಿ ಎಂದು ಎಚ್ಚರಿಸಿದ್ದಲ್ಲದೇ ಇನ್ನು ಓಡಾಡುವಾಗ ಹಾವಿನ ಮೂಳೆ ಇದೆಯೋ ಎಂದು ನೋಡಿ ನಡೆಯುವಂತೆ ತಾಕೀತು ಮಾಡಲಾಯಿತು.

Advertisement

ಮನೆಯೊಡೆಯನನ್ನು ಕಾದು, ಕಾದು ಸೋತುಹೋದ ಎತ್ತುಗಳೆಲ್ಲ ಕಟ್ಟಿದಲ್ಲಿಯೇ ಮಲಗಿ ದಣಿವಾರಿಸಿಕೊಳ್ಳುತ್ತಿದ್ದವು. ಅವುಗಳ ಹಗ್ಗ ಬಿಚ್ಚಿ, ಹೊಳೆಗೆ ತಂದು ಕೊಂಚ ನೀರು ಕುಡಿಸಿದ ಹೆಂಗಸರು ಬೆಳಗಿನಿಂದ ಉಪವಾಸವಿರುವ ಎತ್ತುಗಳು ನಾಲ್ಕು ಬಾಚು ಮೇಯಲೆಂದು ಅಲ್ಲೇ ಬದುವಿನ ಹತ್ತಿರಕ್ಕೆ ಕುಳಿತು ಯಾವ ಕಥೆಯನ್ನೂ ಹೇಳಲಾಗದೇ ಮೌನವಾದರು. “ಕರ ಕರ’ವೆಂಬ ಎತ್ತಿನ ಮೇಯುವ ದನಿಯು, ಸಳಸಳವೆಂದು ಹರಿವ ಹೊಳೆಯ ನೀರಿನೊಂದಿಗೆ ಸೇರಿ ಹೊಸದೊಂದು ಸಂಗೀತವನ್ನು ಹಾಡಿದಂತೆ ಭಾಸವಾಗುತ್ತಿತ್ತು. ಮರಳಿ ಬರುವ ದಾರಿಯಲ್ಲಿ ಹುಲಿಗಿರಿ¤ಯೆದುರು ನಿಂತ ಮಾದ ಜೋರುದನಿಯಲ್ಲಿ ಏನೋ ಹೇಳುತ್ತಿರುವುದು ಅವರ ಕಿವಿಗೆ ಬಿತ್ತು.

ಸುಧಾ ಆಡುಕಳ

Advertisement

Udayavani is now on Telegram. Click here to join our channel and stay updated with the latest news.

Next