ದೇವದುರ್ಗ: ಸಮೀಪದ ನೀಲಗಲ್ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಹಿರಿಯ ಶಾಲೆಯಲ್ಲಿ ಶುಕ್ರವಾರ ಬಿಸಿಯೂಟದ ಅಡುಗೆಯಲ್ಲಿ ಹಾವುರಾಣಿ ಬಿದ್ದ ಊಟವನ್ನು ಸೇವಿಸಿ 60ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಎಂದಿನಂತೆ ಮಕ್ಕಳು ಮತ್ತು ಮುಖ್ಯ ಶಿಕ್ಷಕ ನೀಲಕಂಠ ಸೇರಿದಂತೆ 191 ಮಕ್ಕಳು ಬಿಸಿಯೂಟ ಸೇವನೆ ಮಾಡಿದ್ದಾರೆ. ಕೊನೆಯಲ್ಲಿ ಅಡುಗೆಯಲ್ಲಿ ಹಾವುರಾಣಿ ಬಿದ್ದಿರುವುದನ್ನು ನೋಡಿದ್ದಾರೆ. ಕೆಲ ಹೊತ್ತಿನಲ್ಲಿ ಮಕ್ಕಳಿಗೆ ವಾಂತಿ, ತಲೆ ನೋವು ಕಾಣಿಸಿಕೊಂಡಿದ್ದು ಸುದ್ದಿ ತಿಳಿದು ಸ್ಥಳಕ್ಕೆ ಗಬ್ಬೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ| ಪ್ರತಿಮಾ ಪಾಟೀಲ್ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
ಹೆಚ್ಚಿನ ಚಿಕಿತ್ಸೆಗೆ 60ಕ್ಕೂ ಹೆಚ್ಚು ಮಕ್ಕಳನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು. ನಂತರ ದೇವದುರ್ಗ ತಾಲೂಕು ವೈದ್ಯಾಧಿಕಾರಿ ಡಾ| ಬನದೇಶ ಅವರು ಮಕ್ಕಳ ಪಾಲಕರಿಗೆ ಮಕ್ಕಳ ಬಗ್ಗೆ ಆತಂಕ ಬೇಡ ಯಾವುದೇ ಪ್ರಾಣಪಾಯವಿಲ್ಲ ಎಲ್ಲರೂ ಚೇತರಿಸಿಕೊಂಡಿದ್ದಾರೆ. ಅತಂಕಕ್ಕೆ ಒಳಗಗಾಬೇಡಿ ಎಂದು ತಿಳಿಸಿದರು.
ಸ್ಥಳಕ್ಕೆ ಆರ್‌ಡಿಸಿಸಿ ಬ್ಯಾಂಕಿನ ನಿರ್ದೇಶಕ ರಾಜಶೇಖರ ನಾಯಕ ಭೇಟಿ ನೀಡಿ ಪಾಲಕರಿಗೆ ಸಮಾಧಾನ ಮಾಡಿದರು. ಈ ಸಂದರ್ಭದಲ್ಲಿ ಸಿಪಿಐ ಸಂಜೀವ ಕುಮಾರ, ಬಿಸಿಯೂಟದ ಸಹಾಯಕ ನಿರ್ದೇಶಕ ವಿರುಪಾಕ್ಷಿ, ದೇವದುರ್ಗ ಬಿಇಒ ಎಸ್.ಬಿ. ಹತ್ತಿ, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.
ಸ್ಥಳಕ್ಕೆ ಭೇಟಿ: ಹಾವುರಾಣಿ ಬಿದ್ದ ಬಿಸಿಯೂಟ ಸೇವಿವಿ ಮಕ್ಕಳು ಅಸ್ವಸ್ಥಗೊಂಡ ವಿಷಯ ತಿಳಿದು ಶಾಲೆಗೆ ಭೇಟಿ ನೀಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮಕ್ಕಳ ಆರೋಗ್ಯ ವಿಚಾರಿಸಿದರು. ಹಾವುರಾಣಿ ಬಿದ್ದ ಬಿಸಿಯೂಟ ಸೇವಿಸಿ ತೀವ್ರ ಅಸ್ವಸ್ಥಗೊಂಡ 60 ಮಕ್ಕಳಿಗೆ ರಾಯಚೂರು ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡಿದ್ದಾರೆ. ಘಟನೆಗೆ ಶಾಲೆಯ ಮುಖ್ಯ ಶಿಕ್ಷಕ ಹಾಗೂ ಅಡುಗೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣವಾಗಿದೆ. ಅಡುಗೆ ಸಿಬ್ಬಂದಿ ಮತ್ತು ಮುಖ್ಯ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ
ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.