Advertisement
ನಗರದ ರೇಡಿಯೋ ಪಾರ್ಕ್ ಬಳಿ ಇರುವ ಕಿರುಮೃಗಾಲಯ ಕಳೆದ 37 ವರ್ಷಗಳಿಂದ ವಿವಿಧ ಪ್ರಭೇದದ ಪಕ್ಷಿ, ವನ್ಯಪ್ರಾಣಿಗಳನ್ನು ಜನರಿಗೆ ಪರಿಚಯಿಸಿಕೊಟ್ಟಿದೆ. 1981ರಲ್ಲಿ ಅಂದಿನ ಸಿಎಂ ಆರ್.ಗುಂಡೂರಾವ್ ಅಧ್ಯಕ್ಷತೆಯಲ್ಲಿ ಸ್ಥಳೀಯ ಶಾಸಕ ಭಾಸ್ಕರ್ ನಾಯ್ಡು ನೇತೃತ್ವದಲ್ಲಿ ಕಿರುಮೃಗಾಲಯ ಉದ್ಘಾಟಿಸಲಾಗಿತ್ತು. ಅಂದಿನಿಂದ ಇಂದಿನಿವರೆಗೂ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಗೆ, ಚಿಕ್ಕ ಮಕ್ಕಳಿಗೆ ಒಂದು ದಿನದ ಮಟ್ಟಿಗೆ ಪಿಕ್ನಿಕ್ ಸ್ಪಾಟ್‌ನಂತಿದ್ದ ಕಿರುಮೃಗಾಲಯ ಸ್ಥಳಾಂತರಕ್ಕೆ ಕೇಂದ್ರ ಮೃಗಾಲಯ ಪ್ರಾಧಿಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆಯೇ ಮೃಗಾಲಯದಲ್ಲಿದ್ದ 150ಕ್ಕೂ ಹೆಚ್ಚು ಕೃಷ್ಣಮೃಗಗಳನ್ನು ಕಮಲಾಪುರ ಬಳಿಯ ವಾಜಪೇಯಿ ಜೂಲಾಜಿಕಲ್ ಪಾರ್ಕ್‌ಗೆ ಸ್ಥಳಾಂತರಿಸಲಾಗಿದ್ದು, ಶೀಘ್ರದಲ್ಲೇ ಇನ್ನುಳಿದ ಪ್ರಾಣಿಗಳನ್ನೂ ಸಾಗಿಸಲಾಗುತ್ತದೆ.
Related Articles
Advertisement
ಆದಾಯವೂ ಕುಸಿತ: ವನ್ಯಜೀವಿ ಪ್ರಾಣಿಗಳಿಗೆ ಅರಣ್ಯದಲ್ಲಿ ಇದ್ದಂತೆ ಓಡಾಡಿಕೊಂಡು ಜೀವಿಸುವಂತಹ ವಾತಾವರಣ ಕಲ್ಪಿಸಿದರೆ ಅವುಗಳ ಆಯುಷ್ಯ ಹೆಚ್ಚಳವಾಗಲಿದೆ. ಆದರೆ, ಒಂದು ಕಡೆ ಕೂಡಿಹಾಕಿದರೆ, ಎಲ್ಲೂ ಸಂಚರಿಸದೆ ಒಂದೇ ಕಡೆ ನಿಂತು ಆರೋಗ್ಯ ವೃದ್ಧಿಯಾಗದೆ ಆಯುಷ್ಯ ಕಡಿಮೆಯಾಗಲಿದೆ ಎಂದು ಪರಿಸರ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕಿರುಮೃಗಾಲಯ ಪಕ್ಕದಲ್ಲೇ ರೈಲ್ವೆ ಹಳಿಗಳು ಇರುವುದರಿಂದ ಹಗಲಿರುಳು ಸಂಚರಿಸುವ ರೈಲುಗಳ ಶಬ್ದ ಪ್ರಾಣಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಜತೆಗೆ ಸಮೀಪದ ದೊಡ್ಡಬಾವಿ ನೀರನ್ನು ಮೃಗಾಲಯಕ್ಕೆ ಸರಬರಾಜು ಮಾಡುತ್ತಿದ್ದು, ಈ ನೀರು ಪ್ರಾಣಿಗಳ ಸೇವನೆಗೆ ಯೋಗ್ಯವಲ್ಲ. ನೀರಿನ ಸಮಸ್ಯೆಯೂ ಎದುರಿಸುತ್ತಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಮೃಗಾಲಯ ಆದಾಯದ ಕೊರತೆ ಎದುರಿಸುತ್ತಿದೆ. ವಾರದ ಕೊನೆಯ ದಿನಗಳಾದ ಶನಿವಾರ, ಭಾನುವಾರ ಮಾತ್ರ 10ರಿಂದ 13 ಸಾವಿರ ರೂ. ಆದಾಯ ಬಂದರೆ, ಇನ್ನೂಳಿದ ದಿನಗಳು ಕೇವಲ 3 ರಿಂದ 4 ಸಾವಿರ ರೂ. ಆದಾಯ ಬರುತ್ತದೆ. ಪರಿಣಾಮ ಮೃಗಾಲಯ ನಿರ್ವಹಣೆಗೂ ಕಷ್ಟವಾಗಲಿದೆ. ವಯಸ್ಕರರಿಗೆ 20 ರೂ., ಮಕ್ಕಳಿಗೆ 10 ರೂ.ಗಳನ್ನು ಪ್ರವೇಶ ಶುಲ್ಕ ವಿಧಿಸಲಾಗುತ್ತಿದ್ದು, ಯಾವುದೇ ವಾಹನಗಳ ಪಾರ್ಕಿಂಗ್ ಶುಲ್ಕ ವಿಧಿಸುವುದಿಲ್ಲ. ಹಾಗಾಗಿ ಮೃಗಾಲಯದಿಂದ ಹೆಚ್ಚಿನ ಪ್ರಮಾಣದಲ್ಲಿ ಆದಾಯ ನಿರೀಕ್ಷಿಸುವಂತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮೃಗಾಲಯದ ಸಿಬ್ಬಂದಿ.
ಟ್ರೀ ಪಾರ್ಕ್ ನಿರ್ಮಾಣ: ಕಿರು ಮೃಗಾಲಯ ಕಮಲಾಪುರದ ಜೂಲಾಜಿಕಲ್ ಪಾರ್ಕ್‌ಗೆ ಸ್ಥಳಾಂತರಗೊಂಡ ಬಳಿಕ ಈ ಸ್ಥಳದಲ್ಲಿ ವಿವಿಧ ರೀತಿಯ ಜನಾಕರ್ಷಿಸುವ ಟ್ರೀ ಪಾರ್ಕ್ ನಿರ್ಮಿಸಲು ಅರಣ್ಯ ಇಲಾಖೆ ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ. ನಗರ ಹೊರವಲಯದಲ್ಲಿ ಈಗಾಗಲೇ ಟ್ರೀ ಪಾರ್ಕ್ ನಿರ್ಮಿಸುತ್ತಿದ್ದು, ಅಲ್ಲಿಗೆ ಜನರು ನಿರೀಕ್ಷಿತ ಪ್ರಮಾಣದಲ್ಲಿ ಆಗಮಿಸುವುದು ಅನುಮಾನವಿದೆ. ಆದ್ದರಿಂದ ನಗರದಲ್ಲೂ ಒಂದು ಟ್ರೀ ಪಾರ್ಕ್ ನಿರ್ಮಿಸುವ ಮೂಲಕ ಸ್ಥಳೀಯ ಜನರಿಗೆ ಅನುಕೂಲವಾಗುವ ಸಾಧ್ಯತೆಯಿದೆ ಎಂದು ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.
ಬಳ್ಳಾರಿಯ ಕಿರುಮೃಗಾಲಯವನ್ನು ಶೀಘ್ರದಲ್ಲೇ ಕಮಲಾಪುರ ಬಳಿಕ ಜೂಲಾಜಿಕಲ್ ಪಾರ್ಕ್ ಗೆ ಸ್ಥಳಾಂತರಿಸಲಾಗುತ್ತದೆ. ಮೃಗಾಲಯದಲ್ಲಿನ ಪ್ರಾಣಿಗಳಿಗೆ ಸಮರ್ಪಕ ಮೂಲಸೌಲಭ್ಯಗಳು ಇಲ್ಲವೆಂದು ಕೇಂದ್ರ ಮೃಗಾಲಯ ಪ್ರಾಧಿಕಾರ ಈ ಆದೇಶವನ್ನು ಹೊರಡಿಸಿದೆ. ಈ ಕುರಿತು ನಗರದ ಜನರಿಗೆ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿದರೂ, ಪ್ರಾಧಿಕಾರ ಕೇಳುತ್ತಿಲ್ಲ. ಹಾಗಾಗಿ ಶೀಘ್ರದಲ್ಲೇ ಸ್ಥಳಾಂತರವಾಗುವ ಈ ಸ್ಥಳದಲ್ಲಿ ಟ್ರೀ ಪಾರ್ಕ್ ನಿರ್ಮಿಸುವ ಉದ್ದೇಶ ಹೊಂದಲಾಗಿದೆ.•ರಮೇಶ್ ಕುಮಾರ್, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ, ಬಳ್ಳಾರಿ
ಕಿರುಮೃಗಾಲಯದಲ್ಲಿ ವನ್ಯಪ್ರಾಣಿಗಳಿಗೆ ಸಮರ್ಪಕ ಮೂಲಸೌಲಭ್ಯಗಳಿಲ್ಲ. ಮುಖ್ಯವಾಗಿ ನಿರೀಕ್ಷಿತ ಪ್ರಮಾಣದಲ್ಲಿ ಆದಾಯದ ಕೊರತೆಯಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರದವರು ಕಿರುಮೃಗಾಲಯವನ್ನು ಸ್ಥಳಾಂತರಿಸುವಂತೆ ಸೂಚಿಸಿರಬಹುದು. ಎರಡು ವರ್ಷಗಳ ಹಿಂದೆಯೇ 150 ಜಿಂಕೆಗಳನ್ನು ಸ್ಥಳಾಂತರಿಸಲಾಗಿದೆ.
•ಅಣ್ಣೇಗೌಡ, ಮೇಲ್ವಿಚಾರಕ, ಕಿರುಮೃಗಾಲಯ
•ಸ್ಥಳಾಂತರಕ್ಕೆ ಕೇಂದ್ರ ಮೃಗಾಲಯ ಪ್ರಾಧಿಕಾರ ಸೂಚನೆ
•ಪ್ರಾಣಿಗಳಿಗೆ ಮೃಗಾಲಯದಲ್ಲಿಲ್ಲ ಮೂಲ ಸೌಲಭ್ಯ
•ಮೃಗಾಲಯ ಸ್ಥಳದಲ್ಲಿ ಟ್ರೀ ಪಾರ್ಕ್ ನಿರ್ಮಾಣ
•ಆದಾಯ ಕುಂಠಿತ-ಮೃಗಾಲಯ ನಿರ್ವಹಣೆಗೂ ಕಷ್ಟ
•1981ರಲ್ಲಿ ಅಂದಿನ ಸಿಎಂ ಆರ್. ಗುಂಡೂರಾವ್ ಉದ್ಘಾಟನೆ
•ಮೃಗಾಲಯ ಪಕ್ಕದಲ್ಲೇ ರೈಲು ಸಂಚಾರ-ಪ್ರಾಣಿಗಳಿಗೆ ಕಿರಿಕಿರಿ
•ವೆಂಕೋಬಿ ಸಂಗನಕಲ್ಲು