Advertisement

ಗುರುವಾಯನಕೆರೆಯಲ್ಲಿ ಸುಗಮ ರಸ್ತೆ ಸಂಚಾರ ದುಸ್ತರ

09:05 PM Apr 23, 2019 | mahesh |

ಬೆಳ್ತಂಗಡಿ: ನಾಲ್ಕು ಪ್ರಮುಖ ರಸ್ತೆಗಳು ಸೇರುವ ಗುರುವಾಯನಕೆರೆ ಪೇಟೆಯಲ್ಲಿ ಪ್ರತಿದಿನ ರಸ್ತೆ ಸಂಚಾರ ದುಸ್ತರವಾಗುತ್ತಿದ್ದು, ವಾಹನ ಸವಾರರು ಹೈರಾಣಾಗುತ್ತಿದ್ದಾರೆ. ಗುರುವಾಯನಕೆರೆ ಪೇಟೆ ನಾಲ್ಕು ರಸ್ತೆ ಸೇರುವಲ್ಲಿ ತೀರ ಇಕ್ಕಟ್ಟಾಗಿರುವುದರಿಂದ ಸಮಸ್ಯೆಯಾಗುತ್ತಿದೆ. ಮಂಗಳೂರಿನಿಂದ, ಕಾರ್ಕಳ ರಸ್ತೆ, ಬೆಳ್ತಂಗಡಿ, ಉಪ್ಪಿನಂಗಡಿಯಿಂದ ಬರುವ ರಸ್ತೆಗಳು ಗುರುವಾಯನ ಕೆರೆ ಪೇಟೆ ಹಾದು ಹೋಗುವುದರಿಂದ ವಾಹನ ಸಂಚಾರ ಏರುಪೇರಾಗುತ್ತಿದೆ. ಮದುವೆ ಸಮಾರಂಭಗಳಿದ್ದರೆ ಕಿ.ಮೀ.ನಷ್ಟು ಉದ್ದ ರಸ್ತೆ ತಡೆಯಾಗುತ್ತಿದೆ.

Advertisement

ಬೆಳ್ತಂಗಡಿಯಲ್ಲಿ ಸೋಮವಾರದ ಸಂತೆಯಿಂದ ರಸ್ತೆ ಸಂಚಾರ ಸಮಸ್ಯೆ ಸಾಮಾನ್ಯವಾದರೂ ಅದೇ ದಿನ ಮದುವೆ ಸಮಾರಂಭಗಳಿದ್ದರೆ ಸಮಸ್ಯೆ ಮತ್ತಷ್ಟು ಹೆಚ್ಚುತ್ತದೆ. ಬೆಳ್ತಂಗಡಿ ಸಂತೆಕಟ್ಟೆಯಿಂದ ಗುರುವಾಯನಕೆರೆವರೆಗೆ ರಸ್ತೆ ಸಂಚಾರಕ್ಕೆ ಸಮಸ್ಯೆಯಾ ಗುತ್ತಿದ್ದು, ಟ್ರಾಫಿಕ್‌ ಪೊಲೀಸರೂ ಹೈರಾಣಾಗುತ್ತಿದ್ದಾರೆ. ಗುರುವಾಯನಕೆರೆ ಪೇಟೆ ಪ್ರಮುಖ ಸಂಪರ್ಕ ಕೇಂದ್ರವಾಗಿರುವುದರಿಂದ ಅದೇ ರಸ್ತೆಯಾಗಿ ಬೆಳ್ತಂಗಡಿ, ಉಜಿರೆ, ಚಾರ್ಮಾಡಿ, ಧರ್ಮಸ್ಥಳಕ್ಕೆ ಸಾಗಬೇಕಿದೆ. ಮತ್ತೂಂದೆಡೆ ಬೆಳ್ತಂಗಡಿಯಿಂದ ಮಂಗಳೂರು, ಕಾರ್ಕಳ, ಪುತ್ತೂರು ತೆರಳುವವರು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ.

ಚತುಷ್ಪಥ ರಸ್ತೆ ಕಾಮಗಾರಿ
ಈಗಾಗಲೇ 157 ಕೋಟಿ ರೂ. ವೆಚ್ಚದಲ್ಲಿ 19.85 ಕಿ.ಮೀ ಪುಂಜಾಲಕಟ್ಟೆ ಬಿ.ಸಿ. ರೋಡ್‌ ಚತುಷ್ಪಥ ರಸ್ತೆ ಕಾಮಗಾರಿ ಹೆಚ್ಚಿನ ವೇಗ ಪಡೆಯುತ್ತಿದ್ದು, ಎರಡನೇ ಹಂತದ ಪುಂಜಾಲಕಟ್ಟೆ ಚಾರ್ಮಾಡಿ ರಸ್ತೆ ಆರಂಭಗೊಳ್ಳಲಿದೆ. ಒಟ್ಟು 250 ಕೋ. ರೂ. ವೆಚ್ಚದ ಕಾಮಗಾರಿ ಇದಾಗಿದ್ದು, ಸಂಚಾರ ದಟ್ಟಣೆ ಈ ಮೂಲಕ ನಿವಾರಣೆಯಾಗುವ ಭರವಸೆ ಇದೆ. ಜನಸಂಖ್ಯೆ ಹೆಚ್ಚಾದಂತೆ ವಾಹನ ಸಂಖ್ಯೆಯೂ ಏರಿಕೆಯಾಗುತ್ತಿದೆ. ರಸ್ತೆ ವಿಸ್ತರಣೆಗೆ ಸ್ಥಳಾವಕಾಶ ಕೊರತೆಯಿಂದ ಹೆಚ್ಚಿನ ಸಮಸ್ಯೆಯಾಗಿದ್ದು, ಮುಂದಿನ ದಿನಗಳಲ್ಲಿ ಬೈಪಾಸ್‌ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸದಿದ್ದರೆ ಸಂಚಾರ ತೀರಾ ಹದಗೆಡಲಿದೆ.

ಆ್ಯಂಬುಲೆನ್ಸ್‌ ಸಂಚಾರವೂ ಅಸಾಧ್ಯ
ರಸ್ತೆ ತಡೆಯುಂಟಾದಲ್ಲಿ ಅಪಘಾತ, ತುರ್ತು ಸಂದರ್ಭಗಳಲ್ಲಿ ಆ್ಯಂಬುಲೆನ್ಸ್‌ ಹಾಗೂ ವಾಹನ ಸಂಚಾರಕ್ಕೆ ತೀರ ಸಮಸ್ಯೆಯಾಗುತ್ತಿದೆ.
ತುರ್ತು ಚಿಕಿತ್ಸೆಗಾಗಿ ಮಂಗಳೂರಿಗೆ ತೆರಳಬೇಕಾದಲ್ಲಿ ಸಮಯದ ಅಭಾವ ಮಧ್ಯೆ ಆ್ಯಂಬುಲೆನ್ಸ್‌ ಓಡಾಟಕ್ಕೆ ತೊಡಕಾಗುತ್ತಿದೆ. ಇದೇ ರೀತಿ ವಾಹನ ದಟ್ಟಣೆ ಉಂಟಾದಲ್ಲಿ ಅಪಘಾತಕ್ಕೂ ಕಾರಣವಾಗಲಿದೆ.

ಭೂ ಸ್ವಾಧೀನವಾದಲ್ಲಿ ಅನುಕೂಲ
ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರಿಗೆ ನಾನು ಶಾಸಕನಾದ ಸಂದರ್ಭದಲ್ಲಿ ಸುಮಾರು 250 ಕೋ. ರೂ. ಹೆಚ್ಚಿನ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೊದಲನೇ ಹಂತವಾಗಿ ಪುಂಜಾಲಕಟ್ಟೆಯಿಂದ ಬಿ.ಸಿ. ರೋಡ್‌ ರಸ್ತೆ ಕಾಮಗಾರಿ ಆರಂಭಗೊಂಡು ವೇಗ ಪಡೆಯುತ್ತಿದೆ. ಎರಡನೇ ಹಂತದಲ್ಲಿ ಪುಂಜಾಲಕಟ್ಟೆಯಿಂದ ಚಾರ್ಮಾಡಿಗೆ ವಿಸ್ತರಣೆಗೊಳ್ಳಲಿದ್ದು, ಸೂಕ್ತ ಸಮಯದಲ್ಲಿ ಭೂ ಸ್ವಾಧೀನವಾದಲ್ಲಿ ಜನರಿಗೆ ಸಂಚಾರಕ್ಕೆ ಅನುಕೂಲವಾಗಿದೆ.
– ಹರೀಶ್‌ ಪೂಂಜ, ಶಾಸಕರು

Advertisement
Advertisement

Udayavani is now on Telegram. Click here to join our channel and stay updated with the latest news.

Next