ವಿಟ್ಲ: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪ ಹಾವು ಅಡ್ಡ ಬಂದ ಪರಿಣಾಮ ಖಾಸಗಿ ಬಸ್ ಹಾಗೂ ಆಮ್ನಿ ಕಾರು ಮುಖಾಮುಖೀ ಢಿಕ್ಕಿಯಾದ ಘಟನೆ ಶುಕ್ರವಾರ ಸಂಭವಿಸಿದೆ. ಆಮ್ನಿ ಚಾಲಕ ಉಪ್ಪಿನಂಗಡಿ ಸಮೀಪದ ಕರಾಯ ನಿವಾಸಿ ಮೋಹನ (32) ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಂಗಳೂರು ಕಡೆಯಿಂದ ಉಪ್ಪಿ ನಂಗಡಿ ಕಡೆಗೆ ತೆರಳುತ್ತಿದ್ದ ಆಮ್ನಿಗೆ ಮಂಗಳೂರು ಕಡೆಗೆ ಸಾಗುತ್ತಿದ್ದ ಖಾಸಗಿ ಬಸ್ ಢಿಕ್ಕಿ ಹೊಡೆದಿದೆ.
ವಿವರ: ಬಸ್ಸಿನ ಮುಂದೆ ಸಾಗುತ್ತಿದ್ದ ಕಾರೊಂದಕ್ಕೆ ನಾಗರಹಾವು ಅಡ್ಡ ಬಂದಿದ್ದರಿಂದ ಅದರ ಚಾಲಕ ಹಠಾತ್ತನೆ ಬ್ರೇಕ್ ಹಾಕಿದ. ಕಾರಿಗೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹಿಂದಿದ್ದ ಬಸ್ಸನ್ನು ಹಠಾತ್ತನೆ ಬಲಕ್ಕೆ ತಿರುಗಿಸಿದಾಗ ಅದು ಎದುರಿ ನಿಂದ ಬರುತ್ತಿದ್ದ ಆಮ್ನಿಗೆ ಢಿಕ್ಕಿ ಹೊಡೆಯಿತು.
ಅಪಘಾತದ ತೀವ್ರತೆಗೆ ಆಮ್ನಿ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕೆಲವು ಬಿಡಿಭಾಗಗಳು ಬಸ್ಸಿನ ಚಕ್ರದಡಿ ಯಲ್ಲಿ ಸಿಲುಕಿವೆ. ಇತ್ತ ನಾಗರಹಾವು ಕೂಡ ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದೆ. ಗಂಭೀರ ಗಾಯಗೊಂಡ ಚಾಲಕ ನನ್ನು ಸ್ಥಳೀಯರು ಮಾಣಿಯ 108 ಆ್ಯಂಬುಲೆನ್ಸ್ ಮೂಲಕ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿಟ್ಲ ಪೊಲೀಸರು ಸ್ಥಳಕ್ಕೆ ತೆರಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.