Advertisement

ಮಂಗಳೂರು ಕ್ಷೇತ್ರದೊಳಗೆ ಹಗೆ ರಾಜಕೀಯದ ಹೊಗೆ!

12:20 AM Apr 29, 2023 | Team Udayavani |

ಮಂಗಳೂರು: ರಾಜಕಾರಣದಲ್ಲೇ ಅಪರೂಪದ ಸನ್ನಿವೇಶಕ್ಕೆ ಕಾರಣವಾಗಿರುವುದು ಮಂಗಳೂರು ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯ ನಾಮಪತ್ರ ದಿಢೀರ್‌ ವಾಪಸ್‌ ಪ್ರಕರಣ. ಈ ಸಂಗತಿ ಸದ್ಯ ಪ್ರಚಾರದ ಕಣದಲ್ಲಿ ಬಗೆ ಬಗೆಯ ಚರ್ಚೆ, ಆರೋಪ- ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ಉದಯವಾಣಿ ತಂಡ ಈ ಕ್ಷೇತ್ರದಲ್ಲಿ ಪರ್ಯಟನೆ ನಡೆಸಿದಾಗ ಹಲವು ಕಡೆ ಕೇಳಿಬಂದದ್ದು ಈ ನಾಮಪತ್ರ ವಾಪಸ್‌ ಪ್ರಕರಣವೇ.

Advertisement

ಈ ಸಂಗತಿ ಇತರ ವಿವಿಧ ಪಕ್ಷದೊಳಗೆ “ಹಗೆ” ರಾಜಕೀಯ ಮೂಡಿಸಿದ್ದು, ಪ್ರಚಾರ ಸಭೆಗಳಲ್ಲಿ ಇದು ಹೊಗೆಯಾಡತೊಡಗಿದೆ. ಇದೇ ಸಂದರ್ಭದಲ್ಲಿ ಈ ಪ್ರಕರಣದಿಂದ ಆಗ ಬಹುದಾದ ಲಾಭ-ನಷ್ಟಗಳನ್ನು ಪಕ್ಷಗಳಲ್ಲಿ ಲೆಕ್ಕ ಹಾಕಲಾಗುತ್ತಿದೆ. ಈ ಮಧ್ಯೆ ಮಂಗಳೂರು ಕ್ಷೇತ್ರದ ಅಭ್ಯರ್ಥಿಗೆ ಪ್ರಚಾರ ಮಾಡಬೇಕಿದ್ದ ಜೆಡಿಎಸ್‌ ಮುಖಂಡರು-ಕಾರ್ಯ ಕರ್ತರು ಮಂಗಳೂರು ಉತ್ತರಕ್ಕೆ ಸ್ಥಳಾಂತರಗೊಂಡಿದ್ದಾರೆ. ಸದ್ಯಕ್ಕೆ ಲಾಭ ವಾದದ್ದು ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಬಂದು ಟಿಕೆಟ್‌ ಗಿಟ್ಟಿಸಿಕೊಂಡು ಮೊದಿನ್‌ ಬಾವಾ ಅವರಿಗೆ !
ಜೆಡಿಎಸ್‌ಗೆ ಇದ್ದ ಮತಗಳು ಯಾರ ಬುಟ್ಟಿಗೆ ಬೀಳಬಹುದು? ಎಂಬುದು ಮಂಗಳೂರು ಕ್ಷೇತ್ರದ ಈಗಿನ ಕುತೂಹಲ. ಅದನ್ನು ಪಡೆಯಲೆಂದೇ ಕಾಂಗ್ರೆಸ್‌, ಬಿಜೆಪಿ, ಎಸ್‌ಡಿಪಿಐ ಇದೀಗ ಪ್ರಚಾರ ಕಣದಲ್ಲಿ ಬಳಸಲು ತೊಡಗಿವೆ. ಹಾಗಾಗಿ ಪರಸ್ಪರ ವಾಗ್ಯುದ್ಧ ಆರಂಭವಾಗಿದೆ.

1994ರ ಚುನಾವಣೆ ಅನಂತರದಿಂದ ಇಲ್ಲಿ ಯವರೆಗೆ ನಡೆದ (1999 ಹೊರತು ಪಡಿಸಿ) 6 ಚುನಾವಣೆಯಲ್ಲಿ ಜೆಡಿಎಸ್‌ ಇಲ್ಲಿ ಕಣದಲ್ಲಿತ್ತು. ಈ ಬಾರಿಯೂ ಅಲ್ತಾಫ್‌ ಕುಂಪಲ ಜೆಡಿಎಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ಪಕ್ಷದ ಗಮನಕ್ಕೆ ಬಾರದೆ ನಾಮಪತ್ರ ವಾಪಸ್‌ ಪಡೆದಿದ್ದಾರೆ. ಹಾಗಾಗಿ ಈ ಚುನಾವಣೆಯಲ್ಲಿ ಸದ್ಯಕ್ಕೆ ಔಟ್‌.

ಜೆಡಿಎಸ್‌ ನಾಮ ಸ್ಮರಣೆ!
ಕಾಂಗ್ರೆಸ್‌ನ ಕೆಲವರ ಒತ್ತಾಯ ಹಾಗೂ ಬಲವಂತದ ಕಾರಣದಿಂದ ನಾಮಪತ್ರ ವಾಪಸ್‌ ಪಡೆಯಲಾಗಿದೆ ಎಂಬುದು ಜೆಡಿಎಸ್‌ ಆರೋಪ. “ಪ್ರಜಾತಂತ್ರ ವಿರೋಧಿ ಕ್ರಮಕ್ಕೆ ಮುಂದಾದ ಕಾಂಗ್ರೆಸ್‌ನ ಕ್ರಮ ಖಂಡನೀಯ’ ಎಂಬ ಧಾಟಿಯಲ್ಲಿ ಬಿಜೆಪಿ ಈಗ ಪ್ರಚಾರ ಕಣದಲ್ಲಿ ಜನರ ಗಮನಸೆಳೆಯಲು ಆ ವಿಷಯವನ್ನು ಪ್ರಸ್ತಾವಿಸುತ್ತಿದೆ. ಎಸ್‌ಡಿಪಿಐ ಕೂಡ ಕಾಂಗ್ರೆಸ್‌ ವಿರುದ್ಧ ಇದನ್ನೇ ಅಸ್ತ್ರವನ್ನಾಗಿಸಿಕೊಂಡಿದೆ. ಕಾಂಗ್ರೆಸ್‌ ಕೂಡ ಸುಮ್ಮನಿಲ್ಲ. “ಅವರು ಸ್ವ-ಇಚ್ಚೆಯಿಂದ ನಾಮಪತ್ರ ವಾಪಸ್‌ ಪಡೆದಿದ್ದರೂ ನಮ್ಮ ಮೇಲೆ ಕೆಲವರು ಗೂಬೆ ಕೂರಿಸುತ್ತಿದ್ದಾರೆ. ಅವರ ಪಕ್ಷದ ಹಿರಿಯರೇ ಇಡೀ ಪ್ರಕರಣಕ್ಕೆ ಕಾರಣ’ ಎಂದು ತಿರುಗೇಟು ನೀಡುತ್ತಿದೆ ಕಾಂಗ್ರೆಸ್‌. ಹಾಗಾಗಿ ಸದ್ಯ ಕ್ಷೇತ್ರದಲ್ಲೀಗ ಮೂರೂ ಪಕ್ಷಗಳದ್ದು ಜೆಡಿಎಸ್‌ ನಾಮಸ್ಮರಣೆ. ಅದರಲ್ಲಿ ಇಬ್ಬರದ್ದು ಸನ್ನಿವೇಶದ ಲಾಭ ಪಡೆಯಲು, ಮತ್ತೂಬ್ಬರದ್ದು ಆಗಬಹುದಾದ ನಷ್ಟ ತಡೆಯಲು !

~ ದಿನೇಶ್‌ ಇರಾ

Advertisement
Advertisement

Udayavani is now on Telegram. Click here to join our channel and stay updated with the latest news.

Next