Advertisement

Hanur: ನಿರ್ಮಿಸಿ ವರ್ಷ ಕಳೆಯುವುದರೊಳಗೆ ಕಿರುಸೇತುವೆ ಶಿಥಿಲ

03:23 PM Aug 26, 2023 | Team Udayavani |

ಹನೂರು: ತಾಲೂಕಿನ ಮಾರ್ಟಳ್ಳಿ ಗ್ರಾಪಂನ ನರೇಗಾ ಯೋಜನೆಯಡಿ 10 ಲಕ್ಷ ರೂ.ನಲ್ಲಿ ನಿರ್ಮಿಸಿದ್ದ ಕಿರುಸೇತುವೆ ವರ್ಷ ಕಳೆಯುವುದರಲ್ಲೇ ಶಿಥಿಲಗೊಂಡಿದ್ದು, ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಗ್ರಾಪಂ ವ್ಯಾಪ್ತಿಯ ಕಡಬೂರ್‌ ವಾರ್ಡ್‌ಗೆ ಒಳಪಡುವ ಕೊಂಬೈ ನಗರ ವ್ಯಾಪ್ತಿಯ ಸೀಫ‌ನಿ ಕೋಡಿ ಹೊಳೆಗೆ ಹಾದುಹೋಗುವ ಮಾರ್ಗ ಮಧ್ಯದಲ್ಲಿ ನಾಥನ್‌ ಎಂಬುವರ ಮನೆ ಸಮೀಪ 10 ಲಕ್ಷ ರೂ.ನಲ್ಲಿ ಸೇತುವೆ ನಿರ್ಮಿಸಿ, ನಾಮಫ‌ಲಕ ಹಾಕಲಾಗಿದೆ. ಈ ಫ‌ಲಕದಲ್ಲಿ ಕೇವಲ ಅಂದಾಜು ವೆಚ್ಚ, ಸೃಜಿಸಲಾದ ಮಾನವ ದಿನ ನಮೂದಿಸಲಾಗಿದೆಯೇ ಹೊರತು? ಅಂತಿಮವಾಗಿ ಕಾಮಗಾರಿಗೆ ತಗುಲಿದ ವೆಚ್ಚ? ಕೂಲಿ ಪಾವತಿ ನಮೂದಿಸಿಲ್ಲ. ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡುವಂತೆ ಸಂಬಂಧಪಟ್ಟ ಗ್ರಾಪಂಗೆ ನಿಯಮಾನುಸಾರ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೂ ಸಕಾಲದಲ್ಲಿ ಮಾಹಿತಿ ಒದಗಿಸದೆ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಜನರು ದೂರಿದ್ದಾರೆ.

ಅವ್ಯವಹಾರ ಆರೋಪ: ಗ್ರಾಪಂನಿಂದ ಕೈಗೊಂಡಿರುವ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕ, ಅವ್ಯವಹಾರದಿಂದ ಕೂಡಿದೆ. ಸೇತುವೆ ನಿರ್ಮಿಸಿದ ವರ್ಷದಲ್ಲೇ ಮೇಲ್ಭಾಗ ಬಿರುಕು ಬಿಟ್ಟಿದ್ದು, ಗುಂಡಿ ಬಿದ್ದಿದೆ. ಕಾಮಗಾರಿಯನ್ನು ಯಂತ್ರಗಳ ಸಹಾಯದಿಂದ ಮಾಡಲಾಗಿದೆ. ಡೀಸಿ, ಪಂಚಾಯತ್‌ ರಾಜ್‌ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳಲು ಗ್ರಾಮಸ್ಥರು ದೂರು ಸಲ್ಲಿಸಿದ್ದಾರೆ.

ಪಿಡಿಒ ವಿರುದ್ಧ ಕ್ರಮಕ್ಕೆ ಆಗ್ರಹ:  ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ವಿವಿಧ ಇಲಾಖಾ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿಯನ್ನು ಹೂಗ್ಯಂ, ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಜನರು ಪಿಡಿಒ ಬಾಲಗಂಗಾಧರ್‌ ವಿರುದ್ಧ ದೂರು ಸಲ್ಲಿಸಿದ್ದಾರೆ.

ಪಿಡಿಒ ಮೂಲಸ್ಥಾನ ದಿನ್ನಳ್ಳಿ. ಆದರೂ, ಮಾರ್ಟಳ್ಳಿ, ಹೂಗ್ಯಂ ಗ್ರಾಪಂನಲ್ಲಿ ಪ್ರಭಾರ ಅಧಿಕಾರಿಯಾಗಿದ್ದಾರೆ. ಸರಿಯಾಗಿ ಕಚೇರಿಗೂ ಬಾರದೆ ಹೂಗ್ಯಂ ಜನರು ಕೇಳಿದರೆ ಮಾರ್ಟಳ್ಳಿಯಲ್ಲಿ ಇದ್ದೇನೆ, ಮಾರ್ಟಳ್ಳಿಯವರು ಕೇಳಿದ್ರೆ ಹೂಗ್ಯಂನಲ್ಲಿ ಇದ್ದೇನೆ ಎಂದು ಸಬೂಬು ನೀಡುತ್ತಾರೆ.

Advertisement

ಹನೂರು ಪಟ್ಟಣದಲ್ಲಿ ವಾಸವಿರುವ ಇವರು, ಬಡಜನರಿಂದ ಲಂಚಕ್ಕಾಗಿ ಬೇಡಿಕೆ ಇಡುತ್ತಿದ್ದು, ಪ್ರತಿ ಕಾಮಗಾರಿಯ ಅನುಮೋದನೆಗೆ ಶೇ.5, ಸಾಮಗ್ರಿ ಸರಬರಾಜು ಬಿಲ್‌ ಪಾವತಿಸಲು ಶೇ.52 ಹಣಕ್ಕಾಗಿ ಬೇಡಿಕೆ ಇಡುತ್ತಾರೆ. ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಡೀಸಿಗೆ ನೀಡಿರುವ ದೂರಿನಲ್ಲಿ ಜನ ಆರೋಪಿಸಿದ್ದಾರೆ. ಈ ಕುರಿತು ಸ್ಪಷ್ಟನೆ ಕೇಳಲು ಪಿಡಿಒ ಬಾಲಗಂಗಾಧರ್‌ ಮೊಬೈಲ್‌ ನಂಬರ್‌ಗೆ ಕಾಲ್‌ ಮಾಡಿದ್ರೂ ಸ್ವೀಕರಿಸಿಲ್ಲ.

ಕಿರುಸೇತುವೆ ನಿರ್ಮಾಣ ಕಾಮಗಾರಿಯ ಮಾಹಿತಿ ಕೇಳಿದರೆ ನೀಡುತ್ತಿಲ್ಲ. ಕಾಮಗಾರಿ ಅವೈಜ್ಞಾನಿಕವಾಗಿದೆ, ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ. ಇಂತಹ ಹಲವು ಕಾಮಗಾರಿಗಳು ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ನಡೆದಿದೆ. ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.-ಪೌಲ್‌ರಾಜ್‌, ಕಡಬೂರು ನಿವಾಸಿ 

-ವಿನೋದ್‌ ಎನ್‌.ಗೌಡ

Advertisement

Udayavani is now on Telegram. Click here to join our channel and stay updated with the latest news.

Next